ಕನಕಗಿರಿ ಗೋಪುರ ನಿರ್ಮಿಸಿದ್ದು ರಾಯಣರಾಜ..!

0
223

ಬಳ್ಳಾರಿ /ಹೊಸಪೇಟೆ:ವಿರೂಪಾಕ್ಷ ದೇವಾಲಯದ ಕನಕಗಿರಿ ಗೋಪುರವನ್ನು ನುಗ್ಗೇಹಳ್ಳಿಯ ರಾಯಣರಾಜ ಎಂಬುವರು ನಿರ್ಮಾಣ ಮಾಡಿದ್ದಾರೆ ಎಂದು ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ವೈ. ಸೋಮಶೇಖರ್ ತಿಳಿಸಿದ್ದಾರೆ.

ವಿಜಯನಗರದ ಇತಿಹಾಸದಲ್ಲಿ ಕ್ರಿ.ಶ.1516 ರಿಂದ 1573ರವರೆಗೆ ಶಾಸನಗಳಲ್ಲಿ ಈ ಮೇಲಿನ ಹೆಸರಾದ ರಾಯಣರಾಜ, ರಾಯೊಡೆಯ, ರಾಯನೃಪ ಎಂಬ ಹೆಸರುಗಳು ಉಲ್ಲೇಖವಾಗಿವೆ. ರಾಯಣರಾಜ ಎಂಬುವವನ ಉಲ್ಲೇಖವಿರುವ ಕೃಷ್ಣದೇವರಾಯನ ಕ್ರಿ.ಶ.1516ರ ಶಾಸನ ಹಾಗೂ ಅಚ್ಯುತರಾಯನ ಕ್ರಿ.ಶ.1532ರ ಶಾಸನಗಳು ಹಾಸನ ತಾಲೂಕಿನ ಬಿಟ್ಟುಗೊಂಡಹಳ್ಳಿ, ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ, ಆಂಧ್ರಪ್ರದೇಶದ ಚಂದ್ರಗಿರಿ ಬಳಿಯ ಕಾಳಹಸ್ತೀಶ್ವರ ದೇವಾಲಯ ಮತ್ತು ತಮಿಳುನಾಡಿನ ಕಂಚಿಯ ಅರುಳಾಳ್ ಪೆರುಮಾಳ್ ದೇವಾಲಯಗಳಲ್ಲಿವೆ. ಈ ಶಾಸನಗಳಲ್ಲಿ ರಾಯಣರಾಜ ಅವನ ತಂದೆ ತಿಮ್ಮರಾಜ ಮತ್ತು ತಾಯಿ ವಿರೂಪಾಂಬಿಕೆ ಹಾಗೂ ರಾಯಣರಾಜನ ಮಗ ಧನಂಜಯರಾಜನೆಂಬುದೂ ತಿಳಿದು ಬರುತ್ತದೆ. ತಿಮ್ಮರಾಜನು ಕೃಷ್ಣದೇವರಾಯನ ದಳವಾಯಿಯಾಗಿದ್ದು, ಇವರು ನುಗ್ಗೇಹಳ್ಳಿಯವರಾಗಿದ್ದು, ಆತ್ರೇಯ ಗೋತ್ರಕ್ಕೆ ಸೇರಿದವರೆಂಬುದೂ ಇದೇ ಶಾಸನದಿಂದ ದೃಢವಾಗುತ್ತದೆ. ಅಲ್ಲದೆ ನುಗ್ಗಿಹಳ್ಳಿ ನಾಡಿನ ಆಡಳಿತವನ್ನು ಕೃಷ್ಣದೇವರಾಯನ ಆಳ್ವಿಕೆಯಲ್ಲಿ ನೋಡಿಕೊಳ್ಳುತ್ತಿದ್ದ ರಾಯಣರಾಜನು ಅಚ್ಯುತರಾಯನ ಪಟ್ಟಾಭಿಷೇಕಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದನೆಂಬ ಸಂಗತಿಯನ್ನೂ ಡಾ.ಎಸ್.ವೈ. ಸೋಮಶೇಖರ್ ಗುರುತಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಾಚೀನ ದೇವಾಲಯಗಳಲ್ಲಿ ದೇವಾಲಯಗಳನ್ನು ಕಟ್ಟಿಸಿದವರು ತಮ್ಮದೇ ಶಿಲ್ಪ ಮತ್ತು ಶಾಸನಗಳನ್ನು ಕಂಬ ಇಲ್ಲವೇ ಗೋಪುರಗಳಲ್ಲಿ ಸ್ಥಾಪಿಸುವ ಪರಿಪಾಠ ಹಿಂದಿನಿಂದಲೂ ರೂಢಿಯಲ್ಲಿದೆ. ಇಂತಹ ಕೈಮುಗಿದು ನಿಂತ ಅನೇಕ ಶಿಲ್ಪಗಳು ಉಬ್ಬುಶಿಲ್ಪಗಳೇ ಆಗಿವೆ. ಇದೇ ರೀತಿ ಕನಕಗಿರಿ ಗೋಪುರದಲ್ಲಿ ರಾಯಣರಾಜನು ತನ್ನ ಶಿಲ್ಪ ಮತ್ತು ಅದರ ಪಕ್ಕದಲ್ಲಿ ತನ್ನ ಹೆಸರನ್ನೂ ನಮೂದಿಸಿದ್ದಾನೆ. ಹಾಗೆಯೇ  ತನ್ನ ತಂದೆ-ತಾಯಿಯರಾದ ತಿಮ್ಮರಾಜ ಮತ್ತು ವಿರೂಪಾಂಬಿಕೆಯರನ್ನು ಗೋಪುರದ ಮೇಲೆ ಗಾರೆಶಿಲ್ಪಗಳಲ್ಲಿ ಮೂಡಿಸುವ ಜೊತೆಗೆ ತಂದೆಯ ಹೆಸರನ್ನೂ ತಿಮ್ಮಣ ಎಂದು ದಾಖಲಿಸುವ ಮೂಲಕ ತನ್ನ ಮನೆತನವನ್ನು ಅಜರಾಮರಗೊಳಿಸಿದ್ದಾನೆ. ಹಾಗೆಯೇ ಹಾಸನ ಜಿಲ್ಲೆಯ ನುಗ್ಗೇಹಳ್ಳಿ ಮೂಲದ ರಾಯಣರಾಜನು ತನ್ನ ಶಿಲ್ಪವನ್ನೂ ಮಹಾದ್ವಾರದ ಕಂಬದ ಮೇಲೆ ಕೆತ್ತಿಸಿ ಅದರ ಪಕ್ಕದಲ್ಲಿ ತನ್ನ ಹೆಸರನ್ನೂ ನಮೂದಿಸುವ ಮೂಲಕ ಕನಕಗಿರಿ ಗೋಪುರವನ್ನು ತಾನೇ ಕಟ್ಟಿಸಿದೆನೆಂಬುದಕ್ಕೆ ಅಧಿಕೃತ ಕುರುಹನ್ನು ದಾಖಲಿಸುವ ಪ್ರಯತ್ನವನ್ನು ಮಾಡಿದ್ದಾನೆ. ಒಟ್ಟಿನಲ್ಲಿ ವಿರೂಪಾಕ್ಷ ದೇವಾಲಯದ ಕನಕಗಿರಿ ಗೋಪುರವನ್ನು ಕೃಷ್ಣದೇವರಾಯನ ಆಳ್ವಿಕೆ ಅವಧಿಯಲ್ಲಿ ಅಂದರೆ ಕ್ರಿ.ಶ. 1529 ಹೊತ್ತಿಗೆ ರಾಯಣರಾಜನು ನಿರ್ಮಿಸಿದನೆಂಬುದನ್ನು ಅವರು, ಖಚಿತಪಡಿಸಿದ್ದಾರೆ.

ಹಂಪೆಯ ಪ್ರಾಚೀನ ಹಾಗೂ ಪ್ರಸಿದ್ಧ ದೇಗುಲವೆಂದರೆ ಅದುವೇ ವಿರೂಪಾಕ್ಷ ದೇವಾಲಯವಾಗಿದೆ. ಈ ದೇವಾಲಯವು ಕ್ರಿ.ಶ. 699ರ ಹೊತ್ತಿಗೆ ಅಸ್ತಿತ್ವದಲ್ಲಿತ್ತು. ಇದು ಕಾಲಾಂತರದಲ್ಲಿ ಜೀರ್ಣೋದ್ಧಾರಗೊಳ್ಳುತ್ತಾ ಬಂದಿರುವುದು ಚರಿತ್ರಾರ್ಹ ಸಂಗತಿ. ಈ ದೇವಾಲಯವು ಗರ್ಭಗೃಹ, ಅಂತರಾಳ, ಸಭಾಮಂಟಪಗಳಿಂದ ಆರಂಭವಾಗಿ ಮುಂದೆ ನವರಂಗ, ಮಹಾಮಂಟಪ(ರಂಗಮಂಟಪ), ಬಲಿಪೀಠ, ದ್ವಜಸ್ತಂಭ, ದೀಪಸ್ತಂಭ, ಪರಿವಾರ ದೇವತಾಗೃಹಗಳು, ಅಡಿಗೆಸಾಲೆ ಮೊದಲಾದವುಗಳನ್ನು ಹೊಂದಿರುವುದು ನೈಜನೀಯ. ಅಂತೆಯೇ ಈ ದೇವಾಲಯದಲ್ಲಿ ಎರಡು ಪ್ರಾಕಾರಗಳು, ಮೂರು ಮಹಾದ್ವಾರ ಗೋಪುರಗಳನ್ನೂ ಕಾಣಬಹುದು. ಇವುಗಳನ್ನು ರಾಯಗೋಪುರಗಳೆಂದೇ ಕರೆಯುವುದು ರೂಢಿ. ಇವುಗಳನ್ನು ಪ್ರತ್ಯೇಕ ಹೆಸರುಗಳಿಂದಲೂ ಕರೆಯಲಾಗುತ್ತದೆ. ಪೂರ್ವಾಭಿಮುಖವಾಗಿ ಇರುವ ಮುಖ್ಯ ದ್ವಾರಗೋಪುರವನ್ನು ಶಾಸನಗಳಲ್ಲಿ ಹಿರಿಯಗೋಪುರವೆಂದೂ, ಇದು ಬಿಷ್ಟಪ್ಪಯ್ಯ ಗೋಪುರವೆಂದೂ ಕರೆಯಲಾಗುತ್ತದೆ. ಒಳಭಾಗದಲ್ಲಿ ಬರುವ ಇನ್ನೊಂದು ಚಿಕ್ಕದಾದ ಗೋಪುರವು ರಾಯಗೋಪುರವಾಗಿದ್ದು, ಇದನ್ನು ಕೃಷ್ಣದೇವರಾಯ ತನ್ನ ಪಟ್ಟಾಭಿಷೇಕದ ಸಂದರ್ಭದಲ್ಲಿ ಕಟ್ಟಿಸಿದನೆಂಬುದು ಶಾಸನದಿಂದ ದೃಢವಾಗುವುದು. ಹಾಗೆಯೇ ಮೂರನೆಯ ಹಾಗೂ ಉತ್ತರಾಭಿಮುಖವಾಗಿರುವ ಗೋಪುರವನ್ನು ಕನಕಗಿರಿ ಗೋಪುರವೆಂದು ಇಂದು ಕರೆಯಲಾಗುತ್ತದೆ. ಆದರೆ ಈ ಗೋಪುರದ ಹೆಸರು ಮತ್ತು ಅದರ ನಿರ್ಮಾಣದ ಬಗೆಗೆ ಇದುವರೆಗೆ ಖಚಿತವಾದ ಅಧ್ಯಯನಗಳು ನಡೆದಿರುವುದಿಲ್ಲ. ನಡೆದಿದ್ದರೂ ಅವುಗಳಿಗೆ ಅಧಿಕೃತ ಆಕರಗಳೊಂದಿಗೆ ಸ್ಟಷ್ಟಪಡಿಸಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಡಾ.ಎಸ್.ವೈ. ಸೋಮಶೇಖರ್ ವಿವಿಧ ಆಕರಗಳನ್ನು ಸಂಶೋಧನೆಗೆ ಒಳಪಡಿಸಿ ದೃಢಪಡಿಸಿದ್ದಾರೆ.

ಪ್ರಸ್ತುತ ಅಧ್ಯಯನಕ್ಕೆ ಕನಕಗಿರಿ ಗೋಪುರದ ಮಹಾದ್ವಾರದ ಕಂಬವೊಂದರ ಮೇಲಿರುವ ರಾಯಣರಾಜ ಎಂಬ ಶಾಸನ ಹಾಗೂ ಅದರ ಪಕ್ಕದಲ್ಲಿ ಕೆತ್ತಲಾದ ಸುಂದರವಾಗಿ, ಆಳವಾಗಿ ಕಡೆಯಲಾದ ಉಬ್ಬುಶಿಲ್ಪಗಳು ಹಾಗೂ ಇದಕ್ಕೆ ಪೂರಕವೆನ್ನುವಂತೆ ಇದೇ ಗೋಪುರದ ಉತ್ತರ ದಿಕ್ಕಿನಲ್ಲಿರುವ ಗಾರೆಗಚ್ಚಿನಲ್ಲಿ ಮಾಡಲಾದ ಕೈಮುಗಿದು ನಿಂತ ಸ್ತ್ರೀ ಮತ್ತು ಪುರುಷ ಶಿಲ್ಪಗಳು ಹಾಗೂ ಪುರುಷಶಿಲ್ಪದ ಕೆಳಗೆ ಬರೆಯಲಾದ ತಿಂಮಣ ಎಂಬ ಹೆಸರುಗಳ ಅಧ್ಯಯನಕ್ಕೆ ಇನ್ನಷ್ಟು ಮಾಹಿತಿಗಳು ಲಭ್ಯವಾಗಿ ಅಧ್ಯಯನದಲ್ಲಿ ಇನ್ನಷ್ಟು ಆಸಕ್ತಿಯನ್ನು ಕೆರಳಿಸಿದವೆಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ

LEAVE A REPLY

Please enter your comment!
Please enter your name here