ಅನಲ – ಕಿರು ಚಿತ್ರ ಪ್ರದರ್ಶನ..

0
162

ಬಳ್ಳಾರಿ /ಹೊಸಪೇಟೆ :”ಅಡುಗೆಮನೆ ಎಂಬುದು ಹೆಣ್ಣಿಗೆ ಅರಮನೆಯೂ ಹೌದು ಸೆರೆಮನೆಯೂ ಹೌದು, ಹೆಣ್ಣು ದುಡಿವ ಜಾಗ ಮಾತ್ರವಲ್ಲ ತನ್ನಿನಿಯನಿಗೆ ಪ್ರೀತಿಯಿಂದ ಊಟ ಬಡಿಸುವ ಸ್ಥಳ ಕೂಡ” ಎಂದು ಬರಹಗಾರ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.

ಅವರು ಹೊಸಪೇಟೆಯ ಭಾವೈಕ್ಯತಾ ವೇದಿಕೆಯ ಸಂತ ಶಿಶುನಾಳ ಷರೀಫರ ಸಭಾಂಗಣದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಆಯೋಜಿಸಿದ್ದ “ಅನಲ – ಕಿರು ಚಿತ್ರ ಪ್ರದರ್ಶನ” ದ ನಂತರ ನಡೆದ ಸಂವಾದದಲ್ಲಿ ಮಾತನಾಡಿದರು.

“ಅನಲ ಎಂದರೆ ಬೆಂಕಿ ಎಂದರ್ಥ, ಅರ್ಧ ಗಂಟೆಯ ಈ ಚಿತ್ರದಲ್ಲಿ ಬೆಂಕಿಯನ್ನು ಸೂಚ್ಯವಾಗಿ ತೋರಿಸಲಾಗಿದೆ, ಚಿತ್ರ ದುಡಿಯುವ ಮಧ್ಯಮ ವರ್ಗದ ಮಹಿಳೆಯ ತುಡಿತವನ್ನು ಸಮರ್ಥವಾಗಿ ತೋರಿಸುವಲ್ಲಿ ಗೆದ್ದಿದೆ. ಬೆಂಕಿ ಎಂದರೆ ಇದು ಹೆಣ್ಣಿನ ಮನಸ್ಸಿನ ಬೇಗುದಿ” ಎಂದರು.

“ಕಿರುಚಿತ್ರವು ಸಮರ್ಥ ಕಥೆಯೊಂದಿಗೆ ಸಾಕಷ್ಟು ಫ್ರೇಮ್ ಗಳಲ್ಲಿ ಸೂಚ್ಯವಾಗಿ ಸಾಕಷ್ಟು ವಿಚಾರಗಳನ್ನು ಹೇಳುವ ಪ್ರಯತ್ನ ಗುರಿ ತಲುಪಿದೆ, ಸಾಮಾನ್ಯ ಜನರು ಮಾತ್ರವಲ್ಲ ತಾಂತ್ರಿಕ ಅರಿವುಳ್ಳವರು ನೋಡಬೇಕಾದ ಕಿರುಚಿತ್ರ ಇದು” ಎಂದು ತರೀಕೆರೆ ಹೇಳಿದರು.

“ಚಿತ್ರದಲ್ಲಿ ಜಗದೀಶ್ ಎಂಬ ಹೆಸರಿನ ಪತಿಯ ಪಾತ್ರವನ್ನು ನಿಭಾಯಿಸಿರುವವರ ನಟನೆ ನೋಡುವವರ ಮನ ತಟ್ಟುತ್ತದೆ” ಎಂದು ಹೇಳಿದರು.

“ಅರ್ಧ ಗಂಟೆಯ ಕಿರುಚಿತ್ರದಲ್ಲಿ ವಿವಿಧ ದೃಶ್ಯಗಳನ್ನು ಸಾಂಕೇತಿಕವಾಗಿ ಬಳಸಲಾಗಿದೆ, ವಿಡಿಯೋಗ್ರಫಿ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಪೂರಕವಾದ ಚಿತ್ರವಿದು, ಸಂಜ್ಯೋತಿ ವಿ ಕೆ ಪತ್ನಿಯ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ” ಎಂದು ರಂಗಕರ್ಮಿ, ಭಾವೈಕ್ಯತಾ ವೇದಿಕೆಯ ಅಬ್ದುಲ್ಲಾ ಹೇಳಿದರು.

ಸಂವಾದದಲ್ಲಿ ಸಖಿ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ ಮಾತನಾಡಿದರು. ಕಿರುಚಿತ್ರದ ನಟಿ, ನಿರ್ದೇಶಕಿ ಸಂಜ್ಯೋತಿ ವಿ ಕೆ ಸಂವಾದದಲ್ಲಿ ಭಾಗವಹಿಸಿ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದರು.

ಸಹಾಯಕ ನಿರ್ದೇಶಕ ಕಿರಣ್ ಮಾರಶೆಟ್ಟಿಹಳ್ಳಿ ಚಿತ್ರ ಪ್ರದರ್ಶನಕ್ಕೂ ಮೊದಲು ಪ್ರಾಸ್ತಾವಿಕವಾಗಿ ಮಾತನಾಡಿದರು.

ಜೆಡಿಎಸ್ ಮುಖಂಡ ಶಫಿ ಬರಕಾತಿ, ಹೊಸಪೇಟೆಯ ಕಿರುಚಿತ್ರ ತಯಾರಕ ರಾಮಮೂರ್ತಿ, ನಗರಸಭೆ ಸದಸ್ಯೆ ನೂರ್ ಜಾನ್, ಸಾಹಿತಿ ಅಬ್ದುಲ್ ಹೈತೋ, ಬಾನು ತರೀಕೆರೆ ಮೊದಲಾದವರು ಭಾಗವಹಿಸಿದರು.
ಪತ್ರಕರ್ತ ಇಮಾಮ್ ಗೋಡೆಕಾರ ಸ್ವಾಗತಿಸಿ, ವಂದಿಸಿದರು.

*ಅನಲ ಕಿರುಚಿತ್ರ* ಮಧ್ಯಮ ವರ್ಗದ ದುಡಿಯುವ ಮಹಿಳೆಯ ಸುತ್ತ ಚಿತ್ರಿಸಲಾದ ಕಿರುಚಿತ್ರ. ಈ ಚಿತ್ರ 2016 – 17 ರ ಅತ್ಯುತ್ತಮ ಕಿರುಚಿತ್ರ ಎಂಬ ಪ್ರಶಸ್ತಿ ಪಡೆದಿದ್ದು, ರಾಜ್ಯವ್ಯಾಪಿ ವಿವಿಧ ಸಂಘಟನೆ ಸಂಸ್ಥೆಗಳು ಈ ಚಿತ್ರದ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದರು

LEAVE A REPLY

Please enter your comment!
Please enter your name here