ಮಾತೃಪೂರ್ಣ ಯೋಜನೆ ವಿರೋಧಿಸಿ ಪ್ರತಿಭಟನೆ..

0
114

ಚಿಕ್ಕಬಳ್ಳಾಪುರ/ಗುಡಿಬಂಡೆ:ರಾಜ್ಯ ಸರ್ಕಾರದ ಮಾತೃ ಪೂರ್ಣ ಯೋಜನೆ ಜಾರಿಗೆ ಮೂಲಭೂತ ಸೌಕರ್ಯ ಹಾಗೂ ಆರ್ಥಿಕ ನೆರವನ್ನು ಸರಿಯಾಗಿ ನೀಡದಿರುವುದನ್ನು ವಿರೋಧಿಸಿ ಪಟ್ಟಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮುಂಭಾಗ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಸಿಐಟಿಯು ಸಂಘಟನೆಯ ತಾಲ್ಲೂಕು ಕಾರ್ಯದರ್ಶಿ ಭಾಗ್ಯಮ್ಮ ರಾಜ್ಯ ಸರ್ಕಾರ ಮಾತೃಪೂರ್ಣ ಯೋಜನೆ ಪ್ರಾರಂಭಗೊಂಡು ಒಂದೂವರೆ ತಿಂಗಳು ಕಳೆದರೂ ಈವರೆಗೂ ಸರಿಯಾದ ರೀತಿಯಲ್ಲಿ ಸಾಮಗ್ರಿ ಖರೀದಿಗಾಗಿ ಸರಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ಈವರೆಗೂ ಇಲಾಖೆ ಅಧಿಕಾರಿಗಳು ಸಾಮಗ್ರಿಗಳನ್ನು ಒದಗಿಸಿಲ್ಲಾ. ಗರ್ಭಿಣಿ, ಬಾಣಂತಿಯರಿಗೆ ಮತ್ತು ಮಕ್ಕಳಿಗೆ ಮೊಟ್ಟೆ ಒದಗಿಸಲು ಕಡಿಮೆ ಪ್ರಮಾಣದ ಮೊತ್ತ ನೀಡುತ್ತಿದ್ದು, ಆ ಮೊತ್ತವನ್ನು ಕೂಡಲೇ ಹೆಚ್ಚಿಸಬೇಕಿದೆ. ಇಲ್ಲವಾದಲ್ಲಿ ಸರ್ಕಾರ ನೀಡುವ ಹಣದಲ್ಲಿ ಆಹಾರ ಪದಾರ್ಥಗಳನ್ನು ಖರೀದಿಸಲು ಸಾಧ್ಯವಿಲ್ಲ. ಆದ್ದರಿಂದ ಈ ಯೋಜನೆಯನ್ನು ಅನುಷ್ಟಾನಗೊಳಿಸಲು ಸಮಪರ್ಕವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದರು.ಪ್ರಸ್ತುತ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ಖಾಯಂ ಶಿಶು ಅಭಿವೃದ್ದಿ ಯೋಜನಾಧಿಕಾರಿ ಇಲ್ಲದಿರುವುದರಿಂದ ನಿಯೋಜನೆ ಮೇರೆಗೆ ಕೆಲಸ ನಿರ್ವಹಿಸುತ್ತಿರುವ ಯೋಜನಾಧಿಕಾರಿ ರಮೇಶ್‌ರವರು ಹತ್ತು ದಿನಗಳಿಗೊಮ್ಮೆ ಕಛೇರಿಗೆ ಬರುತ್ತಿದ್ದಾರೆ ಇದರಿಂದ ಅಂಗನವಾಡಿ ಹಾಗೂ ಕಛೇರಿ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ಖಾಯಂ ನೌಕರರನ್ನು ನೇಮಿಸಬೇಕು ಹಾಗೂ ಕಳೆದ ಒಂದು ವರ್ಷದಿಂದ ಬಾಕಿಯಿರುವ ಭಾಗ್ಯಲಕ್ಷ್ಮೀ ಯೋಜನೆಯ ಹಣವನ್ನು ಶೀಘ್ರವೇ ಬಿಡುಗಡೆ ಮಾಡಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ವೇತನ ಆಧಾರದ ಮೇಲೆ ಸಾಲ ಪಡೆಯಲು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಅನುವು ಮಾಡಿಕೊಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.ಈ ವೇಳೆ ಸಿಐಟಿಯು ಅಧ್ಯಕ್ಷೆ ವೆಂಕಟರತ್ನಮ್ಮ, ವೈ.ರತ್ನಮ್ಮ, ಶುಭ, ಪ್ರಮೀಳಾ, ಅರುಣ, ನರಸಮ್ಮ, ಮಂಜುಳ, ಅಶ್ವಿನಿ ಸೇರಿದಂತೆ ಹಲವರಿದ್ದರು.

LEAVE A REPLY

Please enter your comment!
Please enter your name here