ಬಿಜೆಪಿ ಕಾರ್ಯಕರ್ತರಿಂದ ಸಸಿ ನೆಡುವ ಕಾರ್ಯಕ್ರಮ

0
138

ಕೋಲಾರ/ ಶ್ರೀನಿವಾಸಪುರ:ಮರಗಿಡಿಗಳ ಮಾರಣ ಹೋಮದಿಂದ ಪ್ರಕೃತಿಯು ಸಮತೋಲನವನ್ನು ಕಳೆದುಕೊಂಡು ಪ್ರಾಕೃತಿಕ ವಿಕೋಪಗಳಿಗೆ ತುತ್ತಾಗುತ್ತಿದೆ. ಇದರಿಂದ ಕಾಲಕಾಲಕ್ಕೆ ಮಳೆಗಳಿಲ್ಲದೆ ಮತ್ತು ಶುದ್ಧ ಗಾಳಿಯಿಲ್ಲದೆ ಮನುಕುಲವು ಹಲವಾರು ತೊಂದರೆಗಳಿಗೆ ಈಡಾಗುತ್ತಿದೆಯೆಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ವೆಂಕಟೇಗೌಡ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬಿಜೆಪಿ ವಿಸ್ತಾರಕ್ ನಿರ್ಮಲರವರು ಮಾತನಾಡಿ ಪರಿಸರ ಸಂರಕ್ಷಣೆಯೆಂಬುದು ಆಧುನಿಕತೆಯ ಭರಾಟೆಯಲ್ಲಿ ಕಡೆಗಣಿಸುತ್ತಿದ್ದಾರೆ. ಪ್ರಕೃತಿಯಲ್ಲಿ ಕಾಲುಷ್ಯವು ಹೆಚ್ಚಾಗಿ ನಿರ್ಮಲವಾದ ವಾತಾವರಣ, ಶುದ್ಧ ಗಾಳಿಗೆ ಹಾತೊರೆಯಬೇಕಾದ ಪರಿಸ್ಥಿತಿ ಬಂದೆರುಗುತ್ತಿದೆ. ವಾತಾವರಣ ಹದೆಗೆಡುತ್ತಿರುವುದರ ಜೊತೆಗೆ ಸೂರ್ಯನ ಅತಿ ನೇರಳೆ ಕಿರಣಗಳಿಂದ ನಮ್ಮನ್ನು ರಕ್ಷಿಸುವ ಓಜೋನ್ ಪದರವು ಕರುಗುತ್ತಿರುವುದು ಎಲ್ಲರನ್ನೂ ಆತಂಕಕ್ಕೆ ದೂಡುವ ವಿಷಯವಾಗಿದೆ. ಇವನ್ನೆಲ್ಲಾ ಪರಿಗಣನೆಗೆ ತೆಗೆದುಕೊಂಡು ಬಿಜೆಪಿ ಪಕ್ಷವು ಎಲ್ಲಾ ಕಡೆಯೂ ಸಸಿಗಿಡಗಳನ್ನು ನೆಡ ಬೇಕೆಂದು ಪಕ್ಷದ ಕಾರ್ಯಕರ್ತರಿಗೆ ಮತ್ತು ವೈಕ್ತಿಕ ಆಸಕ್ತಿ ತೋರುವವರಿಗೂ ಪ್ರಕೃತಿಗೆ ಬಳುವಳಿಯಾಗಿ ಮರಗಿಡಗಳನ್ನು ನೆಟ್ಟು ಪೋಷಿಸಬೇಕೆಂದು ಕರೆಯನ್ನು ನೀಡಿದೆಯೆಂದು ಹೇಳಿದರು.
ಎಸ್.ಸಿ.ಮೋರ್ಚಾ ಜಿಲ್ಲಾಧ್ಯಕ್ಷ ಹನುಮಂತಪ್ಪ ಮಾತನಾಡಿ ಪ್ರಕೃತಿಯಲ್ಲಿ ಪ್ರಾಣಿ ಪಕ್ಷಿಗಳು ನಮ್ಮಂತೆಯೇ ಅವುಗಳಿಗೂ ಜೀವಿಸುವ ಹಕ್ಕಿದೆ. ಆದರೆ ಆಧುನಿಕತೆಯ ಮತ್ತು ಸಾಮ್ರಾಜ್ಯಶಾಹಿಯ ಧೋರಣೆಯಲ್ಲಿ ಮರಗಿಡಗಳನ್ನು ಕಡಿದು ಭೂಮಿಯನ್ನು ಕಾಂಕ್ರಿಟ್‍ಮಯವಾಗಿ ಮಾಡುತ್ತಿದ್ದಾನೆ. ಇದರಿಂದ ಮಾನವರಿಗೆ ಪೂರಕವಾದ ವಾತಾವರಣ ಸೃಷ್ಟಿಸುವಲ್ಲಿ ಮುಖ್ಯ ಪಾತ್ರ ವಹಿಸುವ ಪ್ರಾಣಿ, ಪಕ್ಷಿಗಳು ಮತ್ತು ಪ್ರಕೃತಿ ತದ್ವಿರುದ್ದವಾಗುತ್ತಿವೆ. ಇದರಿಂದ ಕಾಲಕಾಲಕ್ಕೆ ಆಗಬೇಕಾದ ಬದಲಾವಣೆಗಳು ಅಕಾಲಿಕವಾಗಿ ಆಗುತ್ತಾ ವಿವಿಧ ರೋಗ ರುಜಿನಗಳನ್ನು ತಂದೊಡ್ಡುತ್ತಿವೆಯೆಂದು ಹೇಳಿದರು.
ತಾಲ್ಲೂಕು ಮುಖಂಡ ಬಿಜೆಪಿ ಈ ಶಿವಣ್ಣ ಮಾತನಾಡಿ ಪ್ರಪಂಚವು ಇಂದು ಗ್ಲೋಬಲ್ ವಾರ್ಮಿಂಗ್ ಎಂಬ ಭೂತಕ್ಕೆ ಎದುರುವ ಪರಿಸ್ಥಿತಿ ಬಂದೊದಗಿದೆ. ಇದರಿಂದ ಪ್ರಕೃತಿಯಲ್ಲಿ ವಿಪರೀತ ಧೋರಣೆಗಳು ನಮಗೆ ಕಂಡು ಬರುತ್ತಿವೆ. ಇನ್ನಾದರೂ ಮಾನವ ಕುಲವು ಎಚ್ಚೆತ್ತು ಹೆಚ್ಚು ಮರ-ಗಿಡಗಳನ್ನು ಬೆಳೆಸುವುದರಿಂದ ಮತ್ತು ಪೋಷಣೆ ಮಾಡುವುದರಿಂದ ಪ್ರಕೃತಿಗೆ ನಮ್ಮ ಕೈಲಾದ ಬಳುವಳಿ ನೀಡಿದಂತಾಗುತ್ತದೆ. ಇದರಿಂದ ನಮ್ಮ ಮುಂದಿನ ಪೀಳಿಗೆಯು ಆರೋಗ್ಯದಿಂದ ಸಮೃದ್ಧಿಯಾಗಿರುತ್ತದೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಗಾಂಧಿನಗರ ವೆಂಕಟೇಶ್, ತಾಲ್ಲೂಕು ಘಟಕ ಉಪಾಧ್ಯಕ್ಷ ಬಂಗವಾದಿ ವಕೀಲ ಕೆ.ನಾಗರಾಜಪ್ಪ, ತಾಲ್ಲೂಕು ಯುವ ಮೋರ್ಚಾ ಅಧ್ಯಕ್ಷ ರಾಮಾಂಜಿ, ಕೊಟ್ರಗುಳಿ ನಾರಾಯಣಸ್ವಾಮಿ, ಹೊದಲಿ ನಾರಾಯಣಸ್ವಾಮಿ, ನಾಗರಾಜ್, ರಾಜು ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here