ಲಕ್ಷ ಲಕ್ಷ ಸಂಖ್ಯೆಯಲ್ಲಿ ಬನ್ನಿ 

0
383

ಬಳ್ಳಾರಿ /ಬಳ್ಳಾರಿ:ಅಕ್ಟೋಬರ್ ೫ ರಂದು ಬೆಂಗಳೂರಿನ ವಿಧಾನಸೌಧದ ಮುಂದೆ ಜರುಗುವ ಶ್ರೀ ವಾಲ್ಮೀಕಿ ಮಹರ್ಷಿಗಳ ಪುತ್ಥಳಿ ಅನಾವರಣ ಸಮಾವೇಶಕ್ಕೆ ರಾಜ್ಯದಿಂದ ಲಕ್ಷಾಂತರ 

ಜನರು ಭಾಗವಹಿಸುವ ಮೂಲಕ ವಾಲ್ಮೀಕಿ ಸಮುದಾಯದ ಹಕ್ಕೊತ್ತಾಯಗಳನ್ನು ಪ್ರತಿಪಾದಿಸಬೇಕು ಎಂದು ರಾಜನಹಳ್ಳಿ ಪೀಠದ ಶ್ರೀ ಪ್ರಸನ್ನಾನಂದ ಸ್ವಾಮಿ ಕರೆ ನೀಡಿದರು.

ನಗರದ ವಾಲ್ಮೀಕಿ ಭವನದಲ್ಲಿ ಸೋಮವಾರ ಜರುಗಿದ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ವಾಲ್ಮೀಕಿ ಸಮಾಜಕ್ಕೆ ೭.೫ ಮೀಸಲಾತಿ ದಕ್ಕಬೇಕು ಎಂಬುದು ನಮ್ಮ ಹಕ್ಕೊತ್ತಾಯವಾಗಿದೆ. ಶೋಷಿತ ಸಮುದಾಯದ ಪ್ರಗತಿಗೆ ಸರ್ಕಾರ ಗಮನ ಹರಿಸಬೇಕು. ವಾಲ್ಮೀಕಿ ಸಮಾಜದ ಸಮಗ್ರ ಕಲ್ಯಾಣಕ್ಕೆ ಆದ್ಯತೆ ಕೊಡಬೇಕು ಎಂಬ ಒತ್ತಾಯದ ಜೊತೆಗೆ ಶ್ರೀ ವಾಲ್ಮೀಕಿ ಮಹಿರ್ಷಿಗಳ ಪುತ್ಥಳಿಯನ್ನು ವಿಧಾನಸೌಧದ ದ್ವಾರದಲ್ಲಿ ನಿರ್ಮಿಸುವ ಮೂಲಕ ಆ ಮಹಾನ್ ಚೇತನನ ಸ್ಮರಣೆ ಮಾಡುವ ಕೆಲಸವಾಗಬೇಕಾಗಿದೆ ಎಂದು ತಿಳಿಸಿದರು.

ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳು ವಾಲ್ಮೀಕಿ ಸಮುದಾಯಕ್ಕೆ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಈ ಎರಡು ಜಿಲ್ಲೆಯಲ್ಲಿ ಹೆಚ್ಚಿನ ಜನಸಂಖ್ಯೆ ಇದ್ದು, ಇಡೀ ರಾಜ್ಯದ ವಾಲ್ಮೀಕಿ ಸಮುದಾಯದ ನೇತೃತ್ವವನ್ನು ಎರಡು ಜಿಲ್ಲೆಗಳು ವಹಿಸಬೇಕಾಗಿದೆ.

ಹೀಗಾಗಿ ಅತಿ ಹೆಚ್ಚು ಸಂಖ್ಯೆಯಲ್ಲಿ ಬೆಂಗಳೂರಿಗೆ

ಆಗಮಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಈ ಮೂಲಕ ಸಮಾಜದ ಒಗ್ಗಟ್ಟು ಪ್ರದರ್ಶನ ಮಾಡುವ ಕೆಲಸವಾಗಬೇಕು ಎಂದರು.

ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಮಾತನಾಡಿ, ದೇಶದಲ್ಲಿ ೧೦ ಕೋಟಿ ಹಾಗೂ ರಾಜ್ಯದಲ್ಲಿ ೫೦ ಲಕ್ಷ

ಜನಸಂಖ್ಯೆ ಇರುವ ವಾಲ್ಮೀಕಿ ಸಮಾಜದಿಂದ ೧೨ ಶಾಸಕರು, ಇಬ್ಬರು ಎಂಎಲ್‌ಸಿ ಹಾಗೂ ಇಬ್ಬರು ಸಂಸದರಿದ್ದಾರೆ. ರಾಜ್ಯದಲ್ಲಿಯೇ ಅತಿ ದೊಡ್ಡ ಸಮುದಾಯ ನಮ್ಮದು. ಈ ಸಮುದಾಯಕ್ಕೆ ಬೇಕಾದ ಸೌಕರ್ಯಗಳಿಗೆ ಮತ್ತಷ್ಟೂ ಹೋರಾಟದ ಜೊತೆಗೆ ಒಗ್ಗಟ್ಟು ಕಾಯ್ದುಕೊಳ್ಳುವುದು ಅತಿ ಮುಖ್ಯವಾಗಿದೆ. ಬೆಂಗಳೂರಿನಲ್ಲಿ ಅಕ್ಟೋಬರ್ ೫ ರಂದು ಜರುಗುವ ವಾಲ್ಮೀಕಿ ಪುತ್ಥಳಿ ಅನುಷ್ಠಾನ ಕಾರ್ಯಕ್ರಮಕ್ಕೆ

 

ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರು ಸೇರಬೇಕು. ಇದಕ್ಕಾಗಿ ಪೂರ್ವ ತಯಾರಿಯನ್ನು ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಲ್ಮೀಕಿ ಸಮುದಾಯದ ಬಗ್ಗೆ ಕಾಳಜಿ ಉಳ್ಳವರಾಗಿದ್ದಾರೆ.

ವಾಲ್ಮೀಕಿ ಪುತ್ಥಳಿಗೆ ಹಣಕಾಸಿನ ನೆರವು ನೀಡುವೆ ಎಂದು ಮುಂದೆ ಬಂದರು. ಆದರೆ, ನಮಗೆ ಸ್ವಾಭಿಮಾನದ ಪ್ರಶ್ನೆಯಾಗಿರುವುದರಿಂದ ನಾನೇ ಬೇಡ ಎಂದೆ. ರಾಜ್ಯದ ಎಲ್ಲ ವಾಲ್ಮೀಕಿ ಸಮಾಜದ ಜನರ ಹಣಕಾಸಿನಿಂದ ವಾಲ್ಮೀಕಿ ಪುತ್ಥಳಿ ಅನಾವರಣಗೊಳ್ಳುತ್ತಿದ್ದು, ಇದು ನನಗೆ ಅತ್ಯಂತ ಹೆಮ್ಮೆ ಎನಿಸಿದೆ ಎಂದರು.

ಕೂಡ್ಲಿಗಿ ಶಾಸಕ ನಾಗೇಂದ್ರ ಮಾತನಾಡಿ, ನಮ್ಮ ಕ್ಷೇತ್ರದಿಂದ ೧೫ ಸಾವಿರ ಜನರು ವಾಲ್ಮೀಕಿ ಪುತ್ಥಳಿ ಅನಾವರಣ ಸಮಾರಂಭಕ್ಕೆ ಬೆಂಗಳೂರಿಗೆ ತೆರಳಿಲಿದ್ದು, ಎಲ್ಲರೂ ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದು ತಿಳಿಸಿದರು.

ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿ, ಪಕ್ಷಾತೀತವಾಗಿ ಬೆಂಗಳೂರಿನ ಸಮಾರಂಭಕ್ಕೆ ಎಲ್ಲರೂ ಭಾಗವಹಿಸಬೇಕು ಎಂದು ತಿಳಿಸಿದರು.

ಸಂಡೂರು ಶಾಸಕ ಈ.ತುಕಾರಾಂ ಮಾತನಾಡಿದರು.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿ.ಎನ್.ಗಿರಿಮಲ್ಲಪ್ಪ, ರಾಯಚೂರು ಸಂಸದ ಬಿ.ವಿ.ನಾಯಕ, ಸಮಾಜದ ಮುಖಂಡರಾದ

ಎನ್.ಕೆ.ಸದಾಶಿವಪ್ಪ, ಡಿ.ತಾಯಣ್ಣ, ಹೊನ್ನೂರಪ್ಪ (ವಂಡ್ರಿ), ವಿ.ಕೆ.ಬಸಪ್ಪ, ಯರಗುಡಿ ಗೋಪಾಲ, ಸತ್ಯನಾರಾಯಣ, ಜಯರಾಮ್, ರುದ್ರಪ್ಪ, ದೊಡ್ಡ ಎರಿಸ್ವಾಮಿ, ಗುಜ್ಜಲ ನಾಗರಾಜ ಮತ್ತಿತರರಿದ್ದರು.

 

ಇಬ್ಬರೂ ಧೀಮಂತ ನಾಯಕರೇ !!

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಲ್ಮೀಕಿ ಸಮಾಜದ ಪ್ರಗತಿಗೆ ಆದ್ಯತೆ ನೀಡಿದ್ದಾರೆ. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರ ಕಡ್ಡಾಯವಾಗಿ ಅಳವಡಿಕೆಯಾಗಲು ಸಿ.ಎಂ.ಸಿದ್ದರಾಮಯ್ಯ ಅವರೇ ಕಾರಣ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಹೇಳಿದರು.

ಬಳಿಕ ಭಾಷಣ ಮಾಡಿದ ಕೂಡ್ಲಿಗಿ ಶಾಸಕ ನಾಗೇಂದ್ರ, ಸಿ.ಎಂ.ಸಿದ್ದರಾಮಯ್ಯ ಅವರಂತೆ ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪ ಸರ್ ಕೂಡ ಧೀಮಂತ ನಾಯಕರು. ಅವರ ಆಡಳಿತಾವಧಿಯಲ್ಲಿಯೇ ವಾಲ್ಮೀಕಿ ಜಯಂತಿ ರಜೆ ಘೋಷಣೆ ಮಾಡಲಾಯಿತು ಎನ್ನುವ ಮೂಲಕ ಪಕ್ಷದ ನಾಯಕರನ್ನು ಇಬ್ಬರು ಮುಖಂಡರು ಸಮರ್ಥಿಸಿಕೊಂಡರು.

LEAVE A REPLY

Please enter your comment!
Please enter your name here