ನಿರಾಶ್ರಿತ ವೃದ್ಧ ದಂಪತಿಗೆ ವಸತಿ ಭಾಗ್ಯ

0
172

ಚಾಮರಾಜನಗರ/ಕೊಳ್ಳೇಗಾಲ:ತಾಲ್ಲೂಕಿನ ಕೆಂಪನಪಾಳ್ಯದಲ್ಲಿ ಯಾವುದೇ ಆಶ್ರಯವಿಲ್ಲದೆ ವೃದ್ಧ ದಂಪತಿ ಹಲವು ದಿನಗಳಿಂದ ಮರವೊಂದರ ಕೆಳಗೆ ಜೀವನ ಕಳೆಯುತ್ತಿದ್ದ ಬಗ್ಗೆ ವರದಿಯಾಗಿತ್ತು. ಈ ಹಿನ್ನಲೆಯಲ್ಲಿ ಇದೀಗ ವೃದ್ಧ ದಂಪತಿಗೆ ಗ್ರಾಮ ಪಂಚಾಯ್ತಿ ವಸತಿ ಕಲ್ಪಿಸಿ ಕೊಟ್ಟಿದೆ.ವಿಶಕಂಠನಾಯಕ ಮತ್ತು ದೇವಿಕಮ್ಮ ಯಾವುದೇ ಸೂರಿಲ್ಲದೆ ಮರದಡಿಯನ್ನೇ ಅವಲಂಬಿಸಿಕೊಂಡಿದ್ದ ವೃದ್ಧ ದಂಪತಿ. ಇದೀಗ ವಾಸಿಸಲು ಮನೆ ಸಿಕ್ಕಿದ್ದು ವೃದ್ಧ ದಂಪತಿಯ ಮೊಗದಲ್ಲಿ ಮಂದಹಾಸ ಮೂಡಿದೆ.

ಮಕ್ಕಳ, ಸಂಬಂಧಿಕರ ಹಾರೈಕೆಯೇ ಕಾಣದ ವೃದ್ಧ ದಂಪತಿಗಳು ಮರದಡಿಯಲ್ಲೇ ಕಾಲ ಸುಡುತ್ತಿದ್ದರು. ಇದನ್ನು ಕಂಡ ರೈತ ಸಂಘದ ಮುಖಂಡರು ವಿಚಾರವನ್ನು ಗ್ರಾಮ ಪಂಚಾಯಿತಿ ಮತ್ತು ತಹಶೀಲ್ದಾರರಿಗೆ ತಿಳಿಸಿದ್ದಾರೆ. ಈ ಸಂಬಂಧ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ  ಅಧಿಕಾರಿಗಳು ಕೂಡಲೇ ಸೂರು ಕಲ್ಪಿಸುವ ಕಾರ್ಯಕ್ಕೆ ಮುಂದಾಗಿ ಅದೇ ಗ್ರಾಮದಲ್ಲಿ ಸರ್ಕಾರಿ ಸ್ಥಳವನ್ನು ಗುರುತಿಸಿ ತಾತ್ಕಾಲಿಕ ಮನೆ ನಿರ್ಮಿಸಿ ಕೊಟ್ಟಿದ್ದಾರೆ.
ಇಂದು ಬೆಳೆಗ್ಗೆ ಪೂಜಾ ಕೈಂಕರ್ಯ ಮಾಡಿಸಿ ಬಳಿಕ ವೃದ್ಧ ದಂಪತಿಯನ್ನು ಮನೆ ಪ್ರವೇಶ ಮಾಡಿಸಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ್ ಕಾಮಾಕ್ಷಮ್ಮ ಮಾತನಾಡಿ ಹೀಗೊಂದು ಕುಟುಂಬ ಮರದಡಿಯಲ್ಲಿ ವಾಸಿಸುತ್ತಿರುವ ಬಗ್ಗೆ ಮಾಹಿತಿ ದೊರಕಿತು. ಕೂಡಲೇ ಕಾರ್ಯಪ್ರವೃತ್ತರಾಗಿ ಆದಷ್ಟು ಬೇಗ ವೃದ್ಧ ದಂಪತಿಗೆ ಸೂರು ಕಲ್ಪಿಸಲು ಮುಂದಾಗಿ ಕೇವಲ ಹದಿನೈದು ದಿನಗಳಲ್ಲಿ ಮನೆ ನಿರ್ಮಾಣ ಮಾಡಲಾಗಿದೆ ಎಂದರು. ವೃದ್ಧದಂಪತಿ.ಸಿದ್ದಯ್ಯನಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕುಮಾರಿ ಮಾತನಾಡಿ ಒಟ್ಟು ಮೂವತ್ತೈದು ಸಾವಿರ ಮೊತ್ತದಲ್ಲಿ ತಾತ್ಕಾಲಿಕ ಸೂರು ನಿರ್ಮಿಸಲಾಗಿದ್ದು ಎಲ್ಲಾ ವೆಚ್ಚವನ್ನು ಗ್ರಾಮ ಪಂಚಾಯಿತಿ ಭರಿಸಿದೆ ಎಂದು ತಿಳಿಸಿದರು. ಫಲಾನುಭವಿಗಳಿಗೆ ಮುಂದೆ ಯಾವುದೇ ತೊಂದರೆಯಾಗದಂತೆ ಅನುಕೂಲ ಮಾಡಿಕೊಡುವ ಕಾರ್ಯ ಮಾಡುವುದಾಗಿ ಅವರು ಭರವಸೆ ನೀಡಿದರು.

LEAVE A REPLY

Please enter your comment!
Please enter your name here