ಪರಿಸ್ಥಿತಿ ಅರಿತು ಸರ್ಕಾರದೊಂದಿಗೆ ಸಹಕರಿಸಿ..

0
206

ಬಳ್ಳಾರಿ /ಬಳ್ಳಾರಿ:ತುಂಗಭದ್ರಾ ಜಲಾಶಯದ ಯೋಜನೆಯಡಿ ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲೆಯಲ್ಲಿ 35,727 ಹೆಕ್ಟೇರ್, ರಾಯಚೂರು ಜಿಲ್ಲೆಯಲ್ಲಿ 1,19,171 ಹೆಕ್ಟೇರ್ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ 95,606 ಹೆಕ್ಟೇರ್ ಹೀಗೆ ಒಟ್ಟಾರೆಯಾಗಿ 2,50,504 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವಿರುತ್ತದೆ. ಮುಂಗಾರು ಹಂಗಾಮಿನಲ್ಲಿ ಸದರಿ ಅಚ್ಚುಕಟ್ಟು ಪ್ರದೇಶದಲ್ಲಿ ಸಂಪೂರ್ಣವಾಗಿ ಬೆಳೆ ಬೆಳೆಯಬೇಕಾದರೆ ಕನಿಷ್ಠ 70 ಟಿ.ಎಂ.ಸಿ. ಯಷ್ಟು ನೀರು ಅವಶ್ಯಕತೆ ಇರುತ್ತದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್ ಲಾಡ್ ತಿಳಿಸಿದ್ದಾರೆ.

ಜಲಾಶಯದ 60 ವರ್ಷಗಳ ಇತಿಹಾಸದಲ್ಲಿ 50 ವರ್ಷಗಳಲ್ಲಿ 230 ಟಿ.ಎಂ.ಸಿ. ಗಳ ಹೆಚ್ಚಿನ ಪ್ರಮಾಣದ ನೀರು ಬಂದಿದ್ದು, 10 ವರ್ಷಗಳಲ್ಲಿ ಕಡಿಮೆ ಪ್ರಮಾಣದ ನೀರು ಬಂದಿರುತ್ತದೆ.  ವಿಶೇಷವಾಗಿ 2016-17ನೇ ಸಾಲಿನಲ್ಲಿ ಜಲಾಶಯಕ್ಕೆ ಕೇವಲ 85.719 ಟಿಎಂಸಿ ಯಷ್ಟು ಒಳಹರಿವು ಬಂದು ಅದರಲ್ಲಿ ಕರ್ನಾಟಕದ ಪಾಲು 56,062 ಟಿ.ಎಂ.ಸಿ. ಬಳಕೆಯಾದರೂ ಪೂರ್ಣ ಪ್ರಮಾಣ ಬೆಳೆಗಳನ್ನು ಬೆಳೆಯಲು ಆಗಿರುವುದಿಲ್ಲ. ಪ್ರಸಕ್ತ ಸಾಲಿನಲ್ಲಿ ಜಲಾಶಯಕ್ಕೆ ಒಳಹರಿವು ಪ್ರಮಾಣವು ಕಳೆದ ವರ್ಷಕ್ಕಿಂತ ಶೇ.25 ರಷ್ಟು ಕಡಿಮೆ ಇದ್ದು, ಇನ್ನು 60 ಟಿ.ಎಂ.ಸಿ. ಯಷ್ಟು ನೀರು ಬರಬಹುದಾಗಿರುತ್ತದೆ. ಇದರಲ್ಲಿ ಕರ್ನಾಟಕದ ಪಾಲು 39.00 ಟಿ.ಎಂ.ಸಿಗಳಷ್ಟು ಆಗಿರುತ್ತದೆ. ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ ನಗರ, ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಅವಶ್ಯಕತೆಗಾಗಿ ಕನಿಷ್ಠ 15 ಟಿ.ಎಂ.ಸಿ ಯಷ್ಟು ನೀರಿನ ಅವಶ್ಯಕತೆ ಇರುತ್ತದೆ ಹಾಗಾಗಿ ನೀರಾವರಿಗಾಗಿ ಕೇವಲ 24 ಟಿ.ಎಂ.ಸಿ ಮಾತ್ರ ಲಭ್ಯವಾಗಿದ್ದು ಕಾಲುವೆಗಳಲ್ಲಿ 30 ದಿವಸ ಮಾತ್ರ ನೀರು ಹರಿಸಬಹುದಾಗಿರುತ್ತದೆ ಎಂದು ಸಚಿವ ಸಂತೋಷ್ ಲಾಡ್ ಅವರು ತಿಳಿಸಿದ್ದಾರೆ.
ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಆ.13 ರಂದು ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ ರೈತರು ಪ್ರತಿನಿಧಿಗಳೊಂದಿಗೆ ಸುಧೀರ್ಘ ಚರ್ಚೆ ನಡೆಸಿ ಅವರಿಂದ ಸಲಹೆ ಸೂಚನೆಗಳನ್ನು ಪಡೆದು ತದನಂತರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಸುದೀರ್ಘ ಚರ್ಚೆಯ ನಂತರ ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರನ್ನು ಕಾಯ್ದಿರಿಸುವುದು ಮತ್ತು 2017 ಆಗಸ್ಟ್ ಅಂತ್ಯದವರೆಗೆ ಒಳಹರಿವನ್ನು ಪರಿಗಣಿಸಿ, ಪರಿಸ್ಥಿತಿ ಸುಧಾರಿಸಿದಲ್ಲಿ ತುರ್ತು ನೀರಾವರಿ ಸಲಹಾ ಸಮಿತಿ ಸಭೆ ಕರೆದು ರೈತರಿಗೆ ಅನುಕೂಲವಾಗುವಂತಹಾ ಬೆಳೆಗಾದರು ನೀರು ಹರಿಸುವ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸದರಿ ರೈತ ಬಾಂಧವರು ಇಂದಿನ ಪರಿಸ್ಥಿತಿಯನ್ನು ಅರಿತು ಸರ್ಕಾರದೊಂದಿಗೆ ಸಹಕರಿಸಬೇಕೆಂದು ಸಂತೋಷ್ ಎಸ್.ಲಾಡ್ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here