ಜಿಲ್ಲಾಧಿಕಾರಿಗಳ ದಿಢೀರ್ ಭೇಟಿ..!?

0
163

ಶಿವಮೊಗ್ಗ: ಆಸ್ಪತ್ರೆಯ ಸಮರ್ಪಕ ನಿರ್ವಹಣೆಯಲ್ಲಿ ವಿಫಲರಾದ ಶಿಕಾರಿಪುರ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ಹಾಗೂ ಶುಶ್ರೂಷಾಧೀಕ್ಷಕ ಲೀಲಾಬಾಯಿ ವೈ.ಎಲ್. ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಅವರು ಸೂಚನೆ ನೀಡಿದರು.ಅವರು ಸೋಮವಾರ ಶಿಕಾರಿಪುರ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಎಲ್ಲಾ ನ್ಯೂನತೆಗಳನ್ನು ಒಂದು ವಾರದ ಒಳಗಾಗಿ ಸರಿಪಡಿಸುವಂತೆ ಆದೇಶ ನೀಡಿದರು.ಆಸ್ಪತ್ರೆಯಲ್ಲಿ ಸ್ವಚ್ಛತೆಯನ್ನು ಕಾಪಾಡದಿರುವುದು, ಕಚೇರಿ ದಾಖಲಾತಿಗಳನ್ನು ಸಮಪರ್ಕವಾಗಿ ನಿರ್ವಹಿಸದಿರುವುದು ಸೇರಿದಂತೆ ಹಲವಾರು ನ್ಯೂನತೆಗಳು ಕಂಡು ಬಂದ ಹಿನ್ನೆಲೆಯಲ್ಲಿ ವೈದ್ಯಾಧಿಕಾರಿಗಳನ್ನು ಜಿಲ್ಲಾಧಿಕಾರಿ ಅವರು ತರಾಟೆಗೆ ತೆಗೆದುಕೊಂಡರು.ಇದೇ ರೀತಿ ಆಸ್ಪತ್ರೆಯನ್ನು ಸ್ವಚ್ಛವಾಗಿಡಲು ವಿಫಲರಾಗಿರುವ ನಾನ್ ಕ್ಲಿನಿಕಲ್ ಮೇಲ್ವಿಚಾರಕ ಮಹಾದೇವ ವಿರುದ್ಧ ಶಿಸ್ತುಕ್ರಮ ಜರುಗಿಸಿ ಬದಲೀ ವ್ಯವಸ್ಥೆ ಮಾಡುವಂತೆ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗ ಸೂಚನೆ ನೀಡಿದರು.ಪುರುಷರ ಮತ್ತು ಮಹಿಳೆಯರ ವಾರ್ಡ್‍ಗಳಿಗೆ ಸೂಕ್ತ ಬೆಳಕಿನ ವ್ಯವಸ್ಥೆ ಹಾಗೂ ಫ್ಯಾನ್ ವ್ಯವಸ್ಥೆಯನ್ನು ಆದಷ್ಟು ಬೇಗನೇ ಕಲ್ಪಿಸಬೇಕು. ಕಾರಿಡಾರ್ ಮತ್ತು ಆವರಣದಲ್ಲಿ ಸ್ವಚ್ಚತೆಗೆ ಕ್ರಮ ಕೈಗೊಳ್ಳಬೇಕು. ವೈದ್ಯರ ಕೊಠಡಿಗಳಲ್ಲಿ ಅನಗತ್ಯವಾದ ಅಲ್ಮೇರಾಗಳು ತುಂಬಿದ್ದು, ಅವುಗಳನ್ನು ತೆರವುಗೊಳಿಸಿ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಮಾತ್ರ ಇರಿಸಿಕೊಳ್ಳಬೇಕು. ಅನಗತ್ಯ ವಾಲ್ ಪೋಸ್ಟರ್‍ಗಳನ್ನು ತೆರವುಗೊಳಿಸಬೇಕು. ದಂತ ವೈದ್ಯರಿಗೆ ಅಗತ್ಯವಿರುವ ತಪಾಸಣಾ ಉಪಕರಣಗಳನ್ನು ಒದಗಿಸಬೇಕು. ಇದೇ ರೀತಿ ಕಣ್ಣು ಪರೀಕ್ಷಿಸುವ ಅಂತರವನ್ನು ನಿಗದಿತ ಮಾನದಂಡದ ಪ್ರಕಾರ ನಿರ್ವಹಿಸಬೇಕು ಎಂದರು.

ಎಕ್ಸರೇ ವಿಭಾಗದಲ್ಲಿ ಈಗಾಗಲೇ ಹೊಸದಾಗಿ ಬಂದಿರುವ ಡಿಜಿಟಲ್ ಮೆಷೀನ್ ಆದಷ್ಟು ಬೇಗನೇ ಅಳವಡಿಸಬೇಕು. ಎಕ್ಸ್‍ರೇ ಕೊಠಡಿಯಲ್ಲಿ ಲೈಟ್ ಮತ್ತು ಫ್ಯಾನ್ ಅಳವಡಿಕೆ, ಡ್ರೈಯರ್ ಅಳವಡಿಕೆ ಹಾಗೂ ಕರ್ಟನ್ ಬಳಸಲು ಸೂಚನೆ ನೀಡಿದರು. ಪ್ರಯೋಗಾಲಯದಲ್ಲಿ ರಕ್ತವನ್ನು ಬೇರೆಯಾಗಿಯೇ ಸಂಗ್ರಹಿಸಬೇಕು. ತುರ್ತುನಿಗಾ ವಿಭಾಗದಲ್ಲಿ ವ್ಯವಸ್ಥೆಯನ್ನು ಸರಿಪಡಿಸಬೇಕು. ಹಳೆಯ ಟ್ರೇಗಳ ಬದಲಾವಣೆ, ಡ್ರೆಸ್ಸಿಂಗ್ ಕೊಠಡಿಯಲ್ಲಿ ಡ್ರೆಸ್ಸಿಂಗ್ ಮಾಡುವ ಟೇಬಲ್ ಮೇಲೆ ಪ್ಲಾಸ್ಟಿಕ್ ಶೀಟ್‍ಗಳ ಬದಲಾವಣೆ, ಸಿಂಕ್ ಬಳಿ ಸೋಪ್ ಮತ್ತು ಟವೆಲ್ ಇರಿಸುವಂತೆ ತಿಳಿಸಿದರು.ಇದೇ ರೀತಿ ಎಲ್ಲಾ ತಾಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಉದ್ದೇಶಿಸಲಾಗಿದೆ. ಆರೋಗ್ಯ ಸೇವೆಯ ಗುಣಮಟ್ಟವನ್ನು ಉತ್ತಮಪಡಿಸಲು ಎಲ್ಲರೂ ಸಹಕರಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here