ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

0
167

ಚಾಮರಾಜನಗರ/ ಕೊಳ್ಳೇಗಾಲ – ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಇಂದು ತಮ್ಮ ನಾಮಪತ್ರ ಸಲ್ಲಿಸಿದರು‌.
ನಗರದ ಬಸ್ ನಿಲ್ದಾಣದ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ತಮ್ಮ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸುವ ಮೂಲಕ ತಾಲ್ಲೂಕು ಕಛೇರಿಗೆ ತಲುಪಿದರು.
ಸಂಸದ ಆರ್.ಧ್ರುವನಾರಾಯಣ್, ಶಾಸಕ ಎಸ್.ಜಯಣ್ಣ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಯೋಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್ ಎ.ಆರ್.ಕೃಷ್ಣಮೂರ್ತಿ ಅವರಿಗೆ ನಾಮಪತ್ರ ಸಲ್ಲಿಸಲು ಸಾಥ್ ನೀಡಿದರು. ಎ.ಆರ್.ಕೆ ಚುನಾವಣಾಧಿಕಾರಿ ಫೌಜಿಯಾ ತರನ್ನುಮ್ ಅವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿ ಹೊರ ಬಂದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಈ ಬಾರಿ ನಾನು ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ ಎಂದರು‌. ಕಾಂಗ್ರೆಸ್ ಪಕ್ಷದ ಸಾಧನೆಗಳು, ಅಭಿವೃದ್ಧಿ ಕಾರ್ಯಗಳು ಗೆಲುವಿಗೆ ಪೂರಕವಾಗಿವೆ ಎಂದರು.
ಸಂಸದರಾದ ಧ್ರುವನಾರಾಯಣ್ ಮತ್ತು ಶಾಸಕ ಜಯಣ್ಣ ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಅವರಿಬ್ಬರ ಪ್ರೀತಿ ವಿಶ್ವಾಸ ನನ್ನ ಮೇಲಿದೆ. ನನಗೂ ಅವರ ಮೇಲೆ ವಿಶ್ವಾಸವಿದೆ ಎಂದರು. ಇದರೊಂದಿಗೆ ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು‌.
ಸಂಸದ ಧ್ರುವನಾರಾಯಣ್ ಮಾತನಾಡಿ ಇದು ಕಾಂಗ್ರೆಸ್ ಭದ್ರಕೋಟೆ. ಇಲ್ಲಿ ಅತ್ಯಂತ ಹೆಚ್ಚು ಬಾರಿ ಕಾಂಗ್ರೆಸ್ ಪಕ್ಷ ಗೆದ್ದಿದೆ. ಮುಖ್ಯಮಂತ್ರಿಗಳ ಒಳ್ಳೆಯ ಯೋಜನೆಯ ಜಾರಿಗೆ ತಂದಿದ್ದಾರೆ. ಎಲ್ಲಾ ವರ್ಗದ ಜನರಿಗೂ ತಲುಪುವಂತಹ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ‌. ಚಾಮರಾಜನಗರ ಜಿಲ್ಲೆಗೆ ಇತಿಹಾಸದಲ್ಲೇ ಅತಿ ಹೆಚ್ಚು ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು.
ಎ.ಆರ್.ಕೃಷ್ಣಮೂರ್ತಿ ಅವರಿಗೆ ಒಳ್ಳೆಯ ಕುಟುಂಬದ ಹಿನ್ನಲೆಯಿದೆ. ಎರಡು ಬಾರಿ ಶಾಸಕರಾಗಿದ್ದ ಅನುಭವ ಇದೆ. ಈ ಬಾರಿ ಅತ್ಯಂತ ಹೆಚ್ಚು ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು‌.
ಇಲ್ಲಿ ಯಾವುದೇ ಭಿನ್ನಾಭಿಪ್ರಾಯ, ಬಂಡಾಯ ಇಲ್ಲ. ಮಾಜಿ ಶಾಸಕ ಬಾಲರಾಜು, ಕಿನಕಹಳ್ಳಿ ರಾಚಯ್ಯ, ಡಿ.ಎನ್.ನಟರಾಜು ಅವರ ಮನವೊಲಿಸಲಾಗಿದೆ. ನೂರಕ್ಕೆ ನೂರು ಎಲ್ಲರೂ ಪಕ್ಷದಲ್ಲೇ ಉಳಿದು ಒಂದೆರಡು ದಿನಗಳಲ್ಲಿ ಅವರೂ ಸಹ ಪ್ರಚಾರ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ ಎಂದು ಹೇಳಿದರು‌.
ಬೇರೆ ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಾರೆ ಹೊರತು ಕಾಂಗ್ರೆಸ್ ಕಾರ್ಯಕರ್ತರು ಹೊರ ಹೋಗುವುದಿಲ್ಲ. ಹಾಗಾಗಿ ಈ ಬಾರಿಯೂ ಸಹ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಗಳಿಸಲಿದೆ ಎಂದು ಹೇಳಿದರು.
ನಾಮಪತ್ರ ಸಲ್ಲಿಕೆ ಹಿನ್ನಲೆಯಲ್ಲಿ ಡಿವೈಎಸ್ಪಿ ಪುಟ್ಟಮಾದಯ್ಯ ನೇತೃತ್ವದಲ್ಲಿ ತಾಲ್ಲೂಕು ಕಛೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಶಸ್ತ್ರ ಸೀಮಾ ಬಲ, ಕೆ.ಎಸ್.ಆರ್.ಪಿ, ಡಿ.ಆರ್ ಪೊಲೀಸ್ ತುಕಡಿಗಳು ಹಾಗೂ ಉಪವಿಭಾಗದ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.

LEAVE A REPLY

Please enter your comment!
Please enter your name here