ಧಾರ್ಮಿಕ ವ್ಯಕ್ತಿ ಎಂದರೆ ಟೋಪಿ ಇಟ್ಟು ದಾಡಿಬಿಡುವುದಲ್ಲ

0
234

*ಧಾರ್ಮಿಕ ವ್ಯಕ್ತಿ ಎಂದರೆ ಟೋಪಿ ಇಟ್ಟು ದಾಡಿ ಬಿಟ್ಟು ಮುಪ್ಪಿನಲ್ಲಿ ಹಜ್ ಗೆ ಹೋಗುವುದಲ್ಲ : ಬೋಡೆ ರಿಯಾಜ್ ಅಹ್ಮದ್*

ಬಳ್ಳಾರಿ /ಬಳ್ಳಾರಿ:  ಸೂಫಿಸಂ ಕೇವಲ ವ್ಯಕ್ತಿಗತ ಭಾತೃತ್ವವನ್ನಲ್ಲ ವಿಶ್ವ ಭಾತೃತ್ವವನ್ನು ಸಾರಿದ ಚಳವಳಿ ಎಂದು ಲೇಖಕ ಬೋಡೆ ರಿಯಾಜ್ ಅಹ್ಮದ್ ತಿಮ್ಮಾಪುರಿ ಹೇಳಿದರು.

ಬಳ್ಳಾರಿಯ ದೊಡ್ಡ ಮಾರ್ಕೆಟ್ ಬಳಿಯ “ಜಾಗೃತಿ ಕಿರಣ” ಪತ್ರಿಕಾ ಕಚೇರಿಯಲ್ಲಿ ರವಿವಾರದಂದು *ಸೂಫಿ ಪರಂಪರೆ ಮತ್ತು ಸೂಫಿ ಸಂತರ ಕೊಡುಗೆಗಳು* ಕುರಿತು ಉಪನ್ಯಾಸ ನೀಡಿದರು.

ಸೂಫಿಗಳು ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ದೇಶ, ಕುಟುಂಬ ಬಿಟ್ಟು ಭೂಮಿಯ ಹಲವು ಪ್ರದೇಶಗಳಿಗೆ ತೆರಳಿ ಒಲವು, ಪ್ರೇಮ ಮತ್ತು ಆಧ್ಯಾತ್ಮದ ವಿಚಾರಗಳನ್ನು ಹಂಚಿದರು.

ತಾವು ಹುಟ್ಟಿ ಬೆಳೆದ ಸ್ಥಳವನ್ನು ಬಿಟ್ಟು ಕೇವಲ ದೇವರ ಮೇಲೆ ಭರವಸೆ ಇಟ್ಟು ಜನರ ಕಲ್ಯಾಣಕ್ಕೆ ತೆರಳಿದವರು ಸೂಫಿಗಳು.

ದರ್ಗಾಗಳಿಗೆ ತೆರಳುವುದರ ಬಗ್ಗೆ ಮುಸ್ಲಿಮರಲ್ಲಿಯೇ ವಿರೋಧಗಳಿವೆ, ಸೂಫಿವಾದ ಇಸ್ಲಾಂನ ವಿರೋಧಿ ಚಿಂತನೆ ಎಂಬಂತಹ ಅಭಿಪ್ರಾಯ, ವಾತಾವರಣ ಮುಸ್ಲಿಂರಲ್ಲಿದೆ. ಆದರೆ ವಾಸ್ತವದಲ್ಲಿ ನಮ್ಮ ಸಂತರ ಬಗ್ಗೆ ನಮಗೆ ಮಾಹಿತಿ ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ.

ಸೂಫಿ ಪರಂಪರೆಯಲ್ಲಿ ಆಗಿ ಹೋದ ಸಂತರು ಹಲವು ಬಗೆಯ ಪಾತ್ರ ನಿರ್ವಹಿಸಿದವರು. ಅದರಲ್ಲಿ ಸಚ್ಛಾರಿತ್ರ್ಯವುಳ್ಳವರಾಗಿದ್ದರು, ಇಸ್ಲಾಂನ ಕಟ್ಟುನಿಟ್ಟಿನ ಆಚರಣೆ ಮಾಡುವ ಧರ್ಮನಿಷ್ಟರಿದ್ದರು. ಇನ್ನೂ ಕೆಲವರು ದೇವನ ಸ್ಮರಣೆಗೆ ಕೇವಲ ಐದು ಹೊತ್ತಿನ ನಮಾಜು ಮಾಡುವ ಹಂಗೇಕೆ? ಅದಕ್ಕಿಂತ ಹೆಚ್ಚೂ ಮಾಡಬಹುದು ಎಂಬ ಅಭಿಪ್ರಾಯ ಉಳ್ಳವರಾಗಿದ್ದರು. ದೇವರನ್ನು ಸ್ತುತಿಸುವ ಮೂಲಕ ದೇವರ ಸಾಮೀಪ್ಯ ಪಡೆಯಬೇಕೆಂಬುದು ಸೂಫಿಗಳ ನಂಬಿಕೆಯಾಗಿತ್ತು. ಇಂತಹ ವಿಚಾರಗಳ ಜೊತೆಗೇ ಪ್ರಾರ್ಥನೆ ಎಂಬುದು ಕಾಟಾಚಾರದ ಕೆಲಸವಲ್ಲ ಎಂಬ ಸ್ಪಷ್ಟತೆ ಉಳ್ಳವರಾಗಿದ್ದರು.

ಧಾರ್ಮಿಕ ಆಚರಣೆಯ ನಿರಂತರ ಪ್ರಕ್ರಿಯೆಯಿಂದ ನಮ್ಮ ಆಧ್ಯಾತ್ಮದ ಬದುಕು ಪಕ್ವಗೊಳ್ಳಬೇಕು. ಧಾರ್ಮಿಕ ಚಿಂತನೆ ಲೋಕ ಕಲ್ಯಾಣಕ್ಕೆ ಪ್ರೇರಣೆಯಾಗಬೇಕು. ಹಾಗೆ ಆಗದಿದ್ದಲ್ಲಿ ಅದರಲ್ಲೇನೋ ದೋಷವಿದೆ ಎಂದರ್ಥ.

ಧಾರ್ಮಿಕ ವ್ಯಕ್ತಿ ಎಂದರೆ ಟೋಪಿ ಇಟ್ಟು ದಾಡಿ ಬಿಟ್ಟು ಮುಪ್ಪಿನಲ್ಲಿ ಹಜ್ ಗೆ ಹೋಗುವುದಲ್ಲ.

ಸೃಷ್ಟಿ ದೇವರ ಅದ್ಭುತ ಕೊಡುಗೆ. ಸೂರ್ಯ ಚಂದ್ರ ಭೂಮಿ ಇವೆಲ್ಲ ಒಂದು ಸೂತ್ರದಲ್ಲಿ ಅಳವಡಿಸಲ್ಪಟ್ಟಿವೆ. ಈ ಸೂತ್ರವನ್ನು ಅರಿಯುವುದೆಂದರೆ ಅಲ್ಲಾಹನನ್ನು ಅರಿಯುವುದೆಂದೇ ಅರ್ಥ.

ಇಂದು ನಾವು ದಿನನಿತ್ಯದ ಬದುಕಿನಲ್ಲಿ ಬಳಸುತ್ತಿರುವ ಅತ್ಯಾಧುನಿಕ ವಸ್ತುಗಳು ಸಹಿತ ಎಲ್ಲ ಉತ್ಪಾದನೆಯು ಫಿಕ್ರ್ (ಚಿಂತನೆ) ನ ಫಲವಾಗಿದೆ.

ಈ ಇಡೀ ಸೃಷ್ಟಿಯಲ್ಲಿ ಸೃಷ್ಟಿ ಸೂತ್ರದ ಅರಿವು ಹೊಂದುವ ಮತ್ತು ಬದುಕು ಕಟ್ಟಿಕೊಳ್ಳುವ ಜ್ಞಾನ ಮನುಷ್ಯನಿಗಿದೆ.

ಹೀಗಾಗಿ ಇಂತಹದ್ದೇ ಜ್ಞಾನ ಶೋಧನೆಯ ಹಿನ್ನೆಲೆ ಸೂಫಿಸಂಗೆ ಇದೆ. ಸೂಫಿಗಳು ಕುರಾನ್ ಅನ್ನು ಶಬ್ದಶಃ ಓದಲಿಲ್ಲ. ಆಳವಾದ ಅಧ್ಯಯನ ಮಾಡಿದರು. ಮಸುಕಾಗಿರುವ ವಿಚಾರಗಳನ್ನು ಸ್ಪಷ್ಟಪಡಿಸಿಕೊಂಡರು. ಹಾಗೆ ನಡೆದ ಅಧ್ಯಯನದ ಭಾಗವಾಗಿ ದೈವೀ ವ್ಯಾಖ್ಯಾನ ನೀಡುವುದರಲ್ಲಿ ಸೂಫಿಗಳ ಪಾತ್ರ ದೊಡ್ಡದು.

ಸೂಫಿ ಸಂತರು ತಮ್ಮ ಜನನ ಮರಣವನ್ನೂ ವ್ಯಾಖ್ಯಾನಿಸಿದರು. ದೇವರು ನಮ್ಮನ್ನು ಭುವಿಗೆ ಕಳಿಸಿದ ನಾವು ನಮ್ಮ ಮರಣದ ನಂತರ ಮತ್ತೆ ದೇವರನ್ನು ಸೇರುತ್ತೇವೆ ಎಂದು ಹೇಳಿದರು. ಹೀಗಾಗಿಯೇ ಸೂಫಿ ಸಂತರ ಉರೂಸ್ ಆಚರಿಸಲಾಗುತ್ತದೆ. ಉರೂಸ್ ಎಂದರೆ ಮಿಲನ ಎಂದರ್ಥ.

ಭಾರತ ಸೇರಿದಂತೆ ವಿವಿಧ ಭೂ ಪ್ರದೇಶಗಳನ್ನು ಪ್ರವೇಶ ಮಾಡಿದ ಸೂಫಿಗಳು ಆಯಾ ಪ್ರದೇಶದ ಜನರ ಜೊತೆ ಸಾಕಷ್ಟು ಹೊಂದಿಕೆ ಹೊಂದಾಣಿಕೆ ಮಾಡಿಕೊಂಡು ಧರ್ಮವನ್ನು ಸಾರಿದರು. ಧಾರ್ಮಿಕ ಭಿನ್ನತೆ ಹಿನ್ನೆಲೆಯಲ್ಲಿ ಸೃಷ್ಟಿಯಾದ ಸಂಘರ್ಷದಲ್ಲಿ ಪ್ರಾಣ ತೆತ್ತರು. ಕೊನೆಗೆ ಖಡ್ಗ ಹಿಡಿಯುವ ಕೆಲಸ ಮಾಡಿದರೇ ಹೊರತು ಹಿಂಸೆಯು ಸೂಫಿಗಳ ಮೊದಲ ಆದ್ಯತೆಯಾಗಿರಲಿಲ್ಲ.

ಭಾರತ ಎಂಬುದು ಒಂದು ಧಾರ್ಮಿಕ ನೆಲ. ಧಾರ್ಮಿಕತೆಗೆ ಹದವಾದ ಭೂಮಿ ಭಾರತದ ಈ ಭೂಮಿ. ಸೂಫಿಗಳು ತಮಗೆ ದೊರೆತ ಆಧ್ಯಾತ್ಮಿಕ ದರ್ಶನ, ಜ್ಞಾನ ಮತ್ತು ಸತ್ಯಗಳನ್ನು ಭಾರತದಲ್ಲಿ ಹಂಚಿದರು.

ಪ್ರೇಮದ ಸಂದೇಶ ಸೂಫಿಗಳು ನೀಡಿದ ಮಹಾನ್ ಕೊಡುಗೆ. ಈ ಸಂದೇಶಗಳನ್ನು ಸೂಫಿಗಳು ಸ್ಥಳೀಯ ಭಾಷೆಗಳಲ್ಲಿ ಜನರಾಡುವ ಭಾಷೆಗಳಲ್ಲಿ ಸಾಹಿತ್ಯ ರಚಿಸಿದರು. ಭಾರತದ ಉರ್ದು ಹಾಗೂ ದಖನಿ ಭಾಷೆಯಲ್ಲಿ ಸಂದೇಶಗಳನ್ನು ಹಂಚಿ ಈ ಭಾಷೆಗಳನ್ನು ಸಾಹಿತ್ಯಿಕವಾಗಿ ಶ್ರೀಮಂತಗೊಳಿಸಿದರು.

ಹೀಗಾಗಿ ಖಡ್ಗದ ನೆರಳಿನಲ್ಲಿ ಜಗತ್ತಿನಲ್ಲಿ ಇಸ್ಲಾಂ ಹರಡಲಿಲ್ಲ ಬದಲಾಗಿ ಸೂಫಿಗಳ ಪ್ರೇಮ ಸಂದೇಶಗಳ ಮೂಲಕ ಇಸ್ಲಾಂ ಹರಡಿತು.

ಸೂಫಿಗಳು ದೈವಿಕ ಜ್ಞಾನದ ಹೊರತಾಗಿ ಆಯಾ ಕಾಲ ಘಟ್ಟದ ಬದುಕನ್ನು ದಾಖಲಿಸಿದ ಜನಪರ ಸಾಹಿತಿಗಳು.

ಸಾಹಿತ್ಯ ರಚನೆಯೊಂದಿಗೆ, ಸಂಗೀತ ಆಯುರ್ವೇದ ಸೇರಿದಂತೆ ಹಲವು ಕ್ಷೇತ್ರಗಳಿಗೂ ಸೂಫಿಗಳ ಕೊಡುಗೆ ಅಪಾರವಾದುದು.

ಇಂದು ಧರ್ಮದ ವಿಚಾರಗಳಿಗೆ ಸಂಬಂಧಿಸಿ ಹಲವು ಸಂಕಷ್ಟಗಳನ್ನು ನಾವು ಎದುರಿಸುತ್ತಿದ್ದೇವೆ. ಪ್ರವಾದಿ ಪೈಗಂಬರರಿಗೇ ಕಷ್ಟ ಬಂದಿದ್ದವು. ನಮಗೆ ಕಷ್ಟಗಳು ಬರುವುದು ಹೊಸದಲ್ಲ. ನಮಗೆ ಕಷ್ಟ ಬಂದಾಗ ನಾವು ಸಮಾಧಾನದಿಂದ ಇರಬೇಕು, ಆ ಸಮಸ್ಯೆಗೆ ಜಾಣತನದ ಪರಿಹಾರ ಕಂಡುಕೊಳ್ಳಬೇಕು ಎಂದರು.

ಪತ್ರಕರ್ತ ಇಮಾಮ್ ಗೋಡೆಕಾರ ಸ್ವಾಗತಿಸಿದರು, ಜಾಗೃತಿ ಕಿರಣ ಪಾಕ್ಷಿಕ ಪತ್ರಿಕೆ ಸಂಪಾದಕ ಯಾಳ್ಪಿ ವಲೀ ಭಾಷಾ ಬೋಡೆ ರಿಯಾಜ್ ಅಹ್ಮದ್ ತಿಮ್ಮಾಪುರಿ ಅವರನ್ನು ಸನ್ಮಾನಿಸಿದರು.

LEAVE A REPLY

Please enter your comment!
Please enter your name here