ಕೆರೆ ಅಂಗಳದತ್ತ ತಲೆಹಾಕದ ಇಲಾಖೆ ಅಧಿಕಾರಿಗಳು

0
204

ಬಳ್ಳಾರಿ / ಹೊಸಪೇಟೆ: ಐತಿಹಾಸಿಕ ಕಮಲಾಪುರ ಕೆರೆ ಹೂಳೆತ್ತುವ ಕಾರ್ಯಾಚರಣೆ ಭರದಿಂದ ಸಾಗಿದ್ದು, ಬುಧವಾರ ಐದನೇ ದಿನಕ್ಕೆ ಕಾಲಿಟ್ಟಿದೆ. ಆದರೆ, ನಿರ್ವಹಣೆ ಹೊಣೆ ಹೊತ್ತಿರುವ ನೀರಾವರಿ ನಿಗಮದ ಯಾರೊಬ್ಬ ಅಧಿಕಾರಿಯೂ ಈವರಗೆ ಕೆರೆಯತ್ತ ಮುಖ ಮಾಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಬೃಹತ್ ನೀರಾವರಿ ಇಲಾಖೆಯ ಅಧೀನಕ್ಕೆ ಒಳ ಪಡುವ ಕರ್ನಾಟಕ ನೀರಾವರಿ ನಿಗಮದ ಯಾರೊಬ್ಬ ಅಧಿಕಾರಿಯು ಇಲ್ಲಿಯವರೆಗೂ ಕೆರೆಯ ಹೂಳೆತ್ತುವ ಕಾರ್ಯಾಚರಣೆಯತ್ತ ಒಮ್ಮೆಯೂ ಕೂಡ ಸುಳಿಯದೇ ದೂರ ಉಳಿದಿರುವ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ನೀರಾವರಿ ಇಲಾಖೆಯ ಕಮಲಾಪುರ ಕಛೇರಿಯ ಸಹಾಯಕ ಅಭಿಯಂತರ ಯಲ್ಲಪ್ಪ ಹೊಸಪೇಟೆ ತಾಲೂಕು ಸಹಾಯಕ ಕಾರ್ಯ ನಿರ್ವಹಾಕ ಅಭಿಯಂತರ ತಿಮ್ಮಪ್ಪ ಹಾಗೂ ಮುನಿರಬಾದ್‌ನ ಕಾರ್ಯಾ ನಿರ್ವಾಹಕ ಅಭಿಯಂತರ ನಾಗಭೂಷಣ ಇವರ್ಯಾರು, ಈವರಗೆ ಹೂಳೆತ್ತುವ ಕಾರ್ಯ ಪರಿಶೀಲನೆಗಾಗಿ ಖುದ್ದು ಭೇಟಿ ನೀಡಿಲ್ಲ. ಇಲಾಖೆಯ ಇಬ್ಬರು ನೀರುಗಂಟಿಗಳು ಹೊರತು ಪಡಿಸಿ ಇಲಾಖೆಯ ಯಾರೊಬ್ಬ ಅಧಿಕಾರಿ ಇತ್ತ ಮುಖ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೆರೆಯ ಸರ್ವೆ ಕಾರ್ಯ ಬಳಿಕ ಜಿಲ್ಲಾಧಿಕಾರಿ, ರಾಮಪ್ರಸಾತ್ ಮನೋಹರ್, ಹೂಳೆತ್ತುವ ಕುರಿತು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಚರ್ಚಿಸಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಆದೇಶಸಿದ್ದರು.
ಕೆರೆಯ ಹಿನ್ನೀರು ಪ್ರದೇಶದಲ್ಲಿ ಒತ್ತುವರಿ ಮತ್ತು ಅನಧಿಕೃತ ವ್ಯವಸಾಯ ಚಟುವಟಿಕೆಯನ್ನು ತಡೆಯುವ ಉದೇಶದಿಂದ ಕೆರೆಯ ಗಡಿ ಉದ್ದಕ್ಕೂ 3 ರಿಂದ 5 ಅಡಿ ಎತ್ತರದ ಗಡಿ ಗುರುತು ಕಲ್ಲುಗಳನ್ನು ಹಾಕಿ ಗಡಿ ಉದ್ದಕ್ಕೂ 1 ಮೀಟರ್ ಉದ್ದ ಒಂದುವರೆ ಮೀಟರ್ ಆಳದ ಕಂದಕವನ್ನು ತೋಡಿ ಕಂದಕಗಳ ಬದಿಯಲ್ಲಿ ನೇರಳೆ, ಕರಿಜಾಲಿ, ಹೊಂಗೆ ಮುಂತಾದ ಕೆರೆ ಅಂಗಳದಲ್ಲಿ ಬೆಳೆಯುವ ಸಸ್ಯಗಳನ್ನು ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ನೆಡುವಂತೆ ತಹಶೀಲ್ದಾರ ಹೆಚ್.ವಿಶ್ವನಾಥ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಎಲ್ಲಾ ಕೆಲಸ-ಕಾರ್ಯಗಳಿಂದ ಅಧಿಕಾರಿಗಳು ದೂರವೇ ಉಳಿದಿದ್ದಾರೆ.

ಜಿಲ್ಲಾಧಿಕಾರಿಗಳ ಆದೇಶವನ್ನೇ ಗಾಳಿಗೆ ತೂರಿದ ನೀರಾವರಿ ಇಲಾಖೆ ಅಧಿಕಾರಿಗಳು, ಯಾವುದೇ ಕೆಲಸವನ್ನು ಮಾಡದೇ, ಕೇವಲ ಸಬೂಬುಗಳನ್ನು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕೆರೆ ಹೂಳೆತ್ತುವ ಕಾರ್ಯಕ್ಕೆ ಎಲ್ಲಡೆಯಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ನೀರಾವರಿ ಇಲಾಖೆವತಿಯಿಂದ ಯಾವುದೇ ಸ್ಪಂದನೆ ದೊರೆಯದೇ ಕೆರೆ ಅಭಿವೃದ್ಧಿಗೆ ಹಿನ್ನಡೆ ಉಂಟಾಗಿದೆ ಎಂದು ಜನ ಸಂಗ್ರಾಮ ಪರಿಷತ್ ಮುಖಂಡ ಶಿವಕುಮಾರ ದೂರಿದ್ದಾರೆ.

ಐತಿಹಾಸಿಕ ಕೆರೆಯಲ್ಲಿ ಹೂಳೆತ್ತುವ ಕಾರ್ಯ ರೈತರಿಂದಲೇ ನಡೆಯುತ್ತಿದ್ದು, 476 ಎಕರೆ ವಿಸ್ತಾರದ ಕೆರೆಯಲ್ಲಿ ಕನಿಷ್ಠ ನಾಲ್ಕು ಅಡಿ ಆಳದ ಹೂಳು ತೆಗೆಯಲು 10 ಕೋಟಿ ರೂಪಾಯಿ. ವೆಚ್ಚ ತಗುಲಬಹುದು ಎಂದು ಅಂದಾಜಿಸಲಾಗಿದೆ. ಈ ಕುರಿತು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸಲಾಗಿದ್ದು, ಅನುದಾನ ಬಂದ ಬಳಿಕವೇ ಹೂಳೆತ್ತಲು ಕ್ರಮ ಕೈಗೊಳ್ಳಲಾಗುವುದು.ಅಧಿಕಾರಿ ಹಾಗೂ ಸಿಬ್ಬಂದಿಗಳ ಕೊರತೆಯಿಂದ ಸಕಾಲದಲ್ಲಿ ಕೆರೆಯ ಅಂಗಳಕ್ಕೆ ಹೋಗಲು ಸಾಧ್ಯವಾಗಿರುವುದಿಲ್ಲ. ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಬೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಕೆರೆಯ ಒತ್ತುವರಿಂದ ರಕ್ಷಿಸಲು ಕೆರೆಯ ಹಿನ್ನೀರು ಭಾಗದಲ್ಲಿ ಸುಮಾರು 5 ಕಿಲೋಮೀಟರ್ ಉದ್ದಕ್ಕೂ ಕಂದಕ ತೋಡಲು 12 ಲಕ್ಷ 30 ಸಾವಿರ ಅಂದಾಜು ವೆಚ್ಚವಾಗಲಿದ್ದು, ಅನುದಾನಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು  ಕರ್ನಾಟಕ ನೀರಾವರಿ ನಿಗಮದ ಕಾರ್ಯಾ ನಿರ್ವಾಹಕ ಅಭಿಯಂತರ ನಾಗಭೂಷಣ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here