ಫುಟ್‍ಪಾತ್ ಮೇಲೆ ವ್ಯಾಪಾರ ಮಾಡಿದ್ರೇ ಮುಲಾಜಿಲ್ಲದೇ ಕ್ರಮ

0
192

ಬಳ್ಳಾರಿ:ಸುಗಮ ಸಂಚಾರ ವ್ಯವಸ್ಥೆ ಕುರಿತು ವಿಮರ್ಶನಾ ಸಭೆ-ಫುಟ್‍ಪಾತ್ ಮೇಲೆ ವ್ಯಾಪಾರ ಮಾಡಿದ್ರೇ ಮುಲಾಜಿಲ್ಲದೇ ಕ್ರಮ-ಎಸ್ಪಿ ಆರ್.ಚೇತನ್
ಬಳ್ಳಾರಿಯ ಪಾದಾಚಾರಿ ಮಾರ್ಗದಲ್ಲಿ ಮತ್ತು ಫುಟ್‍ಪಾತ್ ಸೇರಿ ರಸ್ತೆ ಆಕ್ರಮಿಸಿಕೊಂಡು ವ್ಯಾಪಾರ ಮಾಡುತ್ತಿರುವವರನ್ನು ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಮುಂದಿನ ವಾರದಿಂದ ಕಾರ್ಯಾಚರಣೆ ನಡೆಸಿ ಅಲ್ಲಿಂದ ತೆರವುಗೊಳಿಸಲಾಗುವುದು. ಏನಾದ್ರೇ ಪ್ರತಿಭಟಿಸಲು ಯತ್ನಿಸಿದರೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಆರ್.ಚೇತನ್ ಎಚ್ಚರಿಸಿದರು.

ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಬಿಡಿಎಎ ಫುಟ್ಬಾಲ್ ಮೈದಾನದ ಸಭಾಂಗಣದಲ್ಲಿ ಇಂದು ಸಂಜೆ ಏರ್ಪಡಿಸಿದ್ದ ಸುಗಮ ಸಂಚಾರ ವ್ಯವಸ್ಥೆ ಕುರಿತ ವಿಮರ್ಶನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರದಲ್ಲಿ ಪಾದಾಚಾರಿ ಮಾರ್ಗಗಳ ಮೇಲೆ ಒಂದು ಅಥವಾ ಎರಡು ಅಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರೇ ಅಂತವರನ್ನು ಮಾನವೀಯ ದೃಷ್ಟಿಯಿಂದ ಬಿಡಲಾಗುವುದು. ಪಾದಾಚಾರಿ ಮಾರ್ಗ ಮತ್ತು ರಸ್ತೆ ಆಕ್ರಮಿಸಿಕೊಂಡು ವ್ಯಾಪಾರ ಮಾಡುತ್ತಿರುವ ಬೀದಿ ಬದಿ ವ್ಯಾಪಾರಿಗಳ ವಿರುದ್ಧ ಸುಗಮ ಸಂಚಾರ ಮತ್ತು ಜನರ ಹಿತದೃಷ್ಟಿಯಿಂದ ಕ್ರಮಕೈಗೊಳ್ಳಲೇಬೇಕಾಗುತ್ತದೆ ಎಂದು ಅವರು ಹೇಳಿದರು.

ಅಂಗಡಿಯವರ ಸಹ ತಮ್ಮ ತಮ್ಮ ವಸ್ತುಗಳನ್ನು ಫುಟ್‍ಪಾತ್ ಮೇಲೆಯೇ ಇಟ್ಟುಕೊಳ್ಳುತ್ತಿದ್ದು, ನಗರದ ಹಿತದೃಷ್ಟಿಯಿಂದ ತಾವು ತಮ್ಮ ವಸ್ತುಗಳನ್ನು ಅಂಗಡಿಯಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ ಅವರು, ಇದರಿಂದ ತಾವು ಆಕ್ರಮಿಸಿಕೊಂಡ ಅರ್ಧ ಫುಟ್‍ಪಾತ್ ಜಾಗ ಖಾಲಿಯಾದಂತಾಗುತ್ತದೆ ಎಂದರು.
ಬೀದಿ ಬದಿ ವ್ಯಾಪಾರಿಗಳಿಗೆ 4.80 ಕೋಟಿ ರೂ.ವೆಚ್ಚದಲ್ಲಿ 21 ಸ್ಥಳಗಳ ಅಭಿವೃದ್ಧಿ: ಸುಪ್ರೀಂಕೋರ್ಟ್ ಆದೇಶದ ಅನ್ವಯ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಬಾರದು ಎಂಬ ಸೂಚನೆ ಇದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳಿಗಾಗಿ ನಗರದ 21 ಸ್ಥಳಗಳನ್ನು ಗುರುತಿಸಲಾಗಿದ್ದು, ಅವುಗಳನ್ನು 4.80 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುತ್ತದೆ ಎಂದು ಪಾಲಿಕೆ ಆಯುಕ್ತ ಮಂಜುನಾಥ ನಲ್ವಡಿ ಹೇಳಿದರು.
ಈಗಾಗಲೇ ಈ ಕ್ರಿಯಾಯೋಜನೆ ಸಿದ್ದಪಡಿಸಲಾಗಿದ್ದು, ಒಪ್ಪಿಗೆ ದೊರೆತ ತಕ್ಷಣ ಅನುಷ್ಠಾನಗೊಳಿಸಲಾಗುವುದು ಎಂದು ಅವರು ಹೇಳಿದರು. ಕನಕ ದುರ್ಗಮ್ಮ ದೇವಸ್ಥಾನ ಬಳಿ ಫುಟ್‍ಪಾತ್ ಮೇಲೆ ವ್ಯಾಪಾರ ಮಾಡುತ್ತಿರುವ ಬೀದಿ ಬದಿ ವ್ಯಾಪಾರಿಗಳನ್ನು ಕೆಇಬಿಗಾಗಿ ಮೀಸಲಿರಿಸುವ ಜಾಗಕ್ಕೆ ಶೀಘ್ರ ಸ್ಥಳಾಂತರಿಸುವುದಾಗಿ ಸಭೆಯಲ್ಲಿ ಉಪಸ್ಥಿತರಿದ್ದ ಸಾಮಾಜಿಕ ಕಾರ್ಯಕರ್ತ ಈಶ್ವರರೆಡ್ಡಿ ಎಂಬುವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಬೀದಿ ಬದಿ ವ್ಯಾಪಾರಿಗಳಿಗೆ ಕಡಿಮೆ ಸ್ಥಳ ಬಳಸಲು ಅವಕಾಶ ಮಾಡಿಕೊಟ್ಟು ಅವರು ಬದುಕಲು ಬಿಡಿ, ಏನೇ ಕ್ರಮಕೈಗೊಳ್ಳಿ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಬೇಡಿ ಎಂಬ ಅಭಿಪ್ರಾಯವು ವ್ಯಕ್ತವಾದವು.
ರಾಯಲ್ ಸರ್ಕಲ್‍ನಿಂದ ರಾಘವ ಕಲಾ ಮಂದಿರದವರೆಗೆ ರಸ್ತೆ ಅಗಲೀಕರಣ ಮಾಡಬೇಕು, ನಗರದ ವಿವಿಧ ಫುಟ್ ಪಾತ್‍ಗಳ ಮೇಲೆ ವ್ಯಾಪಾರ ಮಾಡುತ್ತಿರುವ  ಬೀದಿ ಬದಿ ವ್ಯಾಪಾರಿಗಳಿದ ಸುಗಮ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದ್ದು, ಅವರನ್ನು ಸ್ಥಳಾಂತರಿಸಬೇಕು, ಅಲ್ಲಂ ಸುಮಂಗಳ ಕಾಲೇಜು ಹತ್ತಿರ ಸ್ಪೀಡ್ ಬ್ರೇಕರ್ ಅಳವಡಿಸಬೇಕು, ಮಿನಿಬಸ್‍ಗಳನ್ನು ಶಾಲೆಗಳು ಉಪಯೋಗಿಸುವಂತೆ ಸೂಚಿಸಬೇಕು ಎಂಬುದು ಸೇರಿದಂತೆ ವಿವಿಧ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾದವು.
ಸಭೆಯಲ್ಲಿ ಮೇಯರ್ ವೆಂಕಟರಮಣ, ಬುಡಾ ಆಯುಕ್ತ ಜಹೀರ್ ಅಬ್ಬಾಸ್, ಸಹಾಯಕ ಆಯುಕ್ತ ಲೋಕೇಶ ಮತ್ತಿತರರು ಇದ್ದರು. ಲಾರಿ ಮಾಲೀಕ ಸಂಘ, ಆಟೋ ಮಾಲೀಕರ ಸಂಘ, ಹೋಟೆಲ್ ಮಾಲೀಕರ ಸಂಘ, ಕಿರಾಣಿ ಅಂಗಡಿಗಳ ಮಾಲೀಕರ ಸಂಘ, ಬಟ್ಟೆ, ಚಿನ್ನ ಸೇರಿದಂತೆ ವಿವಿಧ ವ್ಯಾಪಾರಿಗಳ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಭೆಯಲ್ಲಿದ್ದರು.

LEAVE A REPLY

Please enter your comment!
Please enter your name here