ಬೀದರ್/ಬಸವಕಲ್ಯಾಣ: ಸರ್ಕಾರಿ ಪಡಿತರ ಆಹಾರ ಧಾನ್ಯ ಗೋಡೌನಿನಲ್ಲಿ (ಸಗಟು ಮಳಿಗೆ) ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂ. ಮೌಲ್ಯದ ಅಕ್ಕಿ ಬ್ಯಾಗ್ಗಳು ಬೆಂಕಿಗೆ ಆಹುತಿಯಾದ ಘಟನೆ ಇಲ್ಲಿಯ ಸಸ್ತಾಪೂರ ಬಂಗ್ಲಾ ಬಳಿ ನಡೆದಿದೆ.
ಬಂಗ್ಲಾದ ಕೈಗಾರಿಕಾ ಪ್ರದೇಶದಲ್ಲಿಯ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋಡೌನಲ್ಲಿ ಶನಿವಾರ ಸಂಜೆ ಆಕಸ್ಮಿಕ ಬೆಂಕಿ ತಗುಲಿದ್ದು, ವಿದ್ಯುತ್ ಶಾರ್ಟ್ ಕಟ್ ನಿಂದ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಗೋಡೌನಲ್ಲಿ ಸಂಗ್ರಹಿಸಲಾಗಿದ್ದ ಸುಮಾರು 3 ಲಕ್ಷ ರೂ. ಮೌಲ್ಯದ 50 ಕೆ.ಜಿ.ಯ 400 ಅಕ್ಕಿ ಚೀಲಗಳು (200 ಕ್ವೀಂಟಾಲ್) ಬೆಂಕಿಗೆ ಸುಟ್ಟುಹೊಗಿವೆ. ಗೋಡೌನನಲ್ಲಿ ಇಡಲಾಗಿದ್ದ 500 ಕ್ವೀಟಾಲ ತೊಗರಿ ಬೆಳೆ ರಕ್ಷಿಸಲಾಗಿದೆ.
ಗೋಡೌನನ ಸಿಬ್ಬಂದಿಯಿಂದ ಸುದ್ದಿ ತಿಳಿದ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಯಿಂದಾಗಿ ಗೋಡೌನನಲ್ಲಿ ದಟ್ಟನೆಯ ಹೋಗೆ ಆವರಿಸಿದ್ದರಿಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಕೆಲ ಕಾಲ ಹರ ಸಾಹಸ ಪಡಬೇಕಾಯಿತು. ಅಗ್ನಿ ಶಾಮಕ ದಳ ಸಿಬ್ಬಂದಿ ಸಕಾಲಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದರಿಂದ ತೊಗರಿ ಬೆಳೆಗೆ ಹಾನಿಯಾಗಿಲ್ಲ.
ಆಹಾರ ಇಲಾಖೆ ನಿರೀಕ್ಷಕ ಶಿವಪುತ್ರಪ್ಪ ಹುಗಾರ ಹಾಗೂ ವೆಂಕಟ ಬಿರಾದಾರ, ವ್ಯವಸ್ಥಾಪಕ ಅಮೃತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.