ಕನ್ನಡ ಭಾಷೆಯನ್ನು ಉಳಿಸಿ

0
185

ದೇವನಹಳ್ಳಿ (ವಿಜಯಪುರ): ರಾಜ್ಯದಲ್ಲಿ ಅನ್ಯಭಾಷೆಗಳ ಪ್ರಭಾವದಿಂದಾಗಿ ಕನ್ನಡ ಭಾಷೆಗೆ ಕುತ್ತು ಬರುತ್ತಿದ್ದು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕರಿಗೆ ಕನ್ನಡದ ಹಿರಿಮೆಯ ಬಗ್ಗೆ ತಿಳಿಸಿಕೊಡಬೇಕಾದಂತಹ ಅನಿವಾರ್ಯತೆ ಎದುರಾಗಿದೆ ಎಂದು ಪುರಸಭಾ ಸದಸ್ಯ ಎಸ್. ಬಾಸ್ಕರ್ ಹೇಳಿದರು. ಪಟ್ಟಣದ ಪ್ರವಾಸಿಮಂದಿರಲ್ಲಿ ಕನ್ನಡ ಅಭಿಮಾನಿಗಳ ಸಂಘದಿಂದ ಶನಿವಾರ ಆಯೋಜಿಸಿದ್ದ ‘ಕನ್ನಡ ಜ್ಯೋತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಭಾಷೆ ತನ್ನದೆ ಆದ ಹಿರಿಮೆಯನ್ನು ಹೊಂದಿದೆ. ಪುರಾತನ ಇತಿಹಾಸವುಳ್ಳ ಏಕೈಕ ಲಿಪಿಯಿರುವ ಕನ್ನಡ ಭಾಷೆಯನ್ನು ಉಳಿಸುವಂತಹ ಹೊಣೆಗಾರಿಕೆ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ. ಸಮಾಜದಲ್ಲಿನ ಎಲ್ಲಾ ಲೋಪದೋಷಗಳನ್ನು ಸರಿಪಡಿಸಿ ಜನರನ್ನು ಉತ್ತಮವಾದ ದಿಕ್ಕಿನಲ್ಲಿ ಮುನ್ನಡೆಸುವ ನಿಟ್ಟಿನಲ್ಲಿ ಹೊರಬಂದಂತಹ ‘ಕನ್ನಡ ಚಲನಚಿತ್ರ’ ಗಳಿಂದ ಅನೇಕ ಮಂದಿ ತಮ್ಮ ಜೀವನಗಳನ್ನು ರೂಪಿಸಿಕೊಂಡಿರುವ ನಿದರ್ಶನಗಳಿವೆ, ಕನ್ನಡ ಭಾಷೆಯ ಉಳಿವಿಗೆ ಪೂರಕವಾಗಿರುವ ಎಲ್ಲಾ ಕಲಾಪ್ರಾಕಾರಗಳನ್ನು ಪ್ರೋತ್ಸಾಹ ಮಾಡಬೇಕು, ನಾಡು ನುಡಿ ಗಡಿಭಾಗಗಳಲ್ಲಿ ಕನ್ನಡ ಭಾಷೆಯ ಮೇಲೆ ನಡೆಯುವಂತಹ ದಬ್ಬಾಳಿಕೆಗಳನ್ನು ರಕ್ಷಣೆ ಮಾಡಬೇಕಾದರೆ ಕಾನೂನು ಚೌಕಟ್ಟಿನಲ್ಲಿ ಹೋರಾಟ ಮಾಡಬೇಕಾದಂತಹ ಅನಿವಾರ್ಯತೆ ಇದೆ ಎಂದರು. ಕನ್ನಡ ಅಭಿಮಾನಿಗಳ ಸಂಘದ ಅಧ್ಯಕ್ಷ ಕನ್ನಡ ಆಂಜಿನಪ್ಪ ಮಾತನಾಡಿ, ಕನ್ನಡ ಭಾಷೆಗೆ ಇರುವ ಹಿರಿಮೆಯ ಬಗ್ಗೆ ಸಾರುವಂತಹ ಕೆಲಸವನ್ನು ಮಾಡುತ್ತಿದ್ದರೂ ಅನ್ಯ ಭಾಷೆಗಳ ಪ್ರಭಾವದಿಂದಾಗಿ ಭಾಷಾ ಸಂಘರ್ಷಗಳು ಪದೇ ಪದೇ ನಡೆಯುತ್ತಿವೆ. ಗಡಿಭಾಗದಲ್ಲಿ ಕನ್ನಡಿಗರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆ. ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯ ದಬ್ಬಾಳಿಕೆಗಳನ್ನು ನಿಯಂತ್ರಣ ಮಾಡಬೇಕಾದರೆ ರಾಜ್ಯದಲ್ಲಿನ ಎಲ್ಲಾ ಕನ್ನಡಪರ ಸಂಘಟನೆಗಳು ಒಟ್ಟಾಗಬೇಕು. ರಾಜ್ಯದಲ್ಲಿನ ಜನತೆ ಸಂಘಟನೆಯಾದರೆ ರಾಜ್ಯದಲ್ಲಿನ ಬಹುತೇಕ ಸಮಸ್ಯೆಗಳು ಇತ್ಯರ್ಥವಾಗುತ್ತವೆ ಎಂದರು. ಭಾರತೀಯ ಮಾನವ ಹಕ್ಕುಗಳ ಜಾಗೃತಿ ವೇದಿಕೆ ತಾಲ್ಲೂಕು ಅಧ್ಯಕ್ಷ ಗಜೇಂದ್ರ ಮಾತನಾಡಿ, ರಾಜ್ಯದಲ್ಲಿ ಕನ್ನಡ ಭಾಷೆ ಆಡಳಿತ ಭಾಷೆಯಾಗಬೇಕು. ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ೭ ನೇ ತರಗತಿಯವರೆಗೆ ಕನ್ನಡ ಮಾಧ್ಯಮ ಶಿಕ್ಷಣ ಕಡ್ಡಾಯವಾಗಬೇಕು. ಎಲ್ಲಾ ಸಂಘಟನೆಗಳು ಭಾಷೆಯ ಉಳಿಗಾಗಿ ನಿಸ್ವಾರ್ಥವಾಗಿ ಸೇವಾ ಮನೋಭಾವದಿಂದ ಹೋರಾಟ ಮಾಡಿದಾಗ ಮಾತ್ರ ಭಾಷೆಯು ಬಲಗೊಳ್ಳುತ್ತದೆ ಎಂದರು. ಮಾನವ ಹಕ್ಕುಗಳ ರಕ್ಷಣಾ ವೇದಿಕೆ ನಾಗರಾಜು, ಜಿಲ್ಲಾಧ್ಯಕ್ಷ ಶ್ರೀನಿವಾಸರೆಡ್ಡಿ, ಹೇ.ಮಾ.ಗೋಪಾಲಗೌಡ, ಎಸ್.ರವಿಕುಮಾರ್, ಕನ್ನಡ ಮಂಜುನಾಥ್, ಗೌರವ ಕಾರ್ಯದರ್ಶಿ ಎಂ.ಮೂರ್ತಿ, ಮುನಿರಾಜು, ವಿ.ಮುನಿರಾಜು, ಪ್ರಶಾಂತ್.ಎನ್, ಮುಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here