ತಾ.ಪಂ.ಸಾಮಾನ್ಯ ಸಭೆ ಎಸ್.ಎಸ್.ಎಲ್.ಸಿ ಫಲಿತಾಂಶ ಉತ್ತಮ ಪಡಿಸಲು-ಕ್ರಿಯಾ ಯೋಜನೆ

0
320

ಬಳ್ಳಾರಿ /ಹೊಸಪೇಟೆ. 2016-17ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಉತ್ತಮ ಪಡಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಡಿ.ಜೋಶಿ ತಿಳಿಸಿದರು.
ಸ್ಥಳೀಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿಂದು ಜರುಗಿದ 7ನೇ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ, ಇಲಾಖೆಯ ಮಾಹಿತಿ ನೀಡಿದ ಅವರು, 2017-18ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಉತ್ತಮ ಪಡಿಸುವ ದೃಷ್ಟಿಯಿಂದ ಮುಖ್ಯಶಿಕ್ಷಕರು ಹಾಗೂ ಸಹಶಿಕ್ಷಕರ ಸಹಕಾರದೊಂದಿಗೆ ಯೋಜನೆ ರೂಪಿಸಲಾಗಿದೆ. ಸ್ಪರ್ಧಾ ಮನೋಭಾವ ಬೆಳೆಸುವ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುವ, ದೆಹಲಿ ಪ್ರವಾಸ ಭಾಗ್ಯ ಯೋಜನೆಯಡಿ ಮಕ್ಕಳಿಗೆ ಪ್ರವಾಸ ಕಲ್ಪಿಸಲಾಗಿದೆ. ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಯೋಜನೆಯಡಿ ಪ್ರೌಢಶಾಲೆಗಳಿಗೆ ಗೌರವ ಶಿಕ್ಷಕರನ್ನು ನೇಮಕ ಮಾಡುವ ಮೂಲಕ ಶಿಕ್ಷಕರ ಕೊರತೆಯನ್ನು ನೀಗಿಸಲಾಗಿದೆ. ವಿವಿಧ ಹಂತಗಳಲ್ಲಿ ಸರಣಿ ಪರೀಕ್ಷೆಗಳನ್ನು ಆಯೋಜಿಸಲು ಹಾಗೂ ಶಾಲಾ, ತಾಲೂಕು ಮತ್ತು ಜಿಲ್ಲಾ, ರಾಜ್ಯ ಮಟ್ಟದಲ್ಲಿ ಸರಣಿ ಪರೀಕ್ಷೆಗಳನ್ನು ಸಾರ್ವತ್ರಿಕ ಪರೀಕ್ಷಾ ಮಾದರಿಯಲ್ಲಿ ನಡೆಸಲಾಗುವುದು. ಡಿ.31 ರೊಳಗೆ ಪಠ್ಯವಸ್ತು ಪೂರ್ಣಗೊಳಿಸಿ, ನಂತರ ಪುನರಾವರ್ತನೆ ಮಾಡಲಾಗುವುದು. ಶಿಥಿಲಗೊಂಡ ಕಟ್ಟಡಗಳ ದುರಸ್ತಿಗೆ ಹೈದ್ರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಅನುದಾನ ಕೊರಲಾಗಿದೆ ಎಂದು ಸಭೆಗೆ ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಕನ್ನಾರಿ ಮಾತನಾಡಿ, ತಾಲೂಕಿನಲ್ಲಿ ಕಂಡು ಬಂದಿರುವ ಸೈನಿಕ ಹುಳುಗಳ ಹಾವಳಿಯನ್ನು ತಗೆಗಟ್ಟಲು ತಾಲೂಕಿನಾಧ್ಯಂತ ಪ್ರಾತ್ಯಕ್ಷಿಕೆಗಳನ್ನು ನಡೆಸುವ ಮೂಲಕ ಸೈನಿಕ ಹುಳುಗಳ ತಡೆಗೆ ಪಾಷಾಣ ತಯಾರಿಸುವ ಕುರಿತು ರೈತರಿಗೆ ತರಬೇತಿ ಮತ್ತು ಜಾಗೃತಿ ಮೂಡಿಸಲಾಗುತ್ತಿದೆ. ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ರಿಯಾಯಿತಿ ಧರದಲ್ಲಿ ಬಿತ್ತನೆ ಮಾಡಲಾಗುತ್ತಿದೆ. ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಕೊರತೆಯಾಗದಂತೆ ಅಗತ್ಯ ದಾಸ್ತಾನು ಮಾಡಲಾಗಿದೆ ಎಂದು ತಿಳಿಸಿದರು.
ಅಲ್ಲದೆ ತಾಲೂಕಿನ ಕಂಪ್ಲಿ ಮತ್ತು ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ವಾಡಿಕೆಗಿಂತ ಶೇ.15 ರಷ್ಟು ಮಳೆ ಹೆಚ್ಚಾಗಿದೆ. ತಾಲೂಕಿನಲ್ಲಿ ಶೇ.6 ರಷ್ಟು ವಾಡಿಕೆಗಿಂತ ಮಳೆ ಅಧಿಕವಾಗಿದೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖೆಯ ಮಾಹಿತಿ ನೀಡಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಜೋಗದ ನೀಲಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಉಪಾಧ್ಯಕ್ಷ ಕೆ.ಗಾದಿಲಿಂಗಪ್ಪ, ಕಾರ್ಯನಿರ್ವಾಹಕ ಅಧಿಕಾರಿ ಟಿ.ವೆಂಕೋಬಪ್ಪ, ತಾ.ಪಂ.ಸದಸ್ಯರಾದ ಕೆ.ಷಣ್ಮುಖಪ್ಪ, ಎಂ.ಶಿವಪ್ಪ, ಬಿ.ಎಸ್.ಶಿವಮೂರ್ತಿ, ಹೆಚ್.ವೀರಣ್ಣ, ಕೆ.ಉಮಾದೇವಿ, ಸುಬ್ಬಮ್ಮ ನಾಯಕರ, ಮಲ್ಲೆ ಹನಮುಮಕ್ಕ, ಗೌರಮ್ಮ, ಕೆ.ಸುಜಾತ, ಕೆ.ಪಾಲಪ್ಪ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here