ಬಯಲಾಟ ಉತ್ಸವ.

0
299

ಬಳ್ಳಾರಿ / ಹೊಸಪೇಟೆ:ಸೃಜನಶೀಲವಾಗದೆ ಅನುಕರಣಶೀಲರಾಗಿರುವುದರಿಂದ ಜಾನಪದ ಸಾಯುತ್ತಿದೆ ಎಂದು ಹೇಳುವುದು ಬಹು ದೊಡ್ಡ ಸಾಮಾಜಿಕ ಅಪರಾಧವಾಗುತ್ತದೆ ಎಂದು ಹಿರಿಯ ಜಾನಪದ ತಜ್ಞ ಡಾ.ಹಿ.ಶಿ.ರಾಮಚಂದ್ರೇಗೌಡ ಹೇಳಿದರು.

ಕನ್ನಡ ವಿಶ್ವವಿದ್ಯಾಲಯ ನಾಟಕ ವಿಭಾಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಬಯಲಾಟ ಉತ್ಸವ-2017ರಲ್ಲಿ ಬಯಲಾಟಗಳು: ಪ್ರಸ್ತುತ ಸಮಸ್ಯೆ ಮತ್ತು ಸವಾಲುಗಳು ಕುರಿತ ರಾಜ್ಯಮಟ್ಟದ 2 ದಿನಗಳ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಜಾನಪದ ನಶಿಸಿ ಹೋಗುತ್ತಿದೆ. ಮುಂದೆ ಜಾನಪದ ವಿದ್ವಾಂಸರೇ ಇರುವುದಿಲ್ಲ ಎನ್ನುವುದು ವಿದ್ವಾಂಸರ ಸಮಸ್ಯೆಯೇ ಹೊರತು ಜನಸಾಮಾನ್ಯರ ಸಮಸ್ಯೆ ಅಲ್ಲ. ಏಕೆಂದರೆ ನಾವು ಪರಿಕಲ್ಪನೆಗಳನ್ನು ಹೊರಗಿನಿಂದ ಪಡೆದುಕೊಳ್ಳುತ್ತಿದ್ದೇವೆ. ಜಾನಪದ ಸಾಯುವುದಿಲ್ಲ. ಅದು ಸಾಯುವುದು ಈ ದೇಶದಲ್ಲಿ ಜನ ಇಲ್ಲದಾಗ, ಜನಗಳಿಗೆ ಅಭಿವ್ಯಕ್ತಿ ಇಲ್ಲದಾಗ ಮಾತ್ರ. ನಮ್ಮ ತಪ್ಪು ಎಲ್ಲಿದೆ ಅಂದರೆ ನಮ್ಮ ಸೃಜನಶೀಲತೆಯ ನೆಲೆ ಯಾವುದು ಎಂದು ಕಂಡುಕೊಳ್ಳದೆ ಇರುವುದರಿಂದ, ಸೃಜನಶೀಲವಾಗದೆ ಅನುಕರಣಶೀಲರಾಗಿರುವುದರಿಂದ ಜಾನಪದ ಸಾಯುತ್ತಿದೆ ಎಂದು ಹೇಳಲಾಗುತ್ತಿದೆ. ಇದು ನಾವುಗಳು ಮಾಡುತ್ತಿರುವ ದೊಡ್ಡ ಸಾಮಾಜಿಕ ಅಪರಾಧ ಎಂದು ಹೇಳಿದರು.

ಎಲ್ಲಾ ಬಯಲಾಟದ ಕಥೆಗಳು ರಾಮಾಯಣ ಮಹಾಭಾರತವನ್ನೇ ಆಧರಿಸಿವೆ. ಇವು ಒಂದು ಕಾಲದ ಪಠ್ಯಗಳು ಮಾತ್ರ. ಕೆಲವರಿಗೆ ಒಂದೇ ರಾಮಾಯಣ ಬೇಕಿದ್ದರೆ, ಬಹು ಜನರಿಗೆ ಅನೇಕ ರಾಮಾಯಣ, ಮಹಾಭಾರತ ಬೇಕಿದೆ.

ನಾವು ಜಾನಪದದವರು ಜಾನಪದ ಕ್ಷೇತ್ರದಲ್ಲಿ ಈ ವಸ್ತು ಬದಲಾವಣೆಯ ಬಗ್ಗೆ ಯೋಚನೆಯನ್ನೇ ಮಾಡಿಲ್ಲ. ಇರುವ ಕಥೆಗಳನ್ನೇ ಎಲ್ಲರೂ ಕಲಿಯುತ್ತಿದ್ದೇವೆ. ಮೂಲಭೂತ ಬದಲಾವಣೆಯ ಬಗ್ಗೆ ಜನ ಒಗ್ಗಿಕೊಳ್ಳುತ್ತಿಲ್ಲ ಎನ್ನುವುದೇ ಅಪರಾಧ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷ ನಾಡೋಜ ಬೆಳಗಲ್ಲುವೀರಣ್ಣ ಮಾತನಾಡಿ, ಬಯಲಾಟದ ಪ್ರಕಾರ ಅಳವಿನಂಚಿನಲ್ಲಿದೆ. ಯಕ್ಷಗಾನಕ್ಕೆ 2 ರಿಂದ 3 ಜಿಲ್ಲೆಗಳಲ್ಲಿ ಪ್ರೋತ್ಸಾಹ ಇದ್ದಂತೆ 27 ಜಿಲ್ಲೆಗಳಲ್ಲಿ ಬಯಲಾಟಕ್ಕೆ ವಿದ್ವಾಂಸರು, ಸಾಹಿತಿಗಳು, ರಾಜಕೀಯ ವ್ಯಕ್ತಿಗಳಿಂದ ಪ್ರೋತ್ಸಾಹ ಇಲ್ಲ. ಪ್ರೋತ್ಸಾಹದ ಜೊತೆಗೆ ಕಲೆ ಉಳಿಯಲು ಕಲಾವಿದರೂ ಶ್ರದ್ಧೆ ವಹಿಸಬೇಕು ಎಂದು ಸಲಹೆ ನೀಡಿದರು.

ಕುಲಪತಿ ಡಾ. ಮಲ್ಲಿಕಾ ಎಸ್. ಘಂಟಿ,ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದ ಪ್ರೋತ್ಸಾಹ ಧನಕ್ಕೆ ಅನುಗುಣವಾಗಿ ಸರ್ಕಾರಿ ಪ್ರೇರಿತ ರೀತಿಯಲ್ಲಿ ಸಂಘ ಸಂಸ್ಥೆಗಳು ಕಲೆಯನ್ನು ಪ್ರದರ್ಶಿಸುತ್ತಿವೆ. ಬಯಲಾಟ, ಸಣ್ಣಾಟಗಳು ಜಯಪ್ರಿಯವಾಗಲಿಲ್ಲ. ಆದರೆ ಯಕ್ಷಗಾನ ಧಾರ್ಮಿಕ ಕಾರಣಗಳಿಂದ ಕರಾವಳಿಯ ಮನೆ ಮನೆಗಳಲ್ಲಿ ಪ್ರೋತ್ಸಾಹ ಪಡೆಯುತ್ತಿದೆ. ತಪಸ್ಸಿನ ರೀತಿಯಲ್ಲಿ ಮಕ್ಕಳಿಗೆ ಕಲಿಸಲಾಗುತ್ತಿದೆ. ಈ ಆಟಗಳನ್ನು ಜನಪ್ರಿಯಗೊಳಿಸಬೇಕೆಂದರೆ ವಸ್ತು ವಿಷಯಗಳನ್ನು ಆಧುನೀಕರಣಗೊಳಿಸುವ ಅಗತ್ಯ ಕಾಣುತ್ತಿದೆ ಎಂದರು.

ಕುಲಸಚಿವ ಡಾ. ಡಿ. ಪಾಂಡುರಂಗಬಾಬುಸ್ವಾಗತಿಸಿದರು. ನಾಟಕ ವಿಭಾಗದ ಮುಖ್ಯಸ್ಥ ಡಾ.ಅಶೋಕ ಕುಮಾರ ರಂಜೇರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗೀತ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ್ರದೀಪ್ ಮಾಲ್ಗುಡಿ ನಿರೂಪಿಸಿದರು. ಅಕಾಡೆಮಿಯ ಕುಲಸಚಿವ ಎಸ್.ಎಚ್.ಶಿವರುದ್ರಪ್ಪ ಹಾಗೂ ಸದಸ್ಯ ಸಂಚಾಲಕ ಡಾ.ಬಿ.ಎಂ.ಗುರುನಾಥ ಉಪಸ್ಥಿತರಿದ್ದರು. ಹೂವಿನ ಹಡಗಲಿಯ ಬಸವರಾಜ ಮಲಶೆಟ್ಟಿ ಬಯಲಾಟ ತಂಡದವರು ವಿವಿಧ ಪ್ರಸಂಗಗಳ ಹಾಡುಗಳನ್ನು ಹಾಡಿದರು. ಹರಪನಹಳ್ಳಿಯ ಸಮಸ್ತರು ಮಹಿಳಾ ತಂಡ ಏಕಲವ್ಯ ಪ್ರಸಂಗ ದೊಡ್ಡಾಟವನ್ನು ಪ್ರದರ್ಶಿಸಿದರು. ರಾಮಸಾಗರದ ಶ್ರೀ ಪಂಚಾಕ್ಷರಿ ಬಯಲಾಟ ಕಲಾ ಸಂಘವು ಗಿರಿಜಾ ಕಲ್ಯಾಣ ಪ್ರಸಂಗದ ದೊಡ್ಡಾಟ ಪ್ರದರ್ಶಿಸಿತು.

LEAVE A REPLY

Please enter your comment!
Please enter your name here