ರೈತರ ಪಾಲಿಗೆ ವರವಾದ ತುಂಗಭದ್ರೆ

0
191

ಬಳ್ಳಾರಿ/ ಹೊಸಪೇಟೆ:ಬಳ್ಳಾರಿ,ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ರೈತರ ಜೀವನಾಡಿ, ತುಂಗಾಭದ್ರಾ ಜಲಾಶಯ ಬರಿದಾಗಿ ನೀರಿಲ್ಲದೇ ಜನ-ಜಾನುವಾರುಗಳು ಪರಿತಪಿಸುತ್ತಿದ್ದರೂ, ಬರಿದಾದ ಒಡಲಿನಲ್ಲಿಯೂ ತುಂಗಭದ್ರೆ, ಕೆಲ ರೈತರ ಪಾಲಿಗೆ ವರವಾಗಿದ್ದಾಳೆ.

ಹೌದು! ಬರಿದಾದ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಕೆಲ ರೈತರು, ಕೃಷಿ ಮಾಡಲು ಮುಂದಾಗಿದ್ದು, ವಿವಿಧ ದವಸ, ಧ್ಯಾನ್ಯಗಳನ್ನು ಬೆಳೆಯುವ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.

ಜಲಾಶಯದ ಹಿನ್ನೀರಿನ ಪ್ರದೇಶದ ನೂರಾರು ಎಕರೆ ಪ್ರದೇಶದಲ್ಲಿ ವ್ಯಾಪ್ತಿಯಲ್ಲಿ ಕೆಲ ರೈತರು, ನೀರು ಸರಿದಂತೆ ಫಲವತ್ತಾದ ಹಸೆ ಮಣ್ಣಿನಲ್ಲಿ ಅಲಸಂದಿ,ಉದ್ದಿನ ಬೀಜವನ್ನು ಬಿತ್ತನೆ ಮಾಡಿದ್ದು, ಉತ್ತಮ ಫಸಲು ಬಂದಿದ್ದು, ತುಂಗಾಭದ್ರಾ ಒಡಲು ಹಚ್ಚಹಸಿರನಾಗಿಸಿದ್ದಾರೆ.

ಗುಂಡಾ ಕಾಯ್ದಿಟ್ಟ ಅರಣ್ಯ ಪ್ರದೇಶದ ಹಿನ್ನೀರಿನ ವ್ಯಾಪ್ತಿಯಲ್ಲಿ ನೂರಾರು ಎಕರೆ ಪ್ರದೇಶದ ನದಿ ತೀರದಲ್ಲಿ ಅಲಸಂದಿ ಮತ್ತು ಉದ್ದಿನ ಬೆಳೆಯು ಬೆಳೆದು ನಿಂತಿದ್ದು, ಇನ್ನು ಎರಡು ವಾರ ಕಳೆದರೆ, ಫಸಲು ಕೈ ಸೇರುವ ಎಂಬ ವಿಶ್ವಾಸದಲ್ಲಿ ರೈತರು, ಸ್ಥಳದಲ್ಲಿಯೇ ಹಗಲಿರುಳು ಕಾಲ ಕಳೆಯುತ್ತಿದ್ದಾರೆ.

ಈ ಹಿಂದೆ ಜಲಾಶಯದಲ್ಲಿ 33 ಹಳ್ಳಿಗಳು ಮುಳುಗಡೆಯಾಗಿದ್ದು, ಹಿನ್ನೀರಿನ ವ್ಯಾಪ್ತಿಯ ಹನುಮನಹಳ್ಳಿ, ಗಾಳೆಮ್ಮನಗುಡಿ, ಡಣಾಪುರ, ವ್ಯಾಸನಕೆರಿ, ಮರಿಯಮ್ಮನಹಳ್ಳಿ, ವೆಂಕಟಾಪುರ ಸೇರಿದಂತೆ ಹತ್ತಾರು ಗ್ರಾಮಗಳ ರೈತ ಕುಟುಂಬಗಳು ಪ್ರತಿ ವರ್ಷ ಜಲಾಶಯದ ನೀರು ಸರಿಯುತ್ತಿದ್ದಂತೆ ಹಿನ್ನೀರಿನ ಪ್ರದೇಶದಲ್ಲಿ ಕೃಷಿ ಮಾಡಲಿ ಮುಂದಾಗುತ್ತಾರೆ.

ಹೆಚ್.ಬಿ.ಹಳ್ಳಿ, ತಾಲೂಕಿನ ದೇವಸಮುಂದ್ರ, ಅಂಕ ಸಮುಂದ್ರ, ಕಡ್ಲಬಾಳು, ಕೃಷ್ಣಾಪುರ, ತಂಬ್ರಹಳ್ಳಿ, ಲಡಕನಬಾವಿ, ಬಸವರುಕೊಡ, ಕ್ಯಾದಗಿಹಳ್ಳಿ, ಹನುಮನಹಳ್ಳಿ ಸೇರಿದಂತೆ ಇತರ ಗ್ರಾಮಗಳ ವ್ಯಾಪ್ತಿಯಲ್ಲಿ ರೈತರು, ಹೆಸರು, ಮಡಿಕೆ, ಉದ್ದು, ಅಲಸಂದಿಯನ್ನು ಬೆಳೆಯುವ ಮೂಲಕ ಕೈ ತುಂಬ ಹಣ ನೋಡುತ್ತಾರೆ. ತಾಯಿ, ತನ್ನ ಹಸಿವನ್ನು ಲೆಕ್ಕಿಸದೇ ಅಳುವ ಮಗುವಿಗೆ ಹಾಲು ಉಣಿಸಿದಂತೆ, ತನ್ನ ಬರಿದಾದ ಒಡಲಿನಲ್ಲಿಯೂ ತುಂಗಭದ್ರೆ ರೈತರಿಗೆ ಆಶ್ರಯ ನೀಡುವ ಮೂಲಕ ಆಸರೆಯಾಗಿದ್ದಾಳೆ.

LEAVE A REPLY

Please enter your comment!
Please enter your name here