ರೈಲು ಸಂಚಾರಕ್ಕೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ.

0
185

ಬಳ್ಳಾರಿ /ಹೊಸಪೇಟೆ : ನೆನೆಗುದಿಗೆ ಬಿದ್ದಿರುವ ಹೊಸಪೇಟೆ-ಕೊಟ್ಟೂರು ಪ್ರಯಾಣಿಕರ ರೈಲು ಸಂಚಾರ ಆರಂಭಕ್ಕೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ವಿಜಯನಗರ ರೈಲ್ವೇ ಅಭಿವೃದ್ದಿ ಕ್ರಿಯಾ ಸಮಿತಿ ಹಾಗೂ ರೈಲ್ವೇ ಸಲಹಾ ಸಮಿತಿಯ ಪದಾಧಿಕಾರಿಗಳು, ಗುರುವಾರ ಸ್ಥಳೀಯ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಹೊಸಪೇಟೆ-ಕೊಟ್ಟೂರು ಮಾರ್ಗದಲ್ಲಿ ಕೂಡಲೇ ಪ್ಯಾಸಿಂಜರ್ ರೈಲು ಸಂಚಾರಕ್ಕೆ ಚಾಲನೆ ನೀಡಬೇಕೆಂದು ಆಗ್ರಹಿಸಿ, ರೈಲ್ವೇ ಪ್ರಾದೇಶಿಕ ಅಧಿಕಾರಿ ಅನೀಶ್ ಹೆಗಡೆ ಅವರ ಮೂಲಕ ಹುಬ್ಬಳ್ಳಿಯ ನೈಋತ್ಯ ರೈಲ್ವೇ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಹೋರಾಟ ಕ್ರಿಯಾಸಮಿತಿ ಅಧ್ಯಕ್ಷರಾದ ವೈ.ಯಮುನೇಶ್ ಮಾತನಾಡಿ, ರಾಜ್ಯ ರೈಲ್ವೇ ನಕಾಶೆಯಲ್ಲಿ ಬೌಗೋಳಿಕವಾಗಿ ಮಧ್ಯಭಾಗದಲ್ಲಿ ಹಾದುಹೋಗಿರುವ ಹೊಸಪೇಟೆ-ಕೊಟ್ಟೂರು-ಹರಿಹರ ಮಾರ್ಗದ 130 ಕಿ.ಮಿ. ಅಂತರದ ನಡುವೆ ಈಗಾಗಲೇ ಕೊಟ್ಟೂರು-ಹರಿಹರ ನಡುವೆ ಪ್ಯಾಸಿಂಜರ್ ರೈಲು ಆರಂಭವಾಗಿದ್ದು 3 ವರ್ಷಗಳ ಕಳೆದರೂ ಹೊಸಪೇಟೆವರೆಗೆ ವಿಸ್ತರಣೆಯಾಗದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟಿ.ಬಿ.ಡ್ಯಾಂ ನಿಂದ ಗುಂಡಾ ನಿಲ್ದಾಣಗಳ ನಡುವೆ ರೈಲು ಮಾರ್ಗದ ಮೇಲೆ ಹಾದು ಹೋಗಿರುವ ಹೈಟೆನ್‌ಷನ್ ವಿದ್ಯುತ್ ತಂತಿ ಮಾರ್ಗಗಳ ತೊಡಕಿನಿಂದಾಗಿ ರೈಲು ಸಂಚಾರ ಆರಂಭವಾಗಿಲ್ಲ. ಈ ಭಾಗದಲ್ಲಿ 220ಕೆ.ವಿ. ಹಾಗೂ 110 ಕೆ.ವಿ. ಸಾಮರ್ಥ್ಯದ 10 ಅಧಿಕ ಸಾಮರ್ಥ್ಯದ ವಿದ್ಯುತ್ ಮಾರ್ಗಗಳು ರೈಲ್ವೆ ಹಳಿಗೆ ಕಡಿಮೆ ಎತ್ತರದಲ್ಲಿರುವುದರಿಂದ ಪ್ರಯಾಣಿಕರ ಸುರಕ್ಷಿತ ರೈಲು ಸಂಚಾರಕ್ಕೆ ತಾಂತ್ರಿಕ ಆಡಚಣೆ ಎದುರಾಗಿದೆ.  ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ 4 ತಿಂಗಳ ಹಿಂದೆ ವಲಯ ಪ್ರಧಾನ ವ್ಯಸ್ಥಾಪಕರ ಗಮನ ಸೆಳೆದಾಗ ಇದೇ ಆಗಸ್ಟ್ ತಿಂಗಳಲ್ಲಿ ಸಂಚಾರ ಆರಂಭಿಸುವುದಾಗಿ ಭರವಸೆ ನೀಡಿದ್ದರು. ಈ ಮಾರ್ಗದ ರೈಲು ಚಾಲನೆಗೆ ತೊಡಕಾಗಿರುವ ಅಂತಿಮ ಹಂತದ ವಿದ್ಯುತ್ ಮಾರ್ಗದ ಕಾಮಗಾರಿಯನ್ನು ಈ ತಿಂಗಳೊಳಗಾಗಿ ಆರಂಭಿಸದಿದ್ದರೆ ನೈರುತ್ಯ ರೈಲ್ವೇ ವಲಯದ ಪ್ರಧಾನ ಕಛೇರಿಯ ಮುಂದೆ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.
ರೈಲ್ವೇ ಪ್ರಯಾಣಿಕರ ಸೌಲಭ್ಯಗಳ ಸಮಿತಿ ಸದಸ್ಯ ಶ್ರೀನಿವಾಸ್ ರೆಡ್ಡಿ ಮಾತನಾಡಿ, ಹೊಸಪೇಟೆ-ಕೊಟ್ಟೂರು- ಹರಿಹರ ಮಾರ್ಗ ಆರಂಭವಾದರೆ ಬಳ್ಳಾರಿ ಜಿಲ್ಲೆಯ ಪಶ್ಚಿಮ ಭಾಗದ ಹಿಂದುಳಿದ ತಾಲೂಕುಗಳಲ್ಲಿ ಕೈಗಾರಿಕೆಗಳ ಬೆಳವಣಿಗೆಯಾಗಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಅಲ್ಲದೇ ಹೈದ್ರಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಗಳಿಂದ ಮಲೆನಾಡು ಮತ್ತು ಮಂಗಳೂರು ಬಂದರಿಗೆ ನೇರ ಸಂಪರ್ಕ ಕಲ್ಪಿಸಿದಂತಾಗುತ್ತದೆ. ವಿಷೇಶವಾಗಿ ಹಂಪಿ-ಹಾಸನ-ಬೇಲೂರು-ಹಳೇಬೀಡು-ಶ್ರವಣಬೆಳಗೋಳ-ಮೈಸೂರು- ಧರ್ಮಸ್ಥಳ ಮುಂತಾದ ಯಾತ್ರಾ ಸ್ಥಳಗಳ ನಡುವೆ ಸಂಪರ್ಕದೊರೆತು ಪ್ರವಾಸೋದ್ಯಮ ಬೆಳವಣಿಗೆಯಾಗುತ್ತದೆ ಎಂದರು.
ರೈಲ್ವೆ ನಿಲ್ದಾಣ ಮುಖ್ಯಸ್ಥರಾದ ಉಮರ್‌ಬಾನಿ, ಸುರಕ್ಷಾ ದಳದ ಮುಖ್ಯಸ್ಥ ಬಿಪಿನ್ ಕುಮಾರ್ ಝಾ,
ಪ್ರಹ್ಲಾದ ಸ್ವಾಮೀಜಿ, ಕ್ರಿಯಾ ಸಮಿತಿಯ ಸದಸ್ಯರಾದ ಕೆ.ಮಹೇಶ್, ಡಾ॥ಜೋಗಳೇಕರ್, ಪರಮಾನಂದ ಜನ್ಯಾನಿ, ಠಾಕೂರ್ ಜನ್ಯಾನಿ, ಸತೀಶ್ ಜಾಲಿ, ಯು.ನೀಲಕಂಠ, ಓಂಕಾರೇಶ್ವರ, ಜಯಣ್ಣ, ರಮೇಶ ಲಮಾಣಿ, ಬಿ.ದೇವದಾಸ್, ವೀರೇಶಯ್ಯ, ಸೋದಾ ವಿರುಪಾಕ್ಷಗೌಡ, ಕೆ.ಕೊಟ್ರಯ್ಯ, ವೈ.ಶೇಖರ್, ಮರಿಯಪ್ಪ, ಮಂಜಣ್ಣ, ಸಿ.ರೋಣದ ಮಠ, ಹಾಗೂ ಜಿ.ಶಾರದಾ ಯಾದವ್, ಪಾರ್ವತಿ, ರುದ್ರವೇಣಿ, ಲಕ್ಷ್ಮೀದೇವಿ, ಬಾಲಸುಬ್ಬಮ್ಮ,  ರೇಣುಕಾ,  ಪದ್ಮಾವತಿ, ಇತರರು ಇದ್ದರು.

LEAVE A REPLY

Please enter your comment!
Please enter your name here