ವಿಕಲಚೇತನರ ಕ್ರೀಡಾಕೂಟಕ್ಕೆ ಚಾಲನೆ

0
162

ಬಳ್ಳಾರಿ/ಹೊಸಪೇಟೆ: ಸ್ಥಳೀಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿಂದು ಹೊಸಪೇಟೆ ವಿಭಾಗ ಮಟ್ಟದ ವಿಕಲಚೇತನರ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.

ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ತಾಲೂಕು ಆಡಳಿತ, ನಗರಸಭೆ, ತಾಲೂಕು ಪಂಚಾಯಿತಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಮತ್ತು ವಿವಿಧ ವಿಕಲಚೇತನರ ಸಂಘಟನೆ ಸಂಯುಕ್ತಾಶ್ರಯ ದಲ್ಲಿ ಆಯೋಜಿಸಲಾಗಿದ್ದ ಹೊಸಪೇಟೆ ವಿಭಾಗ ಮಟ್ಟದ ವಿಕಲಚೇತನರ ಕ್ರೀಡಾಕೂಟವನ್ನು ಮಾಜಿ ಶಾಸಕ ರತನ್ ಸಿಂಗ್, ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ವಿಕಲಚೇತನರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳನ್ನು ಗುರುತಿಸಿಕೊಳ್ಳುವ ಮೂಲಕ ದೇಶಕ್ಕೆ ಹೆಸರು ತಂದಿದ್ದಾರೆ. ಅಂತಹ ವಿಕಲ ಚೇತನರಿಗೆ ಸರ್ಕಾರ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಹೆಚ್ಚಿನ ಪ್ರೋತ್ಸಾಹ ನೀಡಬೇಕು. ವಿಕಲಚೇತನರು ಸಮಾಜದ ಮುಖ್ಯವಾಹಿನಿಗೆ ಬರಲು ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು. ವಿಕಲಚೇತನರು ತಮ್ಮ ಅಂಗವಿಕಲತೆಯನ್ನು ಮರೆತು ಕ್ರೀಡಾಕೂಟಗಳಲ್ಲಿ ಭಾಗವಹಿಸಿದಾಗ ಯಶಸ್ಸು ದೊರೆಯುತ್ತದೆ. ವಿಭಾಗ ಮಟ್ಟದ ಕ್ರೀಡಾಕೂಟವನ್ನು ನಗರದಲ್ಲಿ ಆಯೋಜಿಸಿರು ವುದು ಅತ್ಯಂತ ಸೂಕ್ತ ಕ್ರಮವಾಗಿದೆ ಎಂದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಅಂಗವಿಕಲ ಇಲಾಖೆ ಅಧಿಕಾರಿ ಮಹಾಂತೇಶ ವಹಿಸಿದ್ದರು. ಸಮಾರಂಭದಲ್ಲಿ ತಾ.ಪಂ.ಅಧ್ಯಕ್ಷೆ ಜೆ.ನೀಲಮ್ಮ, ನಗರಸಭೆ ಅಧ್ಯಕ್ಷೆ ನಾಗಲಕ್ಷ್ಮಮ್ಮ, ಜಿ.ಪಂ.ಸದಸ್ಯೆ ಜಯಕುಮಾರಿ, ಉಪತಹಶೀಲ್ದಾರ್ ರೇಣುಕಮ್ಮ, ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಟಿ.ವೆಂಕೋಬಪ್ಪ, ನಗರಸಭೆ ಪೌರಾಯುಕ್ತ ವಿ.ರಮೇಶ್, ಸಹಾಯಕ ಸಿಡಿಪಿಓ ಪರಮೇಶ್ವರ ರಾವ್, ಆರೋಗ್ಯ ಇಲಾಖೆ ಯ ದೊಡ್ಡಮನಿ, ನಗರಸಭೆ ಸದಸ್ಯ ಬಸವರಾಜ, ಮುಖಂಡರಾದ ಧರ್ಮೇಂದ್ರ ಸಿಂಗ್, ಸಂದೀಪ್ ಸಿಂಗ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಜೆ.ರವಿ ಕುಮಾರ್ ಸ್ವಾಗತಿಸಿದರು. ಎನ್.ವೆಂಕಟೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಳವಾರ ಲೋಹಿತ್ ನಿರೂಪಿಸಿದರು. ಅಂಜಲಿ ವಂದಿಸಿದರು.

ವಿಕಲಚೇತನರ ಕ್ರೀಡಾಕೂಟದ ಅಂಗವಾಗಿ ಓಟದ ಸ್ಪರ್ಧೆ, ಮ್ಯೂಸಿಕಲ್ ಚೇರ್, ಚೆಂಡು ಎಸೆತ, ಶಾಟ್ ಪುಟ್, ಜಾವಲಿನ್ ಥ್ರೋ, ರಂಗೋಲಿ ಸ್ಪರ್ಧೆ, ಕ್ರಿಕೆಟ್ ಪಂದ್ಯಾವಳಿ ಸೇರಿದಂತೆ ವಿವಿಧ ಕ್ರೀಡೆಗಳು ಸೇರಿದಂತೆ ಅಂದರಿಗೆ, ಬುದ್ದಿಮಾಂಧ್ಯರು, ಮೂಕರು ಮತ್ತು ಕಿವುಡರು ಹಾಗೂ ಹೈಹಿಕ ಅಂಗವಿಕಲರಿಗಾಗಿ ಪ್ರತ್ಯೇಕ ಕ್ರೀಡೆಗಳು ಜರುಗಿದವು.

ಕ್ರೀಡಾಕೂಟದಲ್ಲಿ ಹೊಸಪೇಟೆ, ಕೂಡ್ಲಿಗಿ, ಹಗರಿ ಬೊಮ್ಮನಹಳ್ಳಿ ಹಾಗೂ ಹೂವಿನ ಹಡಗಲಿಯ ವಿಕಲ ಚೇತನ ಕ್ರೀಡಾಪಟುಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here