ನದಿಯಲ್ಲಿ ನೀರನ್ನು ಹರಿಸಲು ಮನವಿ.

0
222

ಬಳ್ಳಾರಿ /ಹೊಸಪೇಟೆ:ಜಲಚರ ಪ್ರಾಣಿಸಂಕುಲಗಳ ಸಂರಕ್ಷಿಸಲು ತುಂಗಭದ್ರಾ ಜಲಾಶಯದಿಂದ ನದಿಗೆ ಕೂಡಲೇ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ತುಂಗಭದ್ರಾ ಮಂಡಳಿ ಕಾರ್ಯದರ್ಶಿ ರಂಗಾರೆಡ್ಡಿ ಅವರನ್ನು ವನ್ಯಜೀವಿ ಸಂಶೋಧಕ ಸಮದ್ ಕೊಟ್ಟೂರು ಆಗ್ರಹಿಸಿದ್ದಾರೆ.

ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ರಂಗಾರೆಡ್ಡಿ ಅವರನ್ನು ಸೋಮವಾರ ಬೇಟಿ ಮಾಡಿ ಮನವಿ ಸಲ್ಲಿಸಿದ ಅವರು,  ಸತತವಾಗಿ 5 ತಿಂಗಳಿನಿಂದ ನೀರಿಲ್ಲದೇ ವಿನಾಶದ ಅಂಚಿಗೆ ತಲುಪಿರುವ ಜಲಚರಗಳನ್ನು ಸಂರಕ್ಷಿಸಲು ತಕ್ಷಣವೇ ನದಿಯಲ್ಲಿ ನೀರು ಹರಿಸಬೇಕೆಂದು ಒತ್ತಾಯಿಸಿದ ಅವರು

ನದಿಯಲ್ಲಿ ಅಪಾರ ಪ್ರಮಾಣದ ನೀರು ನಾಯಿಗಳು (ಸ್ಮೂತ್-ಕೋಟೆಡ್ ಆಟರ್), ಮೊಸಳೆಗಳು (ಮಗ್ಗರ್ ಕ್ರೋಕೋಡೈಲ್), ನಾಲ್ಕು ಪ್ರಬೇಧದ ಆಮೆಗಳು ಹಾಗೂ ನೂರಾರು ಪ್ರಬೇಧದ ಮೀನುಗಳು ಮುಂತಾದ ವನ್ಯಜೀವಿಗಳು ವಾಸಿಸುತ್ತಿದ್ದು, ಮೊಟ್ಟಮೊದಲ ಬಾರಿಗೆ ನದಿಯಲ್ಲಿ ನೀರು ಇಲ್ಲದೇ ತಳ ಕಂಡಿದೆ. ನೀರಿಲ್ಲದೇ ಮೊಸಳೆ, ಆಮೆಗಳು ಹಾಗೂ ಅಪಾರ ಸಂಖ್ಯೆಯಲ್ಲಿ ಆಮೆಗಳು ಸಾಯುತ್ತಿವೆ. ಇವುಗಳ ರಕ್ಷಣೆಗಾಗಿ ನೀರು ಹರಿಸದಿದ್ದರೇ ಅಪಾಯ ಪ್ರಾಣಿಗಳು ನಶಿಸಿಹೋಗುತ್ತವೆ ಎಂದು ಮನವರಿಕೆ ಮಾಡಿದರು.

ಬೇಸಿಗೆಯಲ್ಲಿ ಮೊಸಳೆ ಹಾಗೂ ಆಮೆಗಳು ನದಿಯುದ್ದಕ್ಕೂ ಇರುವ ಮರಳು ಗಡ್ಡೆಗಳಲ್ಲಿ ಮೊಟ್ಟೆ ಇಡುತ್ತವೆ. ಮುಂಗಾರಿನ ಮೊದಲ ಮಳೆಯ ಪ್ರವಾಹದಲ್ಲಿ ಈ ಮರಳು ಗಡ್ಡೆಗಳು ಕರಗಿ ಅದರಲ್ಲಿರುವ ಮೊಟ್ಟೆಗಳಿಂದ ಮರಿಗಳು ಹೊರಬಂದು, ನೀರಿನಲ್ಲಿ ಸೇರಿಕೊಳ್ಳುತ್ತವೆ. ಅದೇ ರೀತಿ ಬೇಸಿಗೆಯಲ್ಲಿ ನದಿ ನೀರು ಸಂಪೂರ್ಣ ಒಣಗಿದಾಗ ಮೊಸಳೆ, ಆಮೆಗಳು, ಕಪ್ಪೆಗಳು ಹಾಗೂ ಮೀನುಗಳು ಕೆಸರಿನಲ್ಲಿ ಆಥವಾ ಹುಲ್ಲಿನ ಪೊದೆಯ ಅಡಿಯಲ್ಲಿ ಸುರಂಗ ತೋಡಿ ಅಲ್ಲಿ ಬೇಸಿಗೆಯ ಸುಪ್ತಾವಸ್ಥೆಗೆ ಹೋಗುತ್ತವೆ (ಈಸ್ಟಿವೇಶನ್). ಮುಂಗಾರು ಮಳೆಯ ಮೊದಲ ಪ್ರವಾಹಕ್ಕೆ ಈ ಎಲ್ಲಾ ಪ್ರಾಣಿಗಳು ಹಾಗೂ ಅವುಗಳ ಮರಿಗಳು ಹೊರಬಂದು ಹೊಸದಾಗಿ ಬದುಕನ್ನು ಆರಂಭಿಸುತ್ತವೆ. ಆದರೆ ದುರಂತವೆಂದರೆ ಕಳೆದ 5-6 ತಿಂಗಳಿನಿಂದ ನದಿಯಲ್ಲಿ ನೀರಿಲ್ಲದೇ ಮೊಸಳೆ, ಆಮೆಗಳು ಸೇರಿದಂತೆ ಅಪಾರ ಪ್ರಮಾಣದ ವನ್ಯಜೀವಿಗಳು ಸತ್ತುಹೋಗಿವೆ. ನದಿಯುದ್ದಕ್ಕೂ ಆಮೆಗಳ ಅಸ್ಥಿಪಂಜರ ಕಂಡು ಬರುತ್ತಿದೆ. ನದಿಯಲ್ಲಿ ನೀರು ಇಲ್ಲದೇ ತಳ ಕಾಣುತ್ತಿದೆ ಎಂದು ಸಮದ್ ಕೊಟ್ಟೂರು ವ್ಯಥೆಪಟ್ಟರು.

ನದಿಯಲ್ಲಿರುವ ಅಪರೂಪದ ವನ್ಯಜೀವಿಗಳ ಸಂರಕ್ಷಣೆಗಾಗಿ 2015ರಲ್ಲಿ ಟಿ.ಬಿ.ಡ್ಯಾಮ್ ನಿಂದ ಕಂಪ್ಲಿಯವರೆಗಿನ 35 ಕಿಮೀ ನದಿಯನ್ನು“ತುಂಗಭದ್ರಾ ನೀರು ನಾಯಿ ಸಂರಕ್ಷಿತ ಮೀಸಲು” ಎಂದು ಕರ್ನಾಟಕ ಸರ್ಕಾರ ಘೋಷಿಸಿದೆ ಇವುಗಳ ಸಂರಕ್ಷಣೆ ಸರ್ಕಾರದ ಕರ್ತವ್ಯವಾಗಿದೆ ಎಂದು ನೆನಪಿಸಿದರು

LEAVE A REPLY

Please enter your comment!
Please enter your name here