ಡಾ.ಅಂಬೇಡ್ಕರ್ ದಲಿತ ನಾಯಕ, ಸಂವಿಧಾನ ಶಿಲ್ಪಿ ಎಂಬುದಕ್ಕಷ್ಟೇ ಸೀಮಿತವಲ್ಲಾ..

0
276

ಬಳ್ಳಾರಿ /ಹೊಸಪೇಟೆ:
20ನೇ ಶತಮಾನದ ಶ್ರೇಷ್ಠ ಮುಕ್ತ ಚಿಂತಕರೆನ್ನಿರುವ ಅಂಬೇಡ್ಕರ್ ಅವರನ್ನು ದಲಿತ ನಾಯಕ, ಸಂವಿಧಾನ ಪಿತೃ ಎಂಬುದಕ್ಕಷ್ಟೇ ಸೀಮಿತಗೊಳಿಸದೇ ಶೋಷಿತರ ನಾಯಕ, ರಾಷ್ಟ್ರನಾಯಕ ಎಂದು ಬಿಂಬಿಸಬೇಕಾಗಿದೆ ಎಂದು ಖ್ಯಾತ ಚಿಂತಕ ಪ್ರೊ.ಸಿದ್ಧಲಿಂಗಯ್ಯ ಹೇಳಿದರು.

ಕನ್ನಡ ವಿಶ್ವವಿದ್ಯಾಲಯ ಶ್ರೀ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಹಾಗೂ ಪರಿಶಿಷ್ಟ ಪಂಗಡಗಳ ಸಮಗ್ರ ಅಧ್ಯಯನ ಕೇಂದ್ರದವತಿಯಿಂದ ಶನಿವಾರ ಏರ್ಪಡಿಸಿದ್ದ ಅಂಬೇಡ್ಕರ್ ಅವರನ್ನು ಓದುವುದು ಹೇಗೆ? ಎಂಬ ವಿಷಯ ಕುರಿತು ಎರಡು ದಿನಗಳ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರನ್ನು ದಲಿತರ ನಾಯಕ, ಸಂವಿಧಾನ ಪಿತೃ ಎಂಬುದಕ್ಕಷ್ಟೇ ಸೀಮಿತಗೊಳಿಸಬಾರದು. ಶೋಷಿತರ ನಾಯಕ, ರಾಷ್ಟ್ರನಾಯಕ ಎಂದು ಬಿಂಬಿಸಬೇಕಾಗಿದೆ. ಕಾರ್ಮಿಕರಿಗೆ, ರೈತವರ್ಗಕ್ಕೆ, ಕೂಲಿಕಾರರಿಗೆ, ಮಹಿಳೆಯರಿಗಾಗಿ ಅವರು ನೀಡಿದ ಕೊಡುಗೆಯನ್ನು ಚರ್ಚಿಸಬೇಕಾಗಿದೆ. ಸಮಗ್ರಶೋಷಿತರು ಅವರ ಕೊಡುಗೆಯನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸುತ್ತ, ಇತ್ತೀಚಿನ ದಿನಗಳಲ್ಲಿ ವಿಶ್ವದಾದ್ಯಂತ ಭಾರತವನ್ನು ಒಳಗೊಂಡು ಅಂಬೇಡ್ಕರ್ ಅವರನ್ನು ಕುರಿತ ಧೋರಣೆ ಬದಲಾಗಿ, ಗೌರವಿಸುವುದನ್ನು ಕಾಣುತ್ತಿದ್ದೇವೆ. ಎಡ ಹಾಗೂ ಬಲಪಂಥಿಯರು ಎಲ್ಲರಿಗೂ ಅಂಬೇಡ್ಕರ್ ನೆಚ್ಚಿನ ವ್ಯಕ್ತಿ ಎನ್ನಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಅಂಬೇಡ್ಕರ್ ಬಗ್ಗೆ ಉತ್ಪ್ರೇಕ್ಷೆಗಳನ್ನು, ಐತಿಹ್ಯಗಳ ಮೇಲೆ ನಂಬಿಕೆ ಇಡದೇ ಅಧಿಕೃತವಾಗಿ ಬರೆದ ಅವರ ಪುಸ್ತಕಗಳನ್ನು ಓದುವುದೇ ಸೂಕ್ತ. ಅಂಬೇಡ್ಕರ್ ಅವರ ಸಮೀಪವರ್ತಿಗಳಾದ ನಾನಕ್‌ಚಂದ್ ರತ್ತು, ಶಂಕರಾನಂದ ಶಾಸ್ತ್ರಿ, ಭಗವಾನ್ ದಾಸ್ ಬರೆದ ಪುಸ್ತಕ ಸೇರಿದಂತೆ ಅಮೆರಿಕ ಮಹಿಳೆ ಏಲಿಯೆಟ್ ಜೆಲೆನಿಯೋಲ್ ಹಾಗೂ ಜರ್ಮನಿ ಮಹಿಳೆ ಜೈಲ್ ಹೋಂಮೇಟ್ ಅಂಬೇಡ್ಕರ್ ಕುರಿತು ಬರೆದ ಪುಸ್ತಕಗಳನ್ನು ಓದಿರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕುಲಪತಿ ಡಾ. ಮಲ್ಲಿಕಾ ಎಸ್. ಘಂಟಿ, ಮಾತನಾಡಿ, ಅಂಬೇಡ್ಕರ್ ಅವರನ್ನು ಬ್ರಿಟೀಷ್ ಆಡಳಿತದ ಪರ ಹಿಂಸಾವಾದಿ ಎನ್ನುವ ರೀತಿಯಲ್ಲಿ ಬಿಂಬಿಸುತ್ತಿದ್ದ ಮತೀಯವಾದಿಗಳು ಇಂದು ಅಂಬೇಡ್ಕರ್ ಅವರನ್ನು ದೇಶಭಕ್ತ ಎಂದು ಹೇಳುತ್ತಿವೆ.  ಮುಂಚೂಣಿಯಲ್ಲಿರುವ ಯಾವ ಮಹಿಳಾ ಚಳುವಳಿಗಾರರು ಅಂಬೇಡ್ಕರ್ ಹೆಸರನ್ನು ಯಾಕೆ ಹೇಳಲಿಲ್ಲ ಎಂದರೆ ಜಾತಿಗಳು ನಮ್ಮನ್ನು ಅಷ್ಟೇ ಸಾಂಸ್ಕೃತಿಕವಾಗಿ ಕಟ್ಟಿಹಾಕಿವೆ. ಜಾತಿ ಕಾರಣದಿಂದ ನಾವು ಅಂಬೇಡ್ಕರ್ ಅವರ ವೈಚಾರಿಕ ಸಂಗತಿಗಳಿಗೆ ಮುಖಾಮುಖಿಯಾಗಲು ಸಾಧ್ಯವಾಗಿಲ್ಲ ಎಂದು ವಿಷಾಧಿಸಿದರು.

ಪೀಠದ ಸಂಚಾಲಕ ಡಾ.ಎ.ಎಸ್.ಪ್ರಭಾಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಲಸಚಿವ ಡಾ.ಡಿ. ಪಾಂಡುರಂಗಬಾಬು ಸ್ವಾಗತಿಸಿದರು. ಶಿಬಿರದ ನಿರ್ದೇಶಕ ಪ್ರೊ. ರಮೇಶ ಆಶಯ ನುಡಿದರು. ಪ್ರೊ. ಜಿ. ಪ್ರಶಾಂತನಾಯಕ್ ವಂದಿಸಿದರು. ಹನಸೋಗೆ ಸೋಮಶೇಖರ್ ಮತ್ತು ತಂಡದವರು ಕ್ರಾಂತಿಗೀತೆ ಹಾಡಿದರು. ಡಾ. ಅರುಣ್ ಜೋಳದ ಕೂಡ್ಲಿಗಿ ನಿರೂಪಿಸಿದರು.

LEAVE A REPLY

Please enter your comment!
Please enter your name here