ಕಾಮಗಾರಿ ಗುಣಮಟ್ಟ ಕಾಪಾಡುವುದು ಜನರ ಕರ್ತವ್ಯ

0
142

ಚಿಕ್ಕಬಳ್ಳಾಪುರ/ಗುಡಿಬಂಡೆ: ತಮ್ಮ ಗ್ರಾಮಗಳಲ್ಲಿ ನಡೆಯುವಂತಹ ವಿವಿಧ ಕಾಮಗಾರಿಗಳ ಗುಣಮಟ್ಟವನ್ನು ಕಾಪಾಡುವಂತೆ ನೋಡಿಕೊಳ್ಳುವುದು ಜನರ ಮುಖ್ಯ ಕರ್ತವ್ಯವೆಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
ತಾಲ್ಲೂಕಿನ ಸೋಮೇನಹಳ್ಳಿ ಗ್ರಾಮದಿಂದ ಕಾಟೇನಹಳ್ಳಿ ಬಿ.ಬಿ.ರಸ್ತೆಗೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಡಾಂಬಾರು ಹಾಕುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ತಮ್ಮ ಗ್ರಾಮಗಳಲ್ಲಿ ಸರ್ಕಾರದಿಂದ ನಡೆಯುವಂತಹ ರಸ್ತೆ, ಚರಂಡಿ ಸೇರಿದಂತೆ ಹಲವಾರು ಕಾಮಗಾರಿಗಳನ್ನು ಮಾಡುವಂತಹ ಸಂದರ್ಭದಲ್ಲಿ ತಮ್ಮ ಮನೆ ಕೆಲಸ ಎಂಬಂತೆ ಭಾವಿಸಿ ಅದರ ಗುಣಮಟ್ಟ ಕಾಪಾಡಬೇಕು. ಗುತ್ತಿಗೆದಾರರೇನಾದರೂ ಕಳಪೆ ಕಾಮಗಾರಿ ಮಾಡುತ್ತಿದ್ದರೇ ಕೂಡಲೇ ಅವರಿಗೆ ಎಚ್ಚರಿಕೆ ನೀಡಿ ಕಾಮಗಾರಿಯನ್ನು ಗುಣಮಟ್ಟವಾಗಿ ಮಾಡುವಂತೆ ಮಾಡಬೇಕು. ಸೋಮೇನಹಳ್ಳಿ ಗ್ರಾಮದಿಂದ ಕಾಟೇನಹಳ್ಳಿ ಗ್ರಾಮದ ಮೂಲಕ ಸುಮಾರು 4.06 ಕಿ.ಮೀ ಉದ್ದದ ಡಾಂಬರು ರಸ್ತೆಗೆ ಸುಮಾರು 288.57 ಲಕ್ಷ ವೆಚ್ಚವಾಗಲಿದೆ. ಗುತ್ತಿಗೆ ಪಡೆದ ಗುತ್ತಿಗೆದಾರ ೫ ವರ್ಷಗಳ ಕಾಲ ರಸ್ತೆಯ ನಿರ್ವಹಣೆ ಮಾಡಬೇಕು, ನಂತರ 6ನೇ ವರ್ಷದಲ್ಲಿ ಪುನಃ ರಸ್ತೆಗೆ ಡಾಂಬರು ಹಾಕಿ ಸರ್ಕಾರಕ್ಕೆ ನೀಡಬೇಕಿದೆ. ರಾಜ್ಯ ಸರ್ಕಾರ ಗ್ರಾಮೀಣ ಭಾಗಗಳಲ್ಲಿನ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಗ್ರಾಮಗಳಲ್ಲಿನ ರಸ್ತೆ, ಚರಂಡಿ, ಕುಡಿಯುವ ನೀರು ಮೊದಲಾದ ಸೌಕರ್ಯಗಳನ್ನು ಒದಗಿಸುತ್ತಿದೆ ಎಂದರು.
ನಂತರ ಗುಡಿಬಂಡೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಡಶಾಲಾ ಮುಖ್ಯ ಶಿಕ್ಷಕರ ಸಭೆಯಲ್ಲಿ ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಕುಂಠಿತವಾಗಿರುವುದರ ಬಗ್ಗೆ ಚರ್ಚಿಸಲಾಯಿತು. ಈ ವೇಳೆ ಮುಖ್ಯ ಶಿಕ್ಷಕರು ತಮ್ಮ ಶಾಲೆಗಳಲ್ಲಿ ಕನ್ನಡ, ಇಂಗ್ಲೀಷ್ ಭಾಷೆಯ ಶಿಕ್ಷಕರು ಕಡಿಮೆಯಿರುವುದರಿಂದ ಫಲಿತಾಂಶ ಕಡಿಮೆಯಾಗಿದೆ. ಪ್ರಸ್ತುತ ವರ್ಷದಲ್ಲಿ ಎಲ್ಲಾ ಶಿಕ್ಷಕರು ನೇಮಕವಾಗಿದ್ದು, ಈ ಬಾರಿ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿ ಫಲಿತಾಂಶ ದೊರಕಿಸಿಕೊಡುತ್ತೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ನೀವು ಏನಾದರೂ ಮಾಡಿ ನನ್ನ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶ ದೊರಕಿಸಿಕೊಡಬೇಕು. ನಿಮಗೆ ಶಿಕ್ಷಕರ ಸಮಸ್ಯೆಯಾಗಲಿ ಇನ್ನಾವುದೇ ಸಮಸ್ಯೆಯಿರಲಿ ನನ್ನ ಬಳಿ ಹೇಳಿ ಬಗೆಹರಿಸುತ್ತೇನೆ ಎಂದರು.
ಇದೇ ವೇಳೆ ಪಟ್ಟಣದ ತಾಲ್ಲೂಕು ಪಂಚಾಯತಿಯಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ನಂತರ ಪಟ್ಟಣದ ಮುಖ್ಯರಸ್ತೆ ಅಗಲೀಕರಣದ ವೇಳೆ ಮನೆ ಕಳೆದುಕೊಂಡವರಿಗೆ ನಿವೇಶನ ನೀಡಲು ಉದ್ದೇಶಿಸಿರುವ ಸುರಸದ್ಮಗಿರಿ ಬೆಟ್ಟದ ತಪ್ಪಲಿನಲ್ಲಿರುವ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಕಾರ್ಯಪಾಲಕ ಅಭಿಯಂತರ ನರಸಿಂಹರೆಡ್ಡಿ, ತಾ.ಪಂ. ಉಪಾಧ್ಯಕ್ಷ ಬೈರಾರೆಡ್ಡಿ, ಪ.ಪಂ. ಅಧ್ಯಕ್ಷ ಚಂದ್ರಶೇಖರನಾಯ್ಡು, ಮುಖಂಡರಾದ ಕೃಷ್ಣೇಗೌಡ, ಅಮರ, ಹೆಚ್.ನರಸಿಂಹರೆಡ್ಡಿ, ಗುತ್ತಿಗೆದಾರ ರಾಜಾರೆಡ್ಡಿ, ಸೋಮೆನಹಳ್ಳಿ ಗ್ರಾ.ಪಂ. ಸದಸ್ಯರಾದ ಶಶಿಕುಮಾರ್, ಗಾಯತ್ರಮ್ಮ, ವೆಂಕಟಲಕ್ಷ್ಮಮ್ಮ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪದ್ಮಾವತಿ ಮೊಗೆರಾ, ಪ್ರೌಢಶಾಲೆಯ ಮುಖ್ಯಶಿಕ್ಷಕರು ಸೇರಿದಂತೆ ಹಲವರು ಇದ್ದರು

LEAVE A REPLY

Please enter your comment!
Please enter your name here