ನುಡಿ ನಮನ ಕಾರ್ಯಕ್ರಮ

0
168

ಬಳ್ಳಾರಿ/ಹೊಸಪೇಟೆ : ಪತ್ರಕರ್ತ ಎಸ್.ಎಂ.ಪ್ರಕಾಶ್ ಅವರು ವೃತ್ತಿಯಲ್ಲಿ ಪತ್ರಕರ್ತರಾಗಿದ್ದರೂ ಸಾಮಾಜಿಕ ಕಳಕಳಿಯನ್ನು ಹೊಂದಿದ್ದರು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಅಭಿಪ್ರಾಯ ಪಟ್ಟರು.

ಇಲ್ಲಿನ ಪತ್ರಿಕಾ ಭವನದಲ್ಲಿ ಸೋಮವಾರ ಜರುಗಿದ ಪತ್ರಕರ್ತ ದಿ.ಎಸ್.ಎಂ.ಪ್ರಕಾಶ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಸ್.ಎಂ.ಪ್ರಕಾಶ್ ಅವರು ಸದಾ ಹಸನ್ಮುಖಿಯಾಗಿ, ಎಲ್ಲರ ಜೊತೆ ಬೆರೆಯುವ ಗುಣ ಅವರಲ್ಲಿತ್ತು. ಯಾರು ಏನೇ ಅಂದರೂ ಅವರು ತಲೆ ಕೆಡಿಸಿಕೊಳ್ಳುತ್ತಿದ್ದಿಲ್ಲ. ಜೊತೆಗೆ ಅವರು ಸಾಮಾಜಿಕ ಕಳಕಳಿಯನ್ನು ಸಹ ಹೊಂದಿದ್ದರು. ರೈಲ್ವೇಗೆ ಸಂಬಂಧಿಸಿದ, ಮತ್ತು ವಾರ್ತಾ ಇಲಾಖೆ ಉಳಿಸಿಕೊಳ್ಳುವ ವಿಚಾರದಲ್ಲಿ ತಮ್ಮ ಬದ್ದತೆಯನ್ನು ಪ್ರದರ್ಶಿಸಿದ್ದರು. ಇಂಥ ಅಪರೂಪದ ವ್ಯಕ್ತಿ ನಮ್ಮನ್ನಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.

ಸಮಾಜಕ್ಕೆ ಬೆಳಕನ್ನು ಚೆಲ್ಲಿ ತಮ್ಮ ಬಾಳು ಕತ್ತಲಲ್ಲಿಟ್ಟು ಬದುಕುತ್ತಿರುವ ಪತ್ರಕರ್ತರ ಬದುಕು ಇಂದು ಅತಂತ್ರವಾಗಿದೆ. ಇತ್ತ ವೃತ್ತಿ ಬಿಡಲೂ ಆಗದೇ, ನಿರ್ವಹಿಸಲೂ ಆಗದೇ ತ್ರಿಶಂಕು ಸ್ಥಿತಿಯಲ್ಲಿ ನಾವಿದ್ದೇವೆ. ಪತ್ರಕರ್ತರಿಗೆ ಭದ್ರತೆ ಸಿಗಬೇಕು. ಅವರ ಆರೋಗ್ಯ ರಕ್ಷಣೆಗೆ ವಿಮೆ ಸೌಲಭ್ಯ ಸಿಗಬೇಕು ಎಂದರು.

ಜಿಲ್ಲಾ ವಾರ್ತಾಧಿಕಾರಿ ಬಿ.ಕೆ.ರಾಮಲಿಂಗಪ್ಪ ಮಾತನಾಡಿ, ಇಂದಿನ ದಿನಗಳಲ್ಲಿ ಪತ್ರಿಕೆ ನಡೆಸುವುದು ತುಂಬಾ ಕಷ್ಟದ ಕೆಲಸ. ಅಂಥದರಲ್ಲಿ ಅವರು ಪತ್ರಿಕೆ ನಿರಂತರವಾಗಿ ನಡೆಯಲೇಬೇಕು ಎಂದು ಛಲದಿಂದ ಮುನ್ನಡೆಸುತ್ತಿದ್ದರು. ಇಂದು ಅವರು ದೈವದೀನರಾಗಿದ್ದಾರೆ. ಅವರ ಕುಟುಂಬಕ್ಕೆ ಪತ್ರಿಕೆ ಮುನ್ನಡೆಸಲು ಬೇಕಾದ ಎಲ್ಲಾ ನೆರವು ನೀಡಲು ಸಿದ್ದರಿದ್ದೇವೆ ಎಂದರು.

ವಿಜ್ಞಾನ ಸಂಗಾತಿ ಪತ್ರಕೆಯ ಸಂಪಾದಕ ಜೈನುಲ್ಲಾ ಬಳ್ಳಾರಿ ಮಾತನಾಡಿ, ಎಲ್ಲಾರು ಒಂದಲ್ಲ ಒಂದು ದಿನ ಹೋಗುವವರಿದ್ದೇವೆ. ಆದರೆ ಇರುವಷ್ಟು ದಿನ ನಾವೇನು ಮಾಡಿದ್ದೇವೆ? ಮತ್ತು ಹೇಗೆ ಬದುಕಿದ್ದೇವೆ ಎಂಬುದು ಮುಖ್ಯ. ಈ ನಿಟ್ಟಿನಲ್ಲಿ ಎಸ್.ಎಂ.ಪ್ರಕಾಶ್ ಅವರು ಎಲ್ಲರ ಜೊತೆ ಬೆರೆತು, ಪ್ರೀತಿ ವಿಶ್ವಾಸದಿಂದ ಬಾಳಿದ್ದರು ಎಂದು ಸ್ಮರಿಸಿಕೊಂಡರು.

ಪತ್ರಕರ್ತರಾದ ಕೃಷ್ಣ.ಲಮಾಣಿ, ಪ್ರಕಾಶ್ ಕಾಕುಬಾಳು, ಶಿವಶಂಕರ ಬಣಗಾರ, ಸಿ.ಕೆ.ನಾಗರಾಜ, ರೇಖಾ ಪ್ರಕಾಶ್, ಹಾಗು ವಿವಿಧ ಸಂಘಟನೆಗಳ ಮುಖಂಡರಾದ ಗುಜ್ಜಲ ನಾಗರಾಜ, ಅನಿಲ್ ಜೋಶಿ, ಬಿ.ಎಸ್.ಜಂಬಯ್ಯನಾಯಕ, ಪೂಜಾರಿ ದುರುಗಪ್ಪ, ತಾಯಪ್ಪನಾಯಕ, ಶಾಂತರವರು

ಮಾತನಾಡಿದರು.

ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಬಿ.ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಕೆ.ಲಕ್ಷ್ಮಣ ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ಪೂಜಾರಿ ವೆಂಕೋಬ ನಾಯಕ ನಿರೂಪಿಸಿದರು. ಪತ್ರಕರ್ತ ಸತ್ಯನಾರಾಯಣ ವಂದಿಸಿದರು.

ಕಾರ್ಯಕ್ರಮದಲ್ಲಿ  ಪತ್ರಕರ್ತರಾದ ಬಿ.ಎಚ್.ಎಸ್. ರಾಜು, ಅನೂಪ್ ಕುಮಾರ್, ರಾಚಯ್ಯ, ಕಿಚಿಡಿ ಕೊಟ್ರೇಶ್, ಸಿ.ಪ್ರಕಾಶ್, ಸುಬ್ಬರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here