ನಗರಸಭೆ ನೂತನ ಪೌರಾಯುಕ್ತರಾಗಿ-ವಿ.ರಮೇಶ್ ಅಧಿಕಾರ ಸ್ವೀಕಾರ

0
328

ಬಳ್ಳಾರಿ /ಹೊಸಪೇಟೆ:ಸ್ಥಳೀಯ ನಗರಸಭೆಯ ನೂತನ ಪೌರಾಯುಕ್ತರಾಗಿ ವಿ.ರಮೇಶ್ ಇಂದು ಅಧಿಕಾರ ಸ್ವೀಕಾರ ಮಾಡಿದರು.
ಪೌರಾಯುಕ್ತರ ಕೊಠಡಿಯಲ್ಲಿಂದು ಜರುಗಿದ ಸರಳ ಸಮಾರಂಭದಲ್ಲಿ ಪ್ರಭಾರಿ ಪೌರಾಯುಕ್ತರಾಗಿದ್ದ ಪ್ರಶಾಂತ್ ಕುಮಾರ್ ಮಿಶ್ರಾ ರಿಂದ ವಿ.ರಮೇಶ್ ಅಧಿಕಾರ ಸ್ವೀಕಾರ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಕುಡಿಯುವ ನೀರು, ಚರಂಡಿ, ವಿದ್ಯುತ್ ದೀಪ ಸಮಸ್ಯೆ ಸೇರಿದಂತೆ ಮೂಲಭೂತ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಜೊತೆಗೆ, ಕಳೆದ 2-3 ತಿಂಗಳಿಂದ ನಗರಸಭೆಯಲ್ಲಿ ಬಾಕಿ ಇರುವ ಫಾರಂ ನಂ.3 ಸೇರಿದಂತೆ ವಿವಿಧ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲಾಗುವುದು. ನಗರಸಭೆವತಿಯಿಂದ ಆಗಬೇಕಾದ ಯಾವುದೇ ಕೆಲಸ ಕಾರ್ಯಗಳಿಗೆ ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿದರೆ, ಕಾನೂನು ಪ್ರಕಾರ, ನಿಯಮಾನುಸಾರವಾಗಿ 48 ಗಂಟೆಗಳಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು. ಅಲ್ಲದೆ ನಗರದ ಜನರನ್ನು ಹಾಗೂ ಜನಪ್ರತಿನಿಧಿಗಳನ್ನು ಮತ್ತು ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಗರದ ಅಭಿವೃದ್ದಿಗೆ ಶ್ರಮಿಸುವ ಜೊತೆಗೆ, ನಗರದ ಜನತೆಗೆ ನಗರಸಭೆ ಬಗ್ಗೆ ನಂಬಿಕೆ ಬರುವ ರೀತಿಯಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದರು.
ನೂತನ ಪೌರಾಯುಕ್ತ ವಿ.ರಮೇಶ್ ಈ ಮೊದಲು ಸಿಂಧನೂರು ನಗರಸಭೆಯಲ್ಲಿ ಪೌರಾಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದಕ್ಕೂ ಮೊದಲು ಬಳ್ಳಾರಿ, ಕಂಪ್ಲಿ, ಹಡಗಲಿ ಮತ್ತು ಶಿಕಾರಿಪುರ ಗಳಲ್ಲಿ ಅವರು ಮುಖ್ಯಾಧಿಕಾರಿಯಾಗಿ, ಯೋಜನಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಈ ಸಂದರ್ಭದಲ್ಲಿ ಹಾಜರಿದ್ದ ನಗರಸಭೆ ಸದಸ್ಯ ಚಂದ್ರಕಾಂತ್ ಕಾಮತ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮನ್ಸೂರ್ ಅಹಮದ್, ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ನೂತನ ಪೌರಾಯುಕ್ತರನ್ನು ಅಭಿನಂದಿಸಿದರು.

LEAVE A REPLY

Please enter your comment!
Please enter your name here