ನಗರಸಭೆ ಅಧಿಕಾರಿಗಳಿಂದ ದಾಳಿ-ನಿಷೇಧಿತ ಪ್ಲಾಸ್ಟಿಕ್ ಜಪ್ತಿ

0
250

ಬಳ್ಳಾರಿ /ಹೊಸಪೇಟೆ : ತಾಲೂಕಿನಾಧ್ಯಂತ ಪ್ಲಾಸ್ಲಿಕ್ ವಸ್ತುಗಳ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಿರುವ ಹಿನ್ನಲೆಯಲ್ಲಿ ಗುರುವಾರ ಸ್ಥಳೀಯ ನಗರಸಭೆ ಅಧಿಕಾರಿಗಳು ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ, ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಹಳೇ ಬಸ್ ನಿಲ್ದಾಣ ಸೇರಿದಂತೆ ಮತ್ತಿತರ ಕಡೆಗಳಲ್ಲಿ ದಾಳಿ ನಡೆಸಿದ ನಗರಸಭೆ ಪರಿಸರ ಅಭಿಯಂತರರು ಹಾಗೂ ಆರೋಗ್ಯ ನಿರೀಕ್ಷಕರು ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದ 7 ಚೀಲದಲ್ಲಿದ್ದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಳು ಸೇರಿದಂತೆ ಮತ್ತಿತರರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರಸಭೆ ಪರಿಸರ ಅಭಿಯಂತರರಾದ ಶಿಲ್ಪಶ್ರೀ, ಆರೋಗ್ಯ ನಿರೀಕ್ಷರಾದ ಶಶಿಭೂಷಣ ಹಿರೇಮಠ, ಚಂದ್ರಶೇಖರ್ ಮತ್ತವರ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು. ಈ ಕುರಿತು ಸಂಜೆವಾಣಿಯೊಂದಿಗೆ ಮಾತನಾಡಿದ ನಗರಸಭೆ ಪರಿಸರ ಅಭಿಯಂತರರಾದ ಶಿಲ್ಪಶ್ರೀ, ಸರ್ಕಾರದ ಆದೇಶದ ಪ್ರಕಾರ ನಗರ ಸೇರಿದಂತೆ ತಾಲೂಕಿನಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಕುರಿತು ನಗರಸಭೆ ಸಭಾಂಗಣದಲ್ಲಿ ಇತ್ತೀಚೆಗೆ ಸಹಾಯಕ ಆಯುಕ್ತರು, ನಗರಸಭೆ ಅಧ್ಯಕ್ಷರು ಹಾಗೂ ತಹಸೀಲ್ದಾರರ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ಪ್ಲಾಸ್ಟಿಕ್ ಮಾರಾಟಗಾರರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ಆದರೆ ನಿಷೇಧವಿದ್ದರೂ ಕೆಲವೊಂದು ಅಂಗಡಿಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಮಾಡಲಾಗುತ್ತಿದೆ ಎಂದು ಮಾಹಿತಿ ಬಂದ ಹಿನ್ನಲೆಯಲ್ಲಿ ದಾಳಿ ನಡೆಸಿ, ಅಂಗಡಿಯಲ್ಲಿದ್ದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಸೇರಿದಂತೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿ ಮುಂದೆಯೂ ಕೂಡ ಮುಂದುವರೆಯಲಿದೆ ಎಂದ ಅವರು, ಪ್ಲಾಸ್ಟಿಕ್ ವಸ್ತುಗಳ ನಿಷೇಧಕ್ಕೆ ಸಾರ್ವಜನಿಕರು ಹಾಗೂ ವರ್ತಕರು ಸಹಕರಿಸುವಂತೆ ಕೋರಿದ್ದಾರೆ.

LEAVE A REPLY

Please enter your comment!
Please enter your name here