ನಿವೇಶನ ಹಾಗೂ ಮನೆ ಮಂಜೂರಿಗೆ ಒತ್ತಾಯಿಸಿ-ಪ್ರತಿಭಟನೆ..

0
151

ಬಳ್ಳಾರಿ/ಹೊಸಪೇಟೆ. ತಾಲೂಕಿನ ಪರಿಶಿಷ್ಟ ಪಂಗಡದ ನಾಯಕ, ವಾಲ್ಮೀಕಿ, ಬೇಡ, ಹಕ್ಕಿಪಿಕ್ಕಿ, ಮೇದಾರ ಸೇರಿದಂತೆ ಬುಡಕಟ್ಟು ಸಮುದಾಯದ ಅರ್ಹ ಕುಟುಂಬಗಳಿಗೆ ಮನೆ ಮತ್ತು ನಿವೇಶನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ, ದಲಿತ ಹಕ್ಕುಗಳ ಸಮಿತಿ ತಾಲೂಕು ಘಟಕದ ನೇತೃತ್ವದಲ್ಲಿಂದು ಸ್ಥಳೀಯ ನಿವಾಸಿಗಳ ಪ್ರತಿಭಟನೆ ನಡೆಸಿದರು.

ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ನಗರದ ಹೊರ ವಲಯದ ಸಂಡೂರು ರಸ್ತೆಯಲ್ಲಿರುವ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಮರಡಿ ಜಂಬಯ್ಯ ನಾಯಕ, ರಾಜ್ಯದಲ್ಲಿ 2017ರ ಜನಸಂಖ್ಯೆ ಪ್ರಕಾರ ಎಸ್.ಟಿ.ಸಮುದಾಯದ ಜನಸಂಖ್ಯೆ 50 ಲಕ್ಷ ದಾಟಿದೆ. ಜಿಲ್ಲೆಯಲ್ಲಿ 5 ಲಕ್ಷ ದಾಟಿದೆ. 2017-18ನ ಸಾಲಿನ ವಾರ್ಷಿಕ ಬಜೆಟ್ ನಲ್ಲಿ ಎಸ್.ಟಿ.ಸಮುದಾಯದ ಅಭಿವೃದ್ಧಿಗೆ 20 ಸಾವಿರ ಕೋಟಿ ರೂ ಅನುದಾನ ಮೀಸಲು ಇಡಲಾಗಿದೆ. ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ ಬಜೆಟ್ ನಲ್ಲಿಟ್ಟ ಹಣ ಬಳಕೆಯಾಗದೆ ಶೇ.40 ರಷ್ಟು ಉಳಿಕೆಯಾಗಿದೆ.
ತಾಲೂಕಿನಲ್ಲಿ ಎಸ್.ಟಿ.ಸಮುದಾಯದ ಸಾವಿರಾರು ಪದವೀಧರರು ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಸಾವಿರಾರು ಕುಟುಂಬಗಳಿಗೆ ಸ್ವಂತಕ್ಕೆ ಕೃಷಿ ಭೂಮಿ ಇಲ್ಲದೆ ಕೃಷಿ ಕೂಲಿಕಾರರಾಗಿ ಜೀವನ ನಡೆಸುತ್ತಿದ್ದಾರೆ. ಅಲ್ಲದೆ ಸ್ವಂತ ನಿವೇಶನ ಹಾಗೂ ಮನೆಗಳಿಲ್ಲದೆ, ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಸರ್ಕಾರ ಎಸ್.ಟಿ.ಸಮುದಾಯದ ಅರ್ಹ ಕುಟುಂಬಗಳಿಗೆ ನಿವೇಶನ ಹಾಗೂ ಮನೆಗಳನ್ನು ವಿತರಿಸಬೇಕು ಸರ್ಕಾರದ ವತಿಯಿಂದ ದೊರೆಯುವ ಸಾಲ ಸೌಲಭ್ಯಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿದರು.
ನಂತರ ಬೇಡಿಕೆಗಳ ಮನವಿಪತ್ರವನ್ನು ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಮಿತಿ ಸದಸ್ಯರಾದ ಬಿ.ತಾಯಪ್ಪ ನಾಯಕ, ಬಿ.ರಮೇಶ್ ಕುಮಾರ್, ತಾಲೂಕು ಸಂಚಾಲಕ ಎಸ್.ಸತ್ಯಮೂರ್ತಿ ಸೇರಿದಂತೆ ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here