ಪ್ಲಾಸ್ಟಿಕಿನ ಫ್ಲೆಕ್ಸ್ ಮುದ್ರಿಸಿದ್ರೆ ಕ್ರಿಮಿನಲ್ ಕೇಸ್

0
534

ಬಳ್ಳಾರಿ:ಪ್ಲೇಕ್ಸ್ ಮುದ್ರಕರು ಇನ್ಮುಂದೆ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್‍ನಲ್ಲಿ ಪ್ಲೇಕ್ಸ್,ಬ್ಯಾನರ್‍ಗಳು ಮುದ್ರಿಸುವಂತಿಲ್ಲ. ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅನುಮೋದನೆ ಪಡೆದು ಬಟ್ಟೆಯಲ್ಲಿ ಮಾತ್ರ ಮುದ್ರಿಸಬೇಕು. ಒಂದು ವೇಳೆ ಉಲ್ಲಂಘಿಸಿದ್ದು ಕಂಡುಬಂದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಖಡಕ್ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ಲೇಕ್ಸ್ ಮುದ್ರಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ಲೇಕ್ಸ್ ಮುದ್ರಕರು ತಮ್ಮ ವ್ಯಾಪ್ತಿಯ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಅನುಮತಿ ಪಡೆದುಕೊಂಡು ಬಟ್ಟೆಯಲ್ಲಿಯೇ ಪ್ಲೇಕ್ಸ್ ಮತ್ತು ಬ್ಯಾನರ್‍ಗಳನ್ನು ಮುದ್ರಿಸುವ ಕೆಲಸ ಮಾಡಿ. ಮುದ್ರಿಸಿದ ಪ್ಲೇಕ್ಸ್ ಮತ್ತು ಬ್ಯಾನರ್‍ಗಳ ಕೆಳಗೆ ತಮ್ಮ ಹೆಸರು ಮತ್ತು ಮೊಬೈಲ್ ನಂಬರ್ ನಮೂದಿಸುವುದು ಕಡ್ಡಾಯ ಎಂದು ಹೇಳಿದ ಜಿಲ್ಲಾಧಿಕಾರಿ ರಾಮ್ ಪ್ರಸಾತ್ ಅವರು, ನಿಯಮ ಉಲ್ಲಂಘಿಸಿದ ಪ್ಲೇಕ್ಸ್ ಮುದ್ರಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವ ಕೆಲಸವನ್ನು ಮೇ 22ರಿಂದಲೇ ಆರಂಭಿಸುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೆಸರು ಮತ್ತು ಮೊಬೈಲ್ ನಂಬರ್ ಇರದೇ ಪ್ಲಾಸ್ಟಿಕ್‍ನಲ್ಲಿ ಪ್ರಿಂಟ್ ಮಾಡಿ ಹಾಕಿದರೇ, ಆ ಪ್ಲೇಕ್ಸ್ ಹಾಕಿಸಿಕೊಂಡವರ ವಿರುದ್ಧವೂ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸೂಚನೆ ನೀಡಿದ ಡಿಸಿ ರಾಮ್ ಪ್ರಸಾತ್ ಅವರು ನಿಯಮಗಳನ್ನು ಉಲ್ಲಂಘಿಸಿ ಪ್ಲೇಕ್ಸ್ ಮುದ್ರಕರು ಅದೇ ರೀತಿ ಪ್ಲಾಸ್ಟಿಕ್ ಹಾಗೂ ಪಾಲಿಕೆ ಅನುಮತಿ ಪಡೆಯದೇ ಮುದ್ರಿಸುತ್ತಿರುವುದು ಕಂಡುಬಂದಲ್ಲಿ ಅವರ ಅಂಗಡಿ ಮುಚ್ಚಿಸಲಾಗುವುದು ಮತ್ತು ಅಲ್ಲಿರುವ ಮುದ್ರಣ ಹಾಗೂ ಇನ್ನೀತರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಪ್ಲಾಸ್ಟಿಕ್ ಪ್ಲೇಕ್ಸ್ ಮತ್ತು ಬ್ಯಾನರ್‍ಗಳನ್ನು ನಗರದಲ್ಲಿ ಇನ್ಮುಂದೆ ನೋಡಬಾರದು ಎಂದು ಸಭೆಯುದ್ದಕ್ಕೂ ಹೇಳಿದ ಜಿಲ್ಲಾಧಿಕಾರಿಗಳು, ಬಟ್ಟೆ ಪ್ಲೇಕ್ಸ್ ಮತ್ತು ವಾಲ್ ಪೋಸ್ಟರ್‍ಗಳನ್ನು ಅಳವಡಿಸುವುದಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸೂಕ್ತ ಸ್ಥಳಗಳನ್ನು ಗುರುತಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಹೊರ ಜಿಲ್ಲೆಗಳಿಂದ ಪ್ಲಾಸ್ಟಿಕ್‍ನಲ್ಲಿ ಪ್ಲೇಕ್ಸ್‍ಗಳು ಮುದ್ರಿಸಿ ನಮ್ಮ ಜಿಲ್ಲೆಯಲ್ಲಿ ಹಾಕಲಾಗುತ್ತಿದೆ ಎಂಬ ಪ್ಲೇಕ್ಸ್ ಮುದ್ರಕರ ಪ್ರಶ್ನೆಗೆ ಉತ್ತರಿಸಿದ ಡಿಸಿ ರಾಮ್ ಪ್ರಸಾತ್ ಅವರು ಮೊದಲಿಗೆ ತಾವು ಪ್ಲಾಸ್ಟಿಕ್ ಬಿಟ್ಟು ಬಟ್ಟೆಯಲ್ಲಿ ಮುದ್ರಿಸುವುದನ್ನು ರೂಢಿಸಿಕೊಳ್ಳಿ. ಹೊರ ಜಿಲ್ಲೆಗಳಿಂದ ಪ್ಲಾಸ್ಟಿಕ್‍ನಲ್ಲಿ ಪ್ಲೇಕ್ಸ್ ಮುದ್ರಿಸಿ ತಂದು ಇಲ್ಲಿ ಅಳವಡಿಸುವವರ ವಿರುದ್ಧವೂ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
*ತಹಸೀಲ್ದಾರರು ಸಭೆ ನಡೆಸಲು ಸೂಚನೆ: ನಗರಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಅನುಮತಿ ಪಡೆದುಕೊಂಡು ಬಟ್ಟೆಯಲ್ಲಿಯೇ ಪ್ಲೇಕ್ಸ್ ಮತ್ತು ಬ್ಯಾನರ್‍ಗಳು ಮುದ್ರಿಸುವುದಕ್ಕೆ ಸಂಬಂಧಿಸಿದಂತೆ ತಾಲೂಕುಮಟ್ಟದಲ್ಲಿ ತಹಸೀಲ್ದಾರರು ಪ್ಲೇಕ್ಸ್ ಮುದ್ರಕರ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಬಳ್ಳಾರಿ ನಗರದಲ್ಲಿ ಡಿಜಿಟಲ್ ಬೋರ್ಡ್‍ಗಳು ಅಳವಡಿಸುವುದಕ್ಕೆ ಸಂಬಂಧಿಸಿದಂತೆ ಅಗತ್ಯಕ್ರಮಗಳನ್ನು ಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ಲಾಸ್ಟಿಕ್ ಸಾಮಗ್ರಿಗಳ ದಾಸ್ತಾನು ಮತ್ತು ಮಾರಾಟ ಬಳಕೆಯನ್ನು ನಿಷೇಧಿಸಲಾಗಿದ್ದು, ಸಾರ್ವಜನಿಕರು ಮತ್ತು ಉದ್ದಿಮೆದಾರರು ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಅವರು ಕೋರಿದರು. ಪ್ಲಾಸ್ಟಿಕ್ ಬಳಕೆ ಕಂಡುಬಂದಲ್ಲಿ ನಿರ್ಧಾಕ್ಷಿಣ್ಯವಾಗಿ ಕಾನೂನುರಿತ್ಯ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here