ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ

0
184

ಬೆಂಗಳೂರು (ಮಹದೇವಪುರ) : ಕೆಆರ್‍ಐಡಿಎಲ್ ಗುತ್ತಿಗೆ ಸಂಸ್ಥೆಯಿಂದ ನಿರ್ಮಿಸಿರುವ ಶುದ್ದ ನೀರಿನ ಘಟಕದ ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಶಾಸಕ ಅರವಿಂದ ಲಿಂಬಾವಳಿ ದೂರಿದರು.

ಮಹದೇವಪುರ ಕ್ಷೇತ್ರದ ಹಿರಂಡಹಳ್ಳಿ ಗ್ರಾಮದಲ್ಲಿ ಕೊಳವೆ ಬಾವಿಗೆ ಶಾಸಕ ಅರವಿಂದ ಲಿಂಬಾವಳಿ ಚಾಲನೆ ನೀಡಿದರು.


ಮಹದೇವಪುರ ಕ್ಷೇತ್ರದ ಬಿದರಹಳ್ಳಿ ಜಿ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಬಸ್ ತಂಗುದಾಣ, ಕೊಳವೆ ಬಾವಿ, ಶುದ್ದ ಕುಡಿಯುವ ನೀರಿನ ಘಟಕ ಸೇರಿದಂತೆ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ನಂತರ ಮಾತನಾಡಿದ ಅವರು ಕೆಆರ್‍ಐಡಿಎಲ್ ಗುತ್ತಿಗೆ ಸಂಸ್ಥೆಯಿಂದ ಹಿರಂಡಹಳ್ಳಿ ಕಾಲೋನಿಯಲ್ಲಿ ನಿರ್ಮಿಸಿರುವ ಶುದ್ದ ಕುಡಿಯುವ ನೀರಿನ ಘಟಕದ ಕಾಮಗಾರಿ ಕಳಪೆಯಿಂದ ಕೂಡಿದ್ದು ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಘಟಕ ನಿರ್ಮಾಣ ಸಂದರ್ಭದಲ್ಲಿ ಅಧಿಕಾರಿಗಳು ನಿರ್ಲಕ್ಷಿಸಿರುವುದನ್ನು ಕಂಡು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು. ಅಲ್ಲದೆ ಕಾಮಗಾರಿಯ ಉದ್ಘಾಟನೆ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿ ನಿದಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಅಧಿಕಾರಿಗಳು ಕಾರ್ಯಕ್ರಮ ರೂಪಿಸಿರುವುದರಿಂದ ಬಿದರಹಳ್ಳಿ ಗ್ರಾ,ಪಂ ಸದಸ್ಯ ಎಂ.ಆರ್ ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದರು. ಶಾಸಕರು ಸಂಝಾಯಿಶಿ ನೀಡಿ ಮುಂದಿನ ದಿನಗಳಲ್ಲಿ ಈ ರೀತಿಯ ಅಚಾತುರ್ಯ ನಡೆಯದಂತೆ ಎಚ್ಚರಿಕೆವಹಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿದರು.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಎಸ್‍ಸಿಪಿ, ಆರ್‍ಡಿಪಿಆರ್, ಜಿಲ್ಲಾ ಪಂಚಾಯಿತಿಯ 90ಲಕ್ಷ ವೆಚ್ಚದ ಅನುದಾನದಲ್ಲಿ ಬಿದರಹಳ್ಳಿ ಹಾಗೂ ಮಾರಗೊಂಡನಹಳ್ಳಿಯ ವಿವಿಧ ಬಡಾವಣೆಗಳ ಕಾಂಕ್ರೀಟ್ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಗುತ್ತಿಗೆದಾರರು ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ತಿಳಿಸಿದರು.
ಹಿರಂಡಹಳ್ಳಿ ಮತ್ತು ಈಸ್ಟ್ ಪಾಯಿಂಟ್ ಕಾಲೇಜು ಹಾಗು ಬಿದರಹಳ್ಳಿ ಬೈಯಪ್ಪನಹಳ್ಳಿ, ಗುಂಡೂರು, ಮಾರಗೊಂಡನಹಳ್ಳಿ ಗ್ರಾಮಗಳಲ್ಲಿ ಬಸ್ ತಂಗುದಾಣಗಳಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಗಣೇಶ್, ತಾ.ಪಂ ಸದಸ್ಯ ಮುನಿರಾಜ್, ಗ್ರಾ.ಪಂ ಸದಸ್ಯ ಎಂ.ಆರ್ ವೆಂಕಟೇಶ್, ಮುಖಂಡರಾದ ಗೋವಿಂದ್, ಆನಂದ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here