ಇಂದಿನಿಂದ ಕೆರೆ ಸರ್ವೇ ಕಾರ್ಯ

0
236

ಬಳ್ಳಾರಿ /ಹೊಸಪೇಟೆ: ಐತಿಹಾಸಿಕ ಪುರಾತನ ಕಮಲಾಪುರ ಕೆರೆಯ ನಿರ್ಮಾತೃ ಕಟ್ಟೆ ಭರಮಪ್ಪ ಹಾಗು ಕೆರೆಗೆ ತನ್ನನ್ನೇ ಆಹುತಿ ನೀಡಿದ ಆತನ ಪತ್ನಿ ತಾಯಿ ಭಾಗೀರಥಿಗೆ ಪ್ರಥಮ ಪೂಜೆ ಸಲ್ಲಿಸಿ ಕೆರೆಯ ಪುನರುಜ್ಜೀವನ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಸ್ಥಳೀಯ ಗಂಡುಗಲಿ ಕುಮಾರ ರಾಮ ಯುವಸೇನೆ ಹಾಗೂ ಜನಸಂಗ್ರಾಮ ಪರಿಷತ್ ನೇತೃತ್ವದಲ್ಲಿ ಕಂದಾಯ ಇಲಾಖೆ ಹಾಗೂ ಗ್ರಾಮದ ಮುಖಂಡರು ಕೆರೆಗೆ ವಿಶೇಷ ಪೂಜೆ ಸಲ್ಲಿಸಿ ಸರ್ವೇ ಕಾರ್ಯಕ್ಕೆ ಚಾಲನೆ ನೀಡಿದರು.

ಒತ್ತುವರಿ ತೆರವಿಗಾಗಿ 476 ಎಕರೆ ಕೆರೆ ಪ್ರದೇಶದಲ್ಲಿ ಜಂಟೀ ಸರ್ವೆ ಕಾರ್ಯಕ್ಕಾಗಿ ಕೆರೆಯ ನಕಾಶೆಯ ಸಹಾಯದಿಂದ ನಿರ್ಧಿಷ್ಟ ಗಡಿಗುರುತುಗಳನ್ನು ಗುರುತಿಸಿಕೊಂಡರು.

ಕಂದಾಯ ಇಲಾಖೆಯ ಉಪ ತಹಶಿಲ್ದಾರ ಅಮರನಾಥ, ಕಂದಾಯ ನಿರೀಕ್ಷಕ ಅನಿಲ್ ಕುಮಾರ, ಗ್ರಾಮ ಲೆಕ್ಕಿಗ ರವಿಕುಮಾರ, ಭೂ ಮಾಪನ ಇಲಾಖೆಯ ಅಧಿಕಾರಿ ರಾಘವೇಂದ್ರ, ನೀರಾವರಿ ಇಲಾಖೆಯ ಅಭಿಯಂತರರಾದ ತಿಮ್ಮಪ್ಪ, ಯಲ್ಲಪ್ಪ ಇವರು ಪೋಲಿಸ್ ಬಂದೋಬಸ್ತಿನಲ್ಲಿ ಸರ್ವೇ ಕಾರ್ಯ ಆರಂಭಿಸಿದರು. ಗಂಡುಗಲಿ ಕುಮಾರ ರಾಮ ಯುವಸೇನೆಯ ಯುವಕರು, ಜನಸಂಗ್ರಾಮ ಪರಿಷತ್ ಮುಖಂಡ ಶಿವಕುಮಾರ ಮಾಳಗಿ, ಗ್ರಾಮದ ಮುಖಂಡರಾದ ಮುಸ್ತಪ್ಪ ನಾಯಕ, ಕುಪೇಂದ್ರ ನಾಯಕ, ಹೀರೆಕೇರಿ ಗಂಗಣ್ಣ, ಅಂಬಣ್ಣ, ವೀರೇಶ್, ಅಂಗಡಿ ನಾಗರಾಜ, ಕೃಷ್ಣಮೂರ್ತಿ, ಇತರರು ಇದ್ದರು.

ಕಳೆದ ಎರಡು ವರ್ಷದಿಂದ ಮುಂಗಾರು-ಹಿಂಗಾರು ವೈಪಲ್ಯಕ್ಕೆ ತುಂಗಭದ್ರಾ ಜಲಾಶಯ ನೀರಿನ ಸಂಗ್ರಹ ಪಾತಳ ಸೇರಿದ್ದು, ಈ ಬಾರಿ ಎಂದು ಕಂಡು ಅರಿಯದೇ ಬರಗಾಲ ಎದುರಾಗಿದೆ.ಬಳ್ಳಾರಿ,ಕೊಪ್ಫಳ ಹಾಗೂ ರಾಯಚೂರು ಜಿಲ್ಲೆ ಸೇರಿದಂತೆ ಆಂಧ್ರ ಹಾಗೂ ತೆಲಂಗಾಣದ ಲಕ್ಷಾಂತರ ಎಕರೆ ಭೂಮಿಗಳಿಗೆ ನೀರು ಉಣಿಸುತ್ತಿರುವ ಜಲಾಶಯ ನೀರಿಲ್ಲದೇ ಸೊರಗುತ್ತಿದ್ದು, ನದಿ ಪಾತ್ರದ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಮಳೆಗಾಲದಲ್ಲಿ ಜಲಾಶಯದಿಂದ ಹರಿದು ಹೋಗುವ ಹೆಚ್ಚುವರಿ ನೀರು ಸಮುದ್ರ ಸೇರುತ್ತಿದೆ. ಇದಕ್ಕೆ ಮೂಲ ಕಾರಣ ಜಲಾಶಯದಲ್ಲಿ ಸಂಗ್ರಹಗೊಂಡಿರುವ ಅಪಾರ ಪ್ರಮಾಣದ ಹೂಳು. ವರ್ಷದಿಂದ ವರ್ಷಕ್ಕೆ ಜಲಾಶಯ ಸಂಗ್ರಹ ಸಾಮಾರ್ಥ್ಯ ಕುಸಿಯುತ್ತಿದೆ. ಇದೇ ಮೇ.18ರಿಂದ ರೈತರು, ಖುದ್ಧು ತಾವೇ ಜಲಾಶಯದ ಹೂಳೆತ್ತಲು ಮುಂದಾಗುತ್ತಿದ್ದಾರೆ. ಈ ನಡುವೆ ಕಮಲಾಪುರ ಕೆರೆಯಲ್ಲಿ ನೀರು ಬತ್ತಿ ಹೋಗಿದ್ದು, ಜಿಲ್ಲಾಧಿಕಾರಿ ರಾಮಪ್ರಸಾತ್ ಮನೋಹರ್ ಈಚಗೆ ಕಮಲಾಪುರ ಕೆರೆಯನ್ನು ಪರಿಶೀಲಿಸಿ, ಸರ್ವೇ ಕಾರ್ಯ ನಡೆಸಿ, ಅಕ್ರಮ ತೆರವು ಹಾಗೂ ಕಮಲಾಪುರ ಹೂಳೆತ್ತಲು ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಕಂದಾಯ ಅಧಿಕಾರಿಗಳು ಹಾಗೂ ಗ್ರಾಮದ ರೈತ ಮುಖಂಡರು, ಸರ್ವೇ ಕಾರ್ಯಕ್ಕೆ ಅಣಿಯಾಗಿದ್ದು, ಶನಿವಾರದಿಂದ ಸರ್ವೇ ಕಾರ್ಯ ನಡೆಯಲಿದೆ.

LEAVE A REPLY

Please enter your comment!
Please enter your name here