“ಲೇಖನಿ ರಕ್ಷಿಸಿ” ಅಭಿಯಾನ

0
293

ಎಂ.ಎಂ.ಕಲಬುರ್ಗಿ, ಗೌರಿಲಂಕೇಶ್ ಹಂತಕರನ್ನು
ಕೂಡಲೇ ಬಂಧಿಸಲು ಒತ್ತಾಯಿಸಿ ಲೇಖನಿ ರಕ್ಷಿಸಿ ಅಭಿಯಾನ

ಬಳ್ಳಾರಿ /ಹೊಸಪೇಟೆ.: ಸಾಹಿತಿ ಎಂಎಂ. ಕಲಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ರ ಹಂತಕರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ, ಸ್ಥಳೀಯ ಸಾಹಿತಿಗಳು, ಲೇಖಕರು ಹಾಗೂ ಪತ್ರಕರ್ತರು ನಗರದಲ್ಲಿಂದು ಲೇಖನಿ ರಕ್ಷಿಸಿ ಅಭಿಯಾನ ನಡೆಸಿದರು.

ಸ್ಥಳೀಯ ತಹಶೀಲ್ದಾರರ ಕಛೇರಿ ಎದುರು ಪ್ರತಿಭಟನೆ ನಡೆಸಿದ ಸಾಹಿತಿಗಳು, ಲೇಖಕರು ಹಾಗೂ ಪತ್ರಕರ್ತರು ಮತ್ತು ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು, ರಾಜ್ಯದಲ್ಲಿ ಡಾ. ಎಂ.ಎಂ. ಕಲಬುರ್ಗಿ ಮತ್ತು ಗೌರಿ ಲಂಕೇಶ್ ಅವರನ್ನು ಗುಂಡಿಟ್ಟು ಕೊಲ್ಲಲಾಗಿದೆ. ಪಕ್ಕದ ರಾಜ್ಯವಾದ ಮಹಾರಾಷ್ಟ್ರದಲ್ಲಿಯೂ ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ ಪನ್ಸಾರೆ ಅವರನ್ನು ಹತ್ಯೆಗೈಯಲಾಗಿದೆ. ಈ ಸರಣಿ ಹತ್ಯೆಗಳು ಇಡೀ ದೇಶದ ಜನಸಾಮಾನ್ಯರಲ್ಲಿ ಭಯದ ವಾತಾವರಣ ಸೃಷ್ಟಿಸಿವೆ. ವಿಭಿನ್ನ ವಿಚಾರಧಾರೆಯ ಲೇಖಕರು, ಚಿಂತಕರು, ಕಲಾವಿದರ ಕುಟುಂಬಗಳಲ್ಲಿ ಸಾಕಷ್ಟು ತಲ್ಲಣವನ್ನು ಉಂಟು ಮಾಡಿವೆ.

ಸಂಶೋಧಕ ಕಲಬುರ್ಗಿ ಅವರ ಹತ್ಯೆಯ ನಂತರ ರಾಷ್ಟ್ರದಲ್ಲಿ ಆರಂಭವಾದ ಪ್ರಶಸ್ತಿ ವಾಪಸಾತಿ ಚಳವಳಿಗೆ ರಾಜ್ಯದ ಸುಮಾರು 30 ಸಾಹಿತಿಗಳೂ ತಮ್ಮ ಪ್ರಶಸ್ತಿಗಳನ್ನು ಸರಕಾರಕ್ಕೆ, ಸರಕಾರದ ಸಂಸ್ಥೆಗಳಿಗೆ ಹಿಂತಿರುಗಿಸುವ ಮೂಲಕ ಹತ್ಯೆಯ ಕೃತ್ಯಕ್ಕೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರೊ.ಚಂಪಾ, ಅರವಿಂದ ಮಾಲಗತ್ತಿ, ಕುಂ ವೀರಭದ್ರಪ್ಪ, ರಹಮತ್ ತರಿಕೆರೆ, ಜಿ.ಎನ್. ರಂಗನಾಥ ಮುಂತಾದ ಹಿರಿಯರ ಜೊತೆಗೆ ಯುವ ಲೇಖಕರ-ಕಲಾವಿದರ ಸಮೂಹವೇ ಇದರಲ್ಲಿ ಪಾಲ್ಗೊಂಡಾಗ ಚಳವಳಿ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆದಿತ್ತು.

ದುರದೃಷ್ಟವಶಾತ್ ಇಂಥ ಚಳವಳಿ, ಪ್ರತಿಭಟನೆಗಳ ನಂತರವೂ ಈಗ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ನಡೆದಿದೆ. ಕೋಮು ಸಾಮರಸ್ಯ, ವಿವಿಧತೆಯಲ್ಲಿ ಏಕತೆ, ಜೀವಪರ ಕಳಕಳಿಗೆ ಹೆಸರಾದ ಕರ್ನಾಟಕದಂಥ ರಾಜ್ಯದಲ್ಲಿ ಹತ್ಯಾ ಕೃತ್ಯ ಮರುಕಳಿಸಿರುವುದು ಕಳವಳದ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಸಂಕೇತವಾಗಿರುವ ಈ ಲೇಖನಿಗೆ ರಕ್ಷಣೆ ನೀಡುವುದರ ಮೂಲಕ ಪತ್ರಕರ್ತರು, ಸಾಹಿತಿಗಳು, ಚಿಂತಕರಲ್ಲಿ ಭದ್ರತಾ ಭಾವ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.

ನಂತರ ಡಾ.ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶ್ ರ ಹತ್ಯಾ ಪ್ರಕರಣಗಳನ್ನು ಬೇಧಿಸಿ, ಹಂತಕರಿಗೆ ಸೂಕ್ತ ಶಿಕ್ಷೆ ಕೊಡಿಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಮನವಿಪತ್ರವನ್ನು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.

ಲೇಖನಿ ರಕ್ಷಿಸಿ ಅಭಿಯಾನದಲ್ಲಿ ಶಿವಶಂಕರ ಬಣಗಾರ, ಡಾ.ಅರುಣ ಜೋಳದ ಕೂಡ್ಲಿಗಿ, ಎಂ.ಜಂಬಯ್ಯ ನಾಯಕ, ಬಿ.ತಾಯಪ್ಪ ನಾಯಕ, ಆರ್.ಭಾಸ್ಕರ್ ರೆಡ್ಡಿ, ನಾಗರಾಜ ಪತ್ತಾರ, ಎ.ಕರುಣಾನಿಧಿ, ಕೆ.ರಮೇಶ,ಪೂಜಾರಿ ವೆಂಕೋಬ ನಾಯಕ, ಸಿ.ಕೆ.ನಾಗರಾಜ, ಹೆಚ್.ಎಂ.ಜಂಬುನಾಥ, ಸೋದಾ. ವಿರೂಪಾಕ್ಷ ಗೌಡ, ಸಂಜಯ್, ಜಾನ್, ಸೇರಿದಂತೆ ಸಾಹಿತಿ ಗಳು, ಲೇಖಕರು, ಪತ್ರಕರ್ತರು ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here