ದೇವರ ದಾಸಿಮಯ್ಯ ಜಯಂತಿ

0
189
Nammuru T V Online News Channel
Nammuru T V Online News Channel

ಹೊಸಪೇಟೆ: ಶರಣ ಸಾಹಿತ್ಯಕ್ಕೆ ಚಾರಿತ್ರಿಕ ಮುನ್ನುಡಿ ಬರೆದಿರುವ ದೇವರ ದಾಸಿಮಯ್ಯರ ಕುರಿತು ಸಂಶೋಧನೆ ನಡೆಯಬೇಕಿದೆ ಎಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾಧ್ಯಯನ ಸಂಸ್ಥೆ ಮುಖ್ಯಸ್ಥ ಡಾ. ಗುಂಡಣ್ಣ ಕಲಬುರ್ಗಿ ಹೇಳಿದರು.

ಕನ್ನಡ ವಿಶ್ವವಿದ್ಯಾಲಯ ದೇವರ ದಾಸಿಮಯ್ಯ ಅಧ್ಯಯನ ಪೀಠದವತಿಯಿಂದ ದೇವರ ದಾಸಿಮಯ್ಯ ಜಯಂತಿ ನಿಮಿತ್ತ ಶನಿವಾರ ಏರ್ಪಡಿಸಿದ್ದ ದೇವರ ದಾಸಿಮಯ್ಯರ ವಚನಗಳು ಸಾಮಾಜಿಕ ಚಿಂತನೆಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉನ್ನತ ವರ್ಗಗಳು ಧರ್ಮವನ್ನು ಎತ್ತಿಹಿಡಿದ, ಧಾರ್ಮಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಪರಿಸ್ಥಿತಿ ಹೀನಸ್ಥಿತಿಯಲ್ಲಿರುವಂತಹ ಸಂದರ್ಭಗಳು ವೈಚಾರಿಕತೆಗೆ ತಿರುಗುವ ಪರಿಸ್ಥಿತಿಯಲ್ಲಿ ದಾಸಿಮಯ್ಯ ಅಕ್ಷರ ಜಗತ್ತನ್ನು ಪ್ರವೇಶಿಸಿದರು. ವಚನಗಳ ಮೂಲಕ ದೇವರ ದಾಸಿಮಯ್ಯನು, ಎಲ್ಲೂ ಉದ್ವೇಗಗೊಳ್ಳದೇ ಸಮಾಜದ ಅಂಕುಡೊಂಕುಗಳನ್ನು ಪ್ರಶ್ನಿಸಿದ್ದು, ಈತನ ಬಗ್ಗೆ ಸಂಶೋಧನೆಗಳು ನಡೆಯಬೇಕಿದೆ. ವಚನಗಳಲ್ಲಿ ಈತನ ಅಭಿವ್ಯಕ್ತಿ ವಿಧಾನ ಮುಂದಿನ ಶರಣರ ಮೇಲೆ ಪ್ರಭಾವ ಬೀರಿದೆ. ಮಠಗಳು, ಮೂಢನಂಬಿಕೆ, ಢಾಂಬಿಕತನಗಳನ್ನು 11ನೇ ಶತಮಾನದಲ್ಲಿಯೇ ಟೀಕೆಗೆ ಒಳಪಡಿಸಿದ್ದರು. ಕುಲ ಹೊಲೆತನದ ಕುರಿತು ಬಹಳ ಸ್ಪಷ್ಟವಾದ ವೈಚಾರಿಕ ನಿಲುವು ಹೊಂದಿದ್ದರು. ಶಿವಾಚಾರ, ಬಯಲು, ಶೂನ್ಯ, ಬಿಂದು, ಅನುಭಾವ ಮುಂತಾದ ಪದಗಳನ್ನು ತನ್ನ ವಚನಗಳಲ್ಲಿ ಎಲ್ಲ ಶರಣರಗಿಂತ ಮೊದಲೇ ಪ್ರಸ್ತಾಪಿಸಿದ್ದಾರೆ ಎಂದು ವಿವರಿಸಿದರು.

ಕುಲಪತಿ ಡಾ. ಮಲ್ಲಿಕಾ ಎಸ್. ಘಂಟಿ ಮಾತನಾಡಿ, ವೈದಿಕ ಧರ್ಮದ ಹಿಂಸಾಪ್ರಣೀತ ಸಮಾಜದಲ್ಲಿ ದಾಸಿಮಯ್ಯ ಇಷ್ಟೊಂದು ವೈಚಾರಿಕವಾಗಿ ಬರೆದಿದ್ದಾನೆ ಎಂದರೆ ನಂಬಲು ಕಷ್ಟಸಾಧ್ಯ ಎಂದೆನಿಸುತ್ತದೆ. ಶರಣರು ತಮ್ಮ ಅನನ್ಯತೆ ಉಳಿಸುವ ಕಸುಬುದಾರಿಕೆಗಳನ್ನು ವಚನಗಳ ಮೂಲಕ ದಾಖಲಿಸಿದ್ದರು. ಶರಣರನ್ನು ಮುಂದಿಟ್ಟುಕೊಂಡು ಸಾಮಾಜಿಕ ವಿಘಟನೆಗಳಿಗೆ ಕಾರಣ ಹುಡುಕಬೇಕಾಗಿದೆ. ಶರಣರ ವಿಚಾರಗಳನ್ನು ಪ್ರಸ್ತುತ ಗೊಳಿಸಬೇಕಾಗಿದೆ. ಸೌಹಾರ್ದ ದರ್ಶನಕ್ಕಾಗಿ ಶರಣರನ್ನು ಅವಲೋಕಿಸಲೇಬೇಕಾಗಿದೆ ಎಂದು ಹೇಳಿದರು.

ಪೀಠದ ಸಂಚಾಲಕ ಡಾ. ಎಸ್.ಎಸ್. ಅಂಗಡಿಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿ ಸಂತೋಷ ನಿರೂಪಿಸಿದರು. ಶಿಲ್ಪ ವಂದಿಸಿದರು. ಡೀನರಾದ ಡಾ. ಮೋಹನ ಕುಂಟಾರ, ಡಾ. ಅಶೋಕಕುಮಾರ ರಂಜೇರೆ ಹಾಗೂ ಡಾ.ಸಿ.ಮಹದೇವ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here