ಪುತ್ಥಳಿ ಸ್ಥಾಪನೆ ಸಮಾರಂಭ..

0
141

ಬೆಳಗಾವಿ/ಗೋಕಾಕ: ಬೆಳಗಾವಿ ಮಹಾನಗರದಲ್ಲಿ ಸಮಾಜದ ಹಿತಕ್ಕಾಗಿ ಕೆಲಸ ಮಾಡಿದ ಮಹನೀಯರನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ ಪುತ್ಥಳಿಗಳನ್ನು ಸ್ಥಾಪನೆ ಮಾಡುತ್ತಿರುವುದು ಪ್ರಶಂಸನೀಯವಾಗಿದ್ದು, ಕೆಲವೇ ದಿನಗಳಲ್ಲಿ ಬುದ್ಧ ಮತ್ತು ಶಾಹು ಮಹಾರಾಜ ಅವರ ಪುತ್ಥಳಿಗಳನ್ನು ನಗರದಲ್ಲಿ ಸ್ಥಾಪಿಸಲಾಗುವುದು ಎಂದು ಶಾಸಕ ಮತ್ತು ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಮಹಾನಗರ ಪಾಲಿಕೆ ಆವರಣದಲ್ಲಿ ಡಾ.ಅಂಬೇಡ್ಕರ್ ಪುತ್ಥಳಿ ಸ್ಥಾಪನೆ ಸಮಾರಂಭದಲ್ಲಿ ಬುಧವಾರ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮಹಾಪುರುಷರ ತತ್ವ, ಆದರ್ಶಗಳ ಪಾಲನೆ ಕಡೆಗೂ ಲಕ್ಷ್ಯ ಕೊಡಬೇಕು, ಇದಕ್ಕಾಗಿ ಪುತ್ಥಳಿಗಳನ್ನು ಸ್ಥಾಪಿಸುವ ಮೂಲಕ ಅವರನ್ನು ನೆನಪಿಸಿಕೊಳ್ಳುವುದು ಒಳ್ಳೆಯದು ಎಂದರು.

ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ 4 ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ 126ನೇ ಜನ್ಮದಿನದ ನಿಮಿತ್ತ ಪಾಲಿಕೆ ಆವರಣದಲ್ಲಿ ಡಾ.ಅಂಬೇಡ್ಕರ್ ಪುತ್ಥಳಿ ಸ್ಥಾಪನೆಯಾಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಪರಿಸ್ಥಿತಿ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಾಸಕ ಸತೀಶ ಅವರು, ದಕ್ಷಿಣ ಕನ್ನಡದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. ಪೊಲೀಸ್ ಇಲಾಖೆ ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳುತ್ತದೆ. ಯಾವುದೇ ಕೋಮು, ಜಾತಿ ನೋಡಿ ಅಪರಾಧಿಗಳನ್ನು ನಿರ್ಧರಿಸಲು ಆಗುವುದಿಲ್ಲ. ತಪ್ಪು ಮಾಡಿದವರು ಯಾರೇ ಆಗಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳುವುದು ಪೊಲೀಸರ ಕೆಲಸ. ಈ ವಿಷಯದಲ್ಲಿ ಸರ್ಕಾರದ ಹಸ್ತಕ್ಷೇಪ ಇರುವುದಿಲ್ಲ ಎಂದರು.

ಕಾಂಗ್ರೆಸ್ ಪಕ್ಷ ಒಂದೇ ಜಾತಿ, ಕೋಮಿಗೆ ಸೀಮಿತವಾದ ಪಕ್ಷವಲ್ಲ. ಕಾಂಗ್ರೆಸ್ ಆಗಲಿ ಇನ್ನಾವುದೇ ಸರ್ಕಾರವಾಗಲಿ ಗಲಭೆ ಮಾಡಿದವರನ್ನು ಶಿಕ್ಷಿಸಲು ಒಂದು ವ್ಯವಸ್ಥೆ ಇದೆ. ಸಂಘರ್ಷ, ಗಲಭೆ ನಡೆದಾಗ ಪ್ರತಿಪಕ್ಷದವರು ರಾಜೀನಾಮೆಗೆ ಆಗ್ರಹಿಸು.ವುದು ಸಹಜ. ಆದರೆ ಸಮಸ್ಯೆಗಳಿಗೆ ರಾಜೀನಾಮೆ ಪರಿಹಾರ ಅಲ್ಲ ಎಂದು ಹೇಳಿದ ಶಾಸಕ ಸತೀಶ ಅವರು, ಯಾರು, ಯಾವ ತಪ್ಪು ಮಾಡಿದ್ದಾರೆ, ಏನು ಶಿಕ್ಷೆಯಾಗಬೇಕು ಎಂದು ನಿರ್ಧರಿಸಲು ಪೊಲೀಸ್ ಇಲಾಖೆ ಇದೆ ಎಂದು ಉತ್ತರಿಸಿದರು.

LEAVE A REPLY

Please enter your comment!
Please enter your name here