ನೂತನ ಕಟ್ಟಡದ ಉದ್ಘಾಟನಾ ಸಮಾರಂಭ..

0
277

ಬೆಂಗಳೂರು/ಕೆ ಆರ್ ಪುರ:ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು ನಗರಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಕೇಂದ್ರ ಹಾಗೂ ರಾಜ್ಯ ಸರಕಾರದ ಕರ್ತವ್ಯ. ನಮ್ಮ ಕಲ್ಪನೆಗೂ ಮೀರಿ ನಗರ ವೇಗವಾಗಿ ಬೆಳೆಯುತ್ತಿದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು.

ಕ್ಷೇತ್ರದ ವಿಜಿನಾಪುರದ ಕಸ್ತೂರಿ ನಗರದಲ್ಲಿ ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು, ಕಳೆದ ಒಂದು ದಶಕದ ಅವಧಿಯಲ್ಲಿ ಬೆಂಗಳೂರು ಸಾಕಷ್ಟು ಬದಲಾವಣೆಯಾಗಿದೆ. ಸುಮಾರು 1.20 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಬೆಂಗಳೂರಿನಲ್ಲಿ ಸುಮಾರು 69 ಲಕ್ಷ ವಾಹನಗಳಿವೆ. ಪ್ರತಿದಿನ ಸುಮಾರು 30 ಸಾವಿರ ವಾಹನಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ ಎಂದರು.
ಬೆಂಗಳೂರು ನಗರದ ಒಂದು ಬದಿಯಿಂದ ಮತ್ತೊಂದು ಬದಿಗೆ  ಹೋಗಲು ಕನಿಷ್ಠ ಎರಡರಿಂದ ಮೂರು ಗಂಟೆ ಬೇಕಾಗುತ್ತದೆ. ವಾಹನಗಳ ಸಂಚಾರ ದಟ್ಟಣೆ ಯಿಂದಾಗಿ ಮನುಷ್ಯನ ಸಮಯ, ಇಂಧನ ವ್ಯರ್ಥವಾಗುತ್ತಿದೆ. ನಗರದ ಬೆಳವಣಿಗೆಗೆ ವಿಸ್ತೃತ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು.
ಕಳೆದ 10 ವರ್ಷಗಳಲ್ಲಿ ಬೆಂಗಳೂರಿನಲ್ಲಿ ಹಲವಾರು ಮೇಲ್ಸೆತುವೆಗಳ ನಿರ್ಮಾಣ, ರಸ್ತೆಗಳ ಅಗಲೀಕರಣವಾಗಿದೆ. ಆದರೂ, ಜನರ ನಿರೀಕ್ಷೆಯ ಹಂತ ತಲುಪಲು ನಮಗೆ ಸಾಧ್ಯವಾಗುತ್ತಿಲ್ಲ. ಬಿಎಂಟಿಸಿ, ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಿ ಸಾಮೂಹಿಕ ಸಾರಿಗೆ ವ್ಯವಸ್ಥೆಗೆ ಸರಕಾರ ಒತ್ತು ನೀಡುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮೆಟ್ರೋ ರೈಲು ಸಂಚಾರದ ಮೊದಲ ಹಂತ ಲೋಕಾರ್ಪಣೆಗೊಂಡಿದ್ದು,  ಪ್ರತಿದಿನ ಸುಮಾರು 10 ಲಕ್ಷ ಜನರಿಗೆ ಅನುಕೂಲವಾಗುತ್ತಿದೆ. ದಿಲ್ಲಿಯ ಮೆಟ್ರೋದಲ್ಲಿ ಪ್ರತಿದಿನ ಸುಮಾರು 36-38 ಲಕ್ಷ ಜನ ಸಂಚರಿಸುತ್ತಿದ್ದಾರೆ. ಬೈಯಪ್ಪನಹಳ್ಳಿಯಿಂದ  ವೈಟ್ಫೀಲ್ಡ್ವರೆಗೆ ಉಪನಗರ ರೈಲು ಸೇವೆ ಒದಗಿಸುವ ಯೋಜನೆಗೂ ಚಾಲನೆ ನೀಡಲಾಗಿದೆ ಎಂದು ಸದಾನಂದಗೌಡ ಹೇಳಿದರು.
ಕೇಂದ್ರ ಸರಕಾರವು ದೇಶದ 100 ನಗರಗಳನ್ನು ಸ್ಮಾರ್ಟ್ ಸಿಟಿಗಳನ್ನಾಗಿ ಅಭಿವೃದ್ಧಿಪಡಿಸುತ್ತಿದೆ. ಅಭಿವೃದ್ಧಿ ಏಕಮುಖದಿಂದ ಸಾಧ್ಯವಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಹಾಗೂ ಕೇಂದ್ರ ಎರಡು ನಡುವೆ ಸಹಕಾರ ಇರಬೇಕು. ಐಟಿಐ ಬಳಿ ಇರುವ ನಾಲ್ಕು ಎಕರೆ ಜಾಗವನ್ನು ಬಸ್ ನಿಲ್ದಾಣಕ್ಕಾಗಿ ರಾಜ್ಯ ಸರಕಾರಕ್ಕೆ ಹಸ್ತಾಂತರಿಸುವ ಕುರಿತು ಸಂಬಂಧಪಟ್ಟ ಕೇಂದ್ರ ಸಚಿವರೊಂದಿಗೆ ಚರ್ಚಿಸುವುದು ಅವರು ಭರವಸೆ ನೀಡಿದರು.
ಶಿವರಾಮಕಾರಂತ ಬಡಾವಣೆಯ ಡಿನೋಟಿಫಿಕೆಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಷ್ಟು ದಿನ ಕುಂಭಕರ್ಣ ನಿದ್ದೆಯಲ್ಲಿದ್ದರು. ಈಗ ಹಳೆಯ ಪ್ರಕರಣಕ್ಕೆ ಜೀವ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಆದಾಯ ತೆರಿಗೆ ಇಲಾಖೆ ನಡೆದ ದಾಳಿ ಕಾಂಗ್ರೆಸ್ಸಿಗರನ್ನು ಕೆಂಗಡಿಸಿದೆ ಎಂದರು.
ರಾಜಕೀಯ ದ್ವೇಷ ರಾಜ್ಯದ ಏಳಿಗೆಗೆ ಪೂರಕವಲ್ಲ. ಶಿವರಾಮಕಾರಂತ ಬಡಾವಣೆಯ ಯೋಜನೆ ಕೈ ಬಿಟ್ಟ ನಂತರ, ಡಿನೋಟಿಫಿಕೆಷನ್ ಮಾಡಿ ಏನು ಮಾಡುವುದು. ಸಿದ್ದರಾಮಯ್ಯ ವಿರುದ್ಧ ಎಸಿಬಿಯಲ್ಲಿ ಎಷ್ಟು ದೂರುಗಳು ದಾಖಲಾಗಿವೆ ಎಂಬುದನ್ನು ಮೊದಲು ಬಹಿರಂಗಪಡಿಸಲಿ ಎಂದು ಅವರು ಆಗ್ರಹಿಸಿದರು.
ಸಿದ್ದರಾಮಯ್ಯ ವಿರುದ್ಧ ದಾಖಲಾಗಿರುವ ದೂರುಗಳ ಕುರಿತು ಎಫ್ಐಆರ್ ಯಾಕೆ ಹಾಕಲಿಲ್ಲ. ಅವರ ವಿರುದ್ಧ ಯಾಕೆ ತನಿಖೆಯಾಗುತ್ತಿಲ್ಲ. ಡಿನೋಟಿಫಿಕೆಷನ್ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉದ್ಘಾಟನಾ ಭಾಷಣ ಮಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಗರದಲ್ಲಿ 11 ಪ್ರಾದೇಶಿಕ ಸಾರಿಗೆ ಕಚೇರಿಗಳಿವೆ. ಈ ಪೈಕಿ ನಾಲ್ಕು ಕಚೇರಿಗಳು ಮಾತ್ರ ಸ್ವಂತ ಕಟ್ಟಡ ಹೊಂದಿವೆ. ಈಗ ಬೆಂಗಳೂರು(ಪೂರ್ವ) ಪ್ರಾದೇಶಿಕ ಸಾರಿಗೆ ಕಚೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿದ್ದೇವೆ. ಇಲ್ಲದೆ, ಬೆಂಗಳೂರು (ಕೇಂದ್ರ) ಮತ್ತು ಯಲಹಂಕ ಪ್ರಾದೇಶಿಕ ಸಾರಿಗೆ ಕಚೇರಿಗಳ ನೂತನ ಕಟ್ಟಡಗಳು ಪೂರ್ಣಗೊಳ್ಳುವ ಹಂತದಲ್ಲಿವೆ ಎಂದರು.
ಸಾರಿಗೆ ಇಲಾಖೆಗೆ ಸಂಬಂಧಿಸಿದ ಸೇವೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಜನಸಾಮಾನ್ಯರ ದೂರುಗಳನ್ನು ಕಡಿಮೆ ಮಾಡಲು ಪ್ರಯತ್ನಿಸ ಲಾಗುತ್ತಿದೆ. ಚಾಲನ ಪರವಾನಗಿ, ವಾಹನಗಳ ತೆರಿಗೆ ಪಾವತಿ ಸೇರಿದಂತೆ ಇನ್ನಿತರ ಸೇವೆಗಳನ್ನು ಆನ್ಲೈನ್ನಲ್ಲಿ ಒದಗಿಸಲಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಸ್ವಯಂ ಚಾಲಿತ ವಾಹನ ಚಾಲನಾ ಪರೀಕ್ಷಾ ಪಥ ನಿರ್ಮಿಸಲಾಗುವುದು. ಈಗಾಗಲೆ, ಜ್ಞಾನಭರತಿಯಲ್ಲಿ ಇಂತಹ ಪಥವನ್ನು ನಿರ್ಮಾಣ ಮಾಡಲಾಗಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಿಮರ್ಿಸಲಾಗಿರುವ ಪಥವನ್ನು ಆ.30ರಂದು ಲೋಕಾರ್ಪಣೆ ಗೊಳಿಸಲಾಗುವುದು ಎಂದು ಅವರು ಹೇಳಿದರು.
ವಾಣಿಜ್ಯ ತೆರಿಗೆ ಇಲಾಖೆ, ಅಬಕಾರಿ, ನೋಂದಣಿ ಹಾಗೂ ಮುದ್ರಾಂಕ ಇಲಾಖೆಯ ನಂತರ ಸಾರಿಗೆ ಇಲಾಖೆಯೆ ಅತೀ ಹೆಚ್ಚು ಆದಾಯವನ್ನು ರಾಜ್ಯ ಸರಕಾರದ ಬೊಕ್ಕಸಕ್ಕೆ ನೀಡುತ್ತಿದೆ. ಸುಮಾರು 6600 ಕೋಟಿ ರೂ.ಆದಾಯ ಸಾರಿಗೆ ಇಲಾಖೆಯಿಂದ ಸರಕಾರಕ್ಕೆ ಬರುತ್ತಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಬಿ.ಎ.ಬಸವರಾಜ ವಹಿಸಿದ್ದರು.  ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆಯ ಆಯುಕ್ತ ಬಿ.ದಯಾನಂದ, ಜಂಟಿ ಸಾರಿಗೆ ಆಯುಕ್ತ ಜೆ.ಜ್ಞಾನೇಂದ್ರಕುಮಾರ್, ಬಿಬಿಎಂಪಿ ಸದಸ್ಯರಾದ ಎಸ್.ರಾಜು, ಎಂ.ಎನ್.ಶ್ರೀಕಾಂತ್, ಸುರೇಶ್, ನಾಗರಾಜ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here