ದೂರ ಉಳಿಯಲು-ಉತ್ತರಾದಿ ಮಠ ತೀರ್ಮಾನ

0
160

ಬಳ್ಳಾರಿ/ ಹೊಸಪೇಟೆ:ಹಂಪಿಯ ನವ ವೃಂದಾವನದಲ್ಲಿ ಇಂದಿನಿಂದ 3 ದಿನಗಳ ಕಾಲ ಜರುಗಲಿರುವ ಶ್ರೀಪದ್ಮನಾಭ ತೀರ್ಥರ ಆರಾಧನೆ ಮಹೋತ್ಸವದಲ್ಲಿ ಭಾಗವಹಿಸದೆ, ನವ ವೃಂದಾವನದಿಂದ ದೂರ ಉಳಿಯಲು ಉತ್ತರಾದಿ ಮಠ ತೀರ್ಮಾನಿಸಿದೆ ಎಂದು ಉತ್ತರಾದಿ ಮಠದ ವಿದ್ಯಾಧೀಶ ಆಚಾರ್ಯರು ತಿಳಿಸಿದರು.ಸ್ಥಳೀಯ ಉತ್ತರಾದಿ ಮಠದಲ್ಲಿಂದು ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಂಪಿಯ ನವ ವೃಂದಾವನದಲ್ಲಿ ಇಂದಿನಿಂದ 3 ದಿನಗಳ ಕಾಲ ಜರುಗಲಿರುವ ಪದ್ಮನಾಭ ತೀರ್ಥರ ಆರಾಧನೆ ನೆರವೇರಿಸಲು ರಾಜ್ಯ ಉಚ್ಛ ನ್ಯಾಯಾಲಯ ರಾಯರ ಮಠಕ್ಕೆ ಆದೇಶ ನೀಡಿಲ್ಲ. ಉತ್ತರಾದಿ ಮಠಕ್ಕೆ ಪೂಜೆ ಅವಕಾಶ ನೀಡಿದ ಧಾರವಾಡ ಹೈಕೋರ್ಟ್ ಪೀಠ ನೀಡಿದ ಆದೇಶವನ್ನು ಪ್ರಶ್ನಿಸಿ, ರಾಯರ ಮಠ ಸಲ್ಲಿಸಿದ್ದ ಅರ್ಜಿಯ ಮರು ವಿಚಾರಣೆಗೆ ಗಂಗಾವತಿಯ ನ್ಯಾಯಾಲಯಕ್ಕೆ ಹಿಂದಿರುಗಿಸಿದೆ. ಹೈರ್ಕೋಟ್ ಆದೇಶದಲ್ಲಿ ಆರಾಧನೆ ವಿಷಯವಾಗಲಿ, ಉತ್ತರಾದಿ ಮಠದ ಭೂಮಿಯ ಸ್ವಾಧೀನತೆ ವಿಷಯವಾಗಲಿ ಉಲ್ಲೇಖ ಮಾಡಿಲ್ಲ.ಹೀಗಿದ್ದರೂ ರಾಯರ ಮಠದವರು ಮೂರು ದಿನಗಳ ಕಾಲ ಆರಾಧನೆಗೆ ಹೈಕೋರ್ಟ್ ಆದೇಶ ನೀಡಿದೆ ಎಂದು ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಇದನ್ನು ಉತ್ತರಾದಿ ಮಠ ತೀವ್ರವಾಗಿ ಖಂಡಿಸುತ್ತದೆ. ಕಳೆದ 2015 ರಲ್ಲಿ ನವವೃಂದಾವನ ಗಡ್ಡೆ ಪ್ರವೇಶಕ್ಕೆ ರಾಯರ ಮಠದ ಭಕ್ತರಿಗೆ ನಿರ್ಬಂಧ ಹೇರಿದ್ದರೂ, ಅತಿಕ್ರಮ ಪ್ರವೇಶ ಮಾಡಿ, ಉತ್ತರಾದಿ ಮಠದ ಭಕ್ತರ ಮೇಲೆ ಹಲ್ಲೆ ನಡೆಸಿದ್ದರು. ಇಂತಹ ಅಹಿತಕರ ಘಟನೆಗಳು ಮತ್ತೆ ಮರುಕಳಿಸಬಾರದು ಎಂಬ ದೃಷ್ಟಿಯಿಂದ ಉತ್ತರಾದಿ ಮಠ ನವವೃಂದಾವನ ಗಡ್ಡೆಯಿಂದ ದೂರ ಉಳಿದು. ಸ್ಥಳೀಯ ಉತ್ತರಾದಿ ಮಠದಲ್ಲಿ ಸಂಸ್ಥಾನ ಪೂಜೆ ಹಾಗೂ ಆರಾಧನೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಉತ್ತರಾದಿ ಮಠದ ಗೋಪಿನಾಥ, ವಕೀಲರಾದ ಸಾಗರ್ ಕೃಷ್ಣ, ಶ್ರೀಮಠದ ಅಧಿಕೃತ ವಕ್ತಾರ ಕೃಷ್ಣ ಕೊಲ್ಹಾರ ಕುಲಕರ್ಣಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here