ಬೇನಾಮಿ ಹೆಸರಿನ ವಹಿವಾಟಿಗೆ ಬ್ರೇಕ್

0
281

ಬಳ್ಳಾರಿ / ಹೊಸಪೇಟೆ: ಸರಕಾರ ವಿತ್ತೀಯ ಕಾಯ್ದೆಯಡಿ ಜಾರಿಗೆ ತಂದಿರುವ ಹೊಸ ನಿಯಮಗಳಲ್ಲಿ ಸಹಕಾರಿಗಳ ವಲಯದಲ್ಲಿ ಒಬ್ಬ ವ್ಯಕ್ತಿ 2 ಲಕ್ಷ ರು. ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ನಗದು ವಹಿವಾಟಿಗೆ ಬ್ರೇಕ್ ಹಾಕಲಾಗಿದೆ ಎಂದು ಲೆಕ್ಕಪರಿಶೋಧಕ ಹಾಗೂ ಸಂಪನ್ಮೂಲ ವ್ಯಕ್ತಿ ಬಿ.ವಿ.ರವೀಂದ್ರನಾಥ ಹೇಳಿದರು.

ನಗರದ ಹೋಟೆಲ್ ಸಿದ್ದಾರ್ಥ ಸಭಾಂಗಣದಲ್ಲಿ  ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಹಮ್ಮಿಕೊಂಡಿದ್ದ ಆದಾಯ ತೆರಿಗೆ ಕಾನೂನು ಇತ್ತೀಚಿನ ತಿದ್ದುಪಡಿ(269ಎಸ್‌ಟಿ), ಸಹಕಾರಿಗಳ ಡಿಜಿಟಲೀಕರಣ ಹಾಗೂ ತಾಂತ್ರಿಕತೆ ಅಡಳವಡಿಕೆಯ ಕಾರ್ಯಾಗಾರದಲ್ಲಿ ಶುಕ್ರವಾರ ಮಾತನಾಡಿದ ಅವರು, 20 ಸಾವಿರ ರು.ಗೂ ಅಧಿಕವಿರುವ ವಹಿವಾಟನ್ನು ನಗದುರಹಿತವಾಗಿ ನಡೆಸಬೇಕು. ಎರಡು ಲಕ್ಷ ರು. ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಪಾವತಿಗಳನ್ನು ಅಕೌಂಟ್ ಪೇಯೀ ಚಕ್, ಬ್ಯಾಂಕಿನ ಅಕೌಂಟ್ ಡ್ರಾಪ್ಟ್, ಬ್ಯಾಂಕ್ ಅಕೌಂಟಿನ ಮೂಲಕ ಇ-ಪಾವತಿ  ಹೊರತಾಗಿ ಬೇರೆ ಯಾವುದೇ ರೀತಿಯಲ್ಲಿ ಸ್ವೀಕರಿಸುವಂತಿಲ್ಲ. ಯಾವುದೇ ತೆರಿಗೆ ಭಾಧ್ಯತೆ ಇರದ ಎರಡು ವ್ಯಕ್ತಿಗಳ ಮಧ್ಯದ ವ್ಯವಹಾರಗಳಿಗೂ ಈ ನಿಯಮ ಅನ್ವಯಿಸುತ್ತದೆ. ನಿಯಮ ಉಲ್ಲಂಘಿಸಿದಲ್ಲಿ ಸಮಾನ ಮೊತ್ತದ ದಂಡ ಪಾವತಿಸಬೇಕಾಗುತ್ತದೆ ಎಂದು ಹೇಳಿದರು.

ಕರ್ನಾಟಕ ರಾ.ಸೌ.ಸಂ.ಸ.ನಿ ಜಿಲ್ಲಾ ನಿರ್ದೇಶಕ ಎಲ್.ಎಸ್.ಆನಂದ ಅಧ್ಯಕ್ಷತೆವಹಿಸಿ ಮಾತನಾಡಿ, ಬದಲಾದ ಸಹಕಾರಿ ನಿಯಮಗಳನ್ನು ಸಮರ್ಪಕವಾಗಿ ಅಳವಡಿಸಿಕೊಂಡು ಸಹಕಾರಿಗಳು ಪಾರದರ್ಶಕವಾಗಿ ವಹಿವಾಟು ನಡೆಸಲು ತರಬೇತಿ ಕಾರ್ಯಾಗಾರಗಳು ಸಹಕಾರಿಯಾಗುತ್ತವೆ. ಬದಲಾದ ಕಾಯ್ದೆ, ತಾಂತ್ರೀಕತೆಗೆ ತಕ್ಕಂತೆ ಕಾರ್ಯನಿರ್ವಹಿಸಲು ಸಹಕಾರಿಗಳು ಸನ್ನದ್ಧರಾಗಬೇಕು ಎಂದರು.

ಆದಾಯ ತೆರಿಗೆ ಅಧಿಕಾರಿ ಲೋಕೇಶ ಕಾರ್ಯಾಗಾರವನ್ನು ಉದ್ಘಾಟಿಸಿ, 269ಎಸ್‌ಎಸ್ ಮತ್ತು269 ಎಸ್‌ಟಿ ಕುರಿತು ಸಹಕಾರಿಗಳಿಗೆ ವಿವರಿಸಿದರು.

ಕಾರ್ಯಾಗಾರದಲ್ಲಿ ಬಳ್ಳಾರಿ, ಕೊಪ್ಪಳ ಜಿಲ್ಲೆಯ 200ಕ್ಕೂ ಅಧಿಕ ಸಹಕಾರಿಗಳು ಪಾಲ್ಗೊಂಡಿದ್ದರು. ಉಪಪ್ರಧಾನ ವ್ಯವಸ್ಥಾಪಕ ರಘುನಂದನ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗೀಯ ಅಧಿಕಾರಿ ಸಂಜಯ್ ಕೊರಟೆಕರ್ ಸ್ವಾಗತಿಸಿದರು. ಬಿ.ಎಸ್.ವಿಜಯ್ ನಿರೂಪಿಸಿದರು.

 

LEAVE A REPLY

Please enter your comment!
Please enter your name here