ರೈತರಿಗೆ ಹೊರೆಯಾದ ಮೇವು ಸಾಗಾಣಿಕೆ

0
151

ಬಳ್ಳಾರಿ/ಹೊಸಪೇಟೆ:ಜಾನುವಾರುಗಳಿಗೆ ನೀಡುವ ಮೇವು ಕಡಿಮೆ ಬೆಲೆಯಾಗಿದ್ದರೂ ಅದನ್ನು ತಮ್ಮೂರಿಗೆ ಕೊಂಡೊಯ್ಯುವ ರೈತರಿಗೆ ದುಬಾರಿ ಸಾರಿಗೆ ವೆಚ್ಚ ಗಾಯದ ಮೇಲೆ ಮತ್ತೊಂದು ಬರೆ ಎಳೆದಂತಾಗಿದೆ. 100 ರೂ. ಮೇವಿಗೆ ನೂರಾರು ರೂಪಾಯಿ ಖರ್ಚು ಮಾಡಿ ಮೂವತ್ತಕ್ಕೂ ಅಧಿಕ ಕಿ.ಮೀ. ದೂರ ಮೇವು ಕೊಂಡೊಯ್ಯಲು ರೈತರಿಗೆ ಸಾಧ್ಯವೆ ಎನ್ನುವ ಪ್ರಶ್ನೆಗೆ ಉತ್ತರ ದೊರೆಯಲಿಲ್ಲ. ನಗರದ ತಾಲೂಕು ಪಂಚಾಯಿತಿ ವಿದ್ಯಾರಣ್ಯ ಸಭಾಂಗಣದಲ್ಲಿ 1ನೇ ಮಾಸಿಕ ಕೆಡಿಪಿ ಸಭೆ ತಾಪಂ ಅಧ್ಯಕ್ಷೆ ಜೋಗದ ನೀಲಮ್ಮ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು. ಬರಗಾಲದಿಂದಾಗಿ ಜಾನುವಾರುಗಳಿಗೆ ಮೇವು, ಕುಡಿಯುವ ನೀರು ಪೂರೈಕೆ ಕುರಿತು ಇಒ ಬಾಸ್ಕರ್ ಪ್ರಶ್ನಿಸಿದಾಗ ಸಂಬಂಧಿಸಿದ ಅಧಿಕಾರಿ ಗೈರು ಹಾಜರಿಯಿಂದಾಗಿ ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ ಕನ್ನಾರಿ ಮಾತನಾಡಿ, ಕೃಷಿ ಹೊಂಡಗಳ ನಿರ್ಮಾಣಕ್ಕೆ ರೈತರು ಮುಂದಾಗಿದ್ದಾರೆ. ತಾಡಪಾಲ್ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ. ತಾಲೂಕಿನಲ್ಲಿ 800 ಟನ್ ಮೇವನ್ನು ಮಲಪನಗುಡಿ, ಕುರೆಕುಪ್ಪ ಗ್ರಾಮಗಳಲ್ಲಿ ಸಂಗ್ರಹಿಸಿಟ್ಟಿದ್ದು, ರೈತರಿಗೆ ಕೆ.ಜಿ ಮೇವಿಗೆ 2 ರು.ಗಳಂತೆ ವಿತರಿಸಲಾಗುತ್ತಿದೆ. ರೈತರು ಬಂದು ಪಡೆಯಬಹುದು ಎಂದರು. ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಮಹಾದೇವ ಮಾತನಾಡಿ, ತಾಲೂಕಿನಲ್ಲಿ ಕೇವಲ ಎರಡು ಮೇವು ವಿತರಣಾ ಕೇಂದ್ರಗಳನ್ನು ತೆರೆದರೆ ಮೇವಿಗಿಂತ ಸಾರಿಗೆ ವೆಚ್ಚವೇ ರೈತರಿಗೆ ಭಾರವಾಗುತ್ತದೆ. ತಾಲೂಕಿನಾದ್ಯಂತ ಕನಿಷ್ಠ ಐದು ಮೇವು ವಿತರಣೆ ಕೇಂದ್ರಗಳನ್ನು ಶೀಘ್ರ ತೆರೆದು ಮೇವು ವಿತರಿಸಬೇಕು ಎಂದರು. ಸಂಬಂಧಿಸಿದ ಅಧಿಕಾರಿ ಗೈರಾಗಿದ್ದರಿಂದ ಅಧ್ಯಕ್ಷರ ಪ್ರಶ್ನೆಗೆ ಸಮರ್ಪಕ ಉತ್ತರ ದೊರೆಯಲಿಲ್ಲ. ಅಧಿಕಾರಿಗಳು ಮಾತಾಡಿಕೊಂಡು ರೈತರ ಸಮಸ್ಯೆಗೆ ನೆರವಾಗಿ ಎಂದು ಅಧ್ಯಕ್ಷರು ಹೇಳಿದರು. ಗ್ರಾಮೀಣ ಕುಡಿವ ನೀರು ಸರಬರಾಜು ವಿಭಾಗದ ಜೆಇ ನಾಗರಾಜ ಮಾತನಾಡಿ, ಬೇಸಿಗೆಯಲ್ಲಿ ಕುಡಿವ ನೀರಿಗಾಗಿ ಖಾಸಗಿ ಬೋರವೆಲ್‌ಗಳ ಮೊರೆ ಹೋಗಿದ್ದೇವೆ. ಅಂತರ್ಜಲ ಕುಸಿತದಿಂದಾಗಿ ನೀರ ತೊಂದರೆ ಯುಂಟಾಗಿದ್ದರು, ಖಾಸಗಿ ಬೋರ್ ಮಾಲೀಕರ ಮನವೊಲಿಸಿ ತಿಂಗಳಿಗೆ 7 ರಿಂದ 9 ಸಾವಿರ ರು. ನೀಡಿ ನೀರು ಖರೀದಿಸಿ ನೀರು ಪೂರೈಸಲಾಗುತ್ತಿದೆ.  ತಾಲೂಕಿನ ನಾಗಲಾಪುರ ತಾಂಡ, ಗರಗ, ನಾಗಲಾಪುರ, ಚಿಲಕನಹಟ್ಟಿ, ರಾಜಾಪುರ ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಸಲಾಗುತ್ತಿದೆ ಎಂದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಾತನಾಡಿ, ಸರಕಾರ ವಿವಿಧ ಯೋಜನೆಗಳಡಿ ನೀಡಿರುವ ಅನುದಾನವನ್ನು ಶೇ.100 ರಷ್ಟು ಬಳಸಲಾಗಿದೆ. ಶೇ.90ಕ್ಕು ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ,ಬೋಜನಾವೆಚ್ಚ,  ಮೂಲಭೂತ ಸೌಕರ್ಯಗಳಿಗೆ, ಪ.ವರ್ಗದ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಸಹಾಯ ಧನ ಸೇರಿದಂತೆ ಅಗತ್ಯತೆಗಳಿಗೆ ವಿತರಿಸಲಾಗಿದೆ. ಕೆಲ ವಿದ್ಯಾರ್ಥಿಗಳದ್ದು  ಆಧಾರ ಕಾರ್ಡ್,  ಬ್ಯಾಂಕ್ ಖಾತೆ ನಂಬರ್ ತಾಳಿ ಹೊಂದದ ಕಾರಣ ಅವರ ಹಣವನ್ನು ಹಾಗೆ ಉಳಿದಿದೆ. ವಿದ್ಯಾರ್ಥಿಗಳು ಸರಿಯಾದ ದಾಖಲೆಗಳನ್ನು ತಂದಲ್ಲಿ ಜೂನ್ ಮೊದಲ ವಾರದಲ್ಲಿ ವಿದ್ಯಾರ್ಥಿ ವೇತನವನ್ನು ವಿತರಲಾಗುವುದು ಎಂದು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ವೀರಭದ್ರಯ್ಯ ಮಾತನಾಡಿ, ಡೊನೇಷನ್ ಸ್ವೀಕರಿಸದಂತೆ ಎಲ್ಲಾ ಶಾಲೆಗಳಿಗೆ ನೋಟೀಸ್ ನೀಡಲಾಗಿದೆ. ಪ್ರತಿಷ್ಠಿತ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಪ್ರವೇಶ ಅರ್ಜಿಗಳನ್ನು ನೀಡುವ ದಿನಾಂಕ, ಮರು ಪಡೆಯುವುದು, ಅರ್ಜಿ ಪರಿಶೀಲನೆ ಮತ್ತು ಪ್ರವೇಶದ ದಿನಾಂಕಗಳನ್ನು ಪ್ರತಿ ಶಾಲೆಗಳು ನೋಟಿಸ್ ಬೋರ್ಡ್‌ನಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಪ್ರಕಟಿಸಬೇಕು ಎಂದು ಸೂಚಿಸಲಾಗಿದೆ. ತಾಲೂಕಿನಲ್ಲಿ ಬೇಸಿಗೆ ಶಿಬಿರಗಳನ್ನು  ಹಮ್ಮಿಕೊಳ್ಳಲಾಗಿದೆ. 1 ರಿಂದ 10ನೇ ತರಗತಿವರೆಗಿನ ಪಠ್ಯಪುಸ್ತಕಗಳು ಪರಿಸ್ಕೃತ ಗೊಂಡಿದ್ದರಿಂದ ಪುಸ್ತಕಗಳು ಬರಬೇಕಿದೆ. ಮಕ್ಕಳಿಗೆ ಉಚಿತವಾಗಿ ನೀಡುವ ಸಮವಸ್ತ್ರಗಳು ಸರಕಾರ ದಿಂದ ಬಂದಿವೆ. ಆರ್‌ಟಿಇ ಮಕ್ಕಳ ಪ್ರವೇಶಕ್ಕೆ ಈ ಬಾರಿ ರಾಜ್ಯದಲ್ಲಿಯೆ ಅತ್ಯಂತ ಅಧಿಕ ಅರ್ಜಿಗಳು ತಾಲೂಕಿನಿಂದ ಬಂದಿವೆ. ಎಲ್‌ಕೆಜಿ 282 ಸೀಟಿಗೆ 5502 ಅರ್ಜಿಗಳು ಬಂದಿದ್ದು, 1ನೇ ತರಗತಿಗೆ 872 ಸೀಟಿಗೆ 8769 ಅರ್ಜಿಗಳು ಬಂದಿವೆ. 6 ನೇ ತರಗತಿ ವಿದ್ಯಾರ್ಥಿ ರಂಜಿತಾ ಒಂದು ದಿನ ಮುಖ್ಯಶಿಕ್ಷಕಿಯಾಗಿ ತೆಗೆದುಕೊಂಡ ತೀರ್ಮಾನಗಳನ್ನು ಶಾಲೆಯಲ್ಲಿ ಅಳವಡಿಸಿ ಕೊಳ್ಳಲಾಗುವುದು ಎಂದು ತಿಳಿಸಿದರು. ತೋಟಗಾರಿಕೆ,  ಆರೋಗ್ಯ ಇಲಾಖೆ, ಲೋಕೋಪ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇಲಾಖೆಯ ಪ್ರಗತಿ ವರದಿಗಳನ್ನು ಒಪ್ಪಿಸಿದರು. ತಾಪಂ ಉಪಾಧ್ಯಕ್ಷ ಕೆ.ಗಾದಿಲಿಂಗಪ್ಪ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here