ಬೀದಿರಂಗ ದಿನಾಚರಣೆ…

0
213

ಬಳ್ಳಾರಿ/ಹೊಸಪೆಟೆ:ಆದರ್ಶ ವ್ಯಕ್ತಿಗಳಿಗೆ ಸಾವಿಲ್ಲ ಹಾಗೆಯೇ ಸಮಾಜಮುಖಿ ಸಿಜಿಕೆ ಬೌತಿಕವಾಗಿ ದೂರವಾಗಿದ್ದರೂ ಲಕ್ಷಾಂತರ ಹೃದಯಗಳಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಹಿರಿಯ ರಂಗಕರ್ಮಿ ಸಾಂಬಶಿವ ದಳವಾಯಿ ತಿಳಿಸಿದರು.

ಸಂಸ್ಕೃತಿ ಪ್ರಕಾಶನ, ಶ್ರೀ ಮಂಜುನಾಥ ಲಲಿತಾಕಲಾ ಬಳಗ, ಸ್ವಾಭಿಮಾನ ಟ್ರಸ್ಟ್, ಬೆಂಗಳೂರಿನ ಕರ್ನಾಟಕ ಬೀದಿ ನಾಟಕ ಅಕಾಡೆಮಿ, ಅವಿರತ ಪುಸ್ತಕ ಹಾಗೂ ಬೆಂಗಳೂರು ಆರ್ಟ್ ಫೌಂಡೇಷನ್ ಸಹಯೋಗದಲ್ಲಿ ನಗರದ ವಿಜನ್ ಇಂಡಿಯನ್ ಪಬ್ಲಿಕ್ ಶಾಲೆಯಲ್ಲಿ ಇಂದು ಆಯೋಜಿಸಿದ್ದ ಸಿಜಿಕೆ ಬೀದಿರಂಗ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಜಿಕೆ ರಂಗ ಪುರಸ್ಕಾರ ಸ್ವೀಕರಿಸಿ ಅವರು ಮಾತನಾಡಿದರು.

ನಾಟಕ, ನಿರ್ದೇಶನ ಹಾಗೂ ಬೆಳಕು ಸಂಯೋಜನೆಯಲ್ಲಿ ಪಳಗಿದ್ದ ಸಿಜಿಕೆ ಬೀದಿನಾಟಕಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಶ್ರಮಿಸಿದರು. ಜಾತಿ ಶೋಷಣೆ, ದೌರ್ಜನ್ಯವನ್ನು ವಿರೋಧಿಸಲು ರಂಗಭೂಮಿಯನ್ನು ಸಮರ್ಥವಾಗಿ ಬಳಸಿದರು ಎಂದು ಶ್ಲಾಘಿಸಿದರು.

ಪ್ರಸಿದ್ಧ ಸಾಹಿತಿ ದೇವನೂರು ಮಹಾದೇವ ಅವರ ಒಡಲಾಳ ಕಾದಂಬರಿಯನ್ನು ಅದ್ಭುತವಾಗಿ ರಂಗಭೂಮಿಗೆ ಅಳವಡಿಸಿ ಯಶಸ್ವಿಯಾದರು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಟಿ. ಕೊಟ್ರಪ್ಪ ಅವರು ಮಾತನಾಡಿ, ಸಿಜಿಕೆ ಅವರ ಹೆಸರೇ ಒಂದು ರೋಮಾಂಚನ. ಹೋರಾಟದ ಮನೋಭಾವ ಹೊಂದಿದ್ದ ಸಿಜಿಕೆ 70ರ ದಶಕದಲ್ಲಿ ಬಿಹಾರದಲ್ಲಿ ನಡೆದ ದಲಿತರ ಮಾರಣಹೋಮವನ್ನು ತೀವ್ರವಾಗಿ ಖಂಡಿಸಿ ರಾಜ್ಯಾದಾದ್ಯಂತ
ಹೋರಾಟ ರೂಪಿಸಿದರು. ಬೀದಿನಾಟಕ ಬೆಲ್ಚಿ ಮೂಲಕ ರಾಜ್ಯಾದಾದ್ಯಂತ ಪ್ರತಿಭಟಿಸಿದ್ದನ್ನು ಮರೆಯುವಂತಿಲ್ಲ ಎಂದು ತಿಳಿಸಿದರು.

ಒಡಲಾಳ ನಾಟಕದ ಪ್ರಮುಖ ಪಾತ್ರವಾಗಿದ್ದ ಸಾಕವ್ವನ ಪಾತ್ರಕ್ಕೆ ಪ್ರಸ್ತುತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿರುವ ಉಮಾಶ್ರೀ ಅವರನ್ನು ಆಯ್ಕೆ ಮಾಡಿದ್ದಲ್ಲದೆ ಅವರಲ್ಲಿದ್ದ ಪ್ರಬುದ್ಧ ಕಲಾವಿದೆಯನ್ನು ಸಮಾಜಕ್ಕೆ ಪರಿಚಯಿಸಿದ ಕೀರ್ತಿ ಸಿಜಿಕೆ ಅವರಿಗೆ ಸಲ್ಲುತ್ತದೆ. ಒಡಲಾಳ ನಾಟಕದ ಮೂಲಕ ಉಮಾಶ್ರೀ ಅವರ ಜನಪ್ರಿಯತೆ ಹೆಚ್ಚಾಯಿತು. ಮುಂದೆ ಸಿನಿಮಾ ರಂಗ ಪ್ರವೇಶ ಪಡೆದರು ಎಂದು ಹೇಳಿದರು.

ನೃತ್ಯ ಗುರು ಜೀಲಾನ್ ಭಾಷಾ ಅವರು, ರಂಗ ಕರ್ಮಿಗಳು, ಕಲಾವಿದರು, ಪ್ರತಿಭಾವಂತರನ್ನು ಸೂಕ್ತವಾಗಿ ಗೌರವಿಸುವ ಸಾಂಸ್ಕೃತಿಕ ಸಂಘಟಕ ಸಿ. ಮಂಜುನಾಥ್ ಅವರ ಕಾರ್ಯ ಮಾದರಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಾಭಿಮಾನ ಟ್ರಸ್ಟ್ನ ಅಧ್ಯಕ್ಷ ಎನ್. ಶ್ರೀಧರ್ ವಹಿಸಿದ್ದರು. ಶ್ರೀ ಮಂಜುನಾಥ ಲಲಿತಾ ಕಲಾಬಳಗದ ಗೌರವ ಸದಸ್ಯ ಎಂ. ಗಂಗಾಧರಯ್ಯ ಸ್ವಾಮಿ, ನೃತ್ಯ ನಿರ್ದೇಶಕ ಅಭಿಷೇಕ್ (ಸುಂಕಣ್ಣ), ರಂಗ ಕಲಾವಿದ ಅಮರೇಶಯ್ಯ ಮತ್ತಿತರರು ಉಪಸ್ಥಿತರಿದ್ದರು.
ರಂಗ ಗೀತೆ: ಜಾನಪದ ಗಾಯಕ ಅನುಮಯ್ಯ ತಿಮ್ಮಲಾಪುರ ಹಾಗೂ ಸಾಂಬಶಿವ ದಳವಾಯಿ ಅವರು ರಂಗ ಗೀತೆ, ಕ್ರಾಂತಿ ಹಾಗೂ ಜಾನಪದ ಗೀತೆಗಳನ್ನು ಹಾಡಿ ಗಮನ ಸೆಳೆದರು.
ಸಂಸ್ಕೃತಿ ಪ್ರಕಾಶನದ ಸಿ. ಮಂಜುನಾಥ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಕಿ ಆಶಾ ಸಿ.ಕಾಳೆ ವಂದಿಸಿದರು.

LEAVE A REPLY

Please enter your comment!
Please enter your name here