ಕಲಾ ಕ್ಷೇತ್ರದಲ್ಲೂ ಐ ಮತ್ತು ಇಯರ್ ಕಲ್ಚರ್ ಅಪಾಯ ತಂದೊಡ್ಡುತ್ತಿದೆ…

0
143

ಬಳ್ಳಾರಿ/ಬಳ್ಳಾರಿ:ಇಂದು ನಾಟಕ, ಸಂಗೀತ ಮತ್ತು ಇತರೆ ಕಲೆಗಳು ಎಕ್ಸ್ ಕ್ಲೂಸಿವ್‍ನೆಸ್ ಕಡೆ ಹೋಗುತ್ತಿದ್ದು ಐ ಮತ್ತು ಇಯರ್ ಕಲ್ಚರ್ ಜಗ್ಗಾಟದಿಂದ ಜ್ಞಾನದ ಶಿಸ್ತು ಹೊಯ್ದಾಡುತ್ತಿದೆ ಎಂದು ಧಾರವಾಡ ರಂಗಾಯಣ ನಿರ್ದೇಶಕ ಡಾ.ಪ್ರಕಾಶ್ ಗರುಡ ಆತಂಕ ವ್ಯಕ್ತಪಡಿಸಿದರು.ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಎರಡು ದಿನ ನಡೆಯುವ ಅಂತರ್ ವಿಭಾಗೀಯ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿ, ಎಲ್ಲ ಕಾಲದಲ್ಲೂ ಇದು ಇತ್ತು. ಇದೀಗ ನಾವು ಎಲ್ಲ ಕಲೆಗಳಲ್ಲಿನ ಕಲಾವಿದರನ್ನು ಇವ್ರು ಇಂಥ ಜಾತಿ, ಇವ್ರು ಇಂಥ ಊರು, ಇವ್ರು ಇಂತಹ ರಾಜ್ಯದವರು ಅಂತ ಹೇಳುತ್ತ ಜಾತಿ, ಕುಲ, ಗೋತ್ರದ ಕಡೆ ಹೋಗುತ್ತಿದ್ದೇವೆ. ನಾಟಕ ಮತ್ತು ಸಂಗೀತ ಸೇರಿದಂತೆ ಯಾವುದೇ ಕಲಾ ಸಾಂಸ್ಕೃತಿಕ ಕ್ಷೇತ್ರ ಉಳಿಯಬೇಕಾದರೆ ಸಹೃದಯ ಪ್ರೇಕ್ಷಕ ಬೇಕು. ಹಾಗಾದಾಗ ಮಾತ್ರ ಕಲೆ ಉಳಿಯಲು ಸಾಧ್ಯ. ಶ್ರಮ ಸಂಸ್ಕೃತಿಯಲ್ಲಿ ಇಯರ್ ಸಂಸ್ಕೃತಿ ಕುಂಠಿತಗೊಳ್ಳುತ್ತಿದೆ. ಮಾಹಿತಿ ಲಭಿಸುತ್ತಿದೆ- ಮೀಮಾಂಸೆ ಸಿಗುತ್ತಿಲ್ಲ. ಸ್ಪರ್ಧೆಗಳಿದ್ದಾಗ ಮಾತ್ರ ಚುರುಕುಗೊಳ್ಳದೇ ಯುವ ಜನತೆ ದಿನದ ಅರ್ಧಗಂಟೆಯಾದರೂ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಬೇರೆ ಬೇರೆ ಪ್ರಾಕಾರಗಳಲ್ಲೂ ತೊಡಗಿಸಿಕೊಳ್ಳಬೇಕು. ನಟ ಮತ್ತು ನಟನೆಯಲ್ಲಿ ರಿಯಲ್ ಮತ್ತು ನಾನ್ ರಿಯಲ್ ಹೊಯ್ದಾಟದಲ್ಲಿ ಕಲಾವಿದರು ಬದುಕಬೇಕಾಗಿದೆ. ಕಲಾವಿದರು ಕಲೆಯಲ್ಲಿ ಅನುಸಂಧಾನ ಮಾಡಿಕೊಳ್ಳಬೇಕು. ಪ್ರಾಥಮಿಕ ಹಂತದಲ್ಲಿಯೇ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ತೊಡಗಿಸಿಕೊಳ್ಳಬೇಕು. ನಾವು ಪ್ರದರ್ಶಿಸುವ ಕಲೆ ಕೇವಲ ಮನರಂಜನೆ ಮಾತ್ರವಲ್ಲ, ಜೀವನ ದರ್ಶನ ನೀಡುವಂಥಾದ್ದಾಗಿರಬೇಕು ಎಂದರು.

ಕುಲಪತಿ ಪ್ರೊ.ಎಂ.ಎಸ್.ಸುಭಾಷ್, ಕುಲಸಚಿವ ಪ್ರೊ.ಎಸ್.ಎ.ಪಾಟೀಲ್ ಮತ್ತು ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ.ಟಿ.ಸುರೇಶ್ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಸ್ಪರ್ಧೆಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸಿ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು.ಸಿಂಡಿಕೇಟ್ ಸದಸ್ಯ ರಾಘವೇಂದ್ರ ಗುಂಡಿ ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ತಮ್ಮ ಹಾಗೂ ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಬಳಸಿಕೊಳ್ಳಬೇಕೆಂದು ಕರೆ ನೀಡಿದರು.
ಯುವ ಜನೋತ್ಸವದ ಸಂಯೋಜಕ ಡಾ.ಶಾಂತಾ ನಾಯ್ಕ ಎನ್ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕವೆಂದರೆ ವೈವಿಧ್ಯನಮೂನೆಯ ಜನ ಸಮುದಾಯದಿಂದ ಕೂಡಿದೆ. ದಲಿತ, ಶೋಷಿತ ಮತ್ತು ಅಲೆಮಾರಿ ಜನಾಂಗಗಳಿಂದಲೂ ಕರ್ನಾಟಕ ಸಮೃದ್ಧವಾಗಿದೆ. ಮೂಲ ಜಾನಪದ ಮತ್ತು ಕಲೆಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿ ಒಟ್ಟು 170ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಸಾಂಸ್ಕøತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ನಾಲ್ಕು ಪ್ರಕಾರಗಲ್ಲಿ ತಮ್ಮ ಪ್ರತಿಭೆಯನ್ನು ಈ ಎರಡು ದಿನಗಳ ಕಾಲ ಪ್ರದರ್ಶಿಸಲಿದ್ದಾರೆ ಎಂದು ಸಂಯೋಜಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here