ವಿದ್ಯುತೀಕರಣ ಕಾರ್ಯ ತ್ವರಿತಗೊಳಿಸಲು ಜಿಲ್ಲಾಧಿಕಾರಿ ಸೂಚನೆ.

0
205

ಶಿವಮೊಗ್ಗ:ದೀನ ದಯಾಳ್ ಗ್ರಾಮ ಜ್ಯೋತಿ ಯೋಜನೆ ಗ್ರಾಮೀಣ ವಿದ್ಯುತೀಕರಣ ಕಾರ್ಯ ತ್ವರಿತಗೊಳಿಸಲು ಅಧಿಕಾರಿಗಳಿಗೆ ಶಿವಮೊಗ್ಗ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ದೀನ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೊತಿ ಯೋಜನೆಯಡಿ ಶಿವಮೊಗ್ಗ ಜಿಲ್ಲೆಗೆ 184 ಕೋಟಿ ರೂ. ಬಿಡುಗಡೆಯಾಗಿದ್ದು, ಗ್ರಾಮೀಣ ವಿದ್ಯುತೀಕರಣ ಕಾರ್ಯವನ್ನು ತ್ವರಿತವಾಗಿ ಅನುಷ್ಟಾನಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಅವರು ಸೂಚನೆ ನೀಡಿದರು.

ಅವರು ಬುಧವಾರ ಮೆಸ್ಕಾಂ ವತಿಯಿಂದ ಕೈಗೊಳ್ಳಲಾಗಿರುವ ವಿವಿಧ ವಿದ್ಯುತೀಕರಣ ಕಾಮಗಾರಿಗಳ ಪ್ರಗತಿ ಪರೀಶೀಲನೆ ಸಭೆ ನಡೆಸಿದರು.
ದೀನ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ಫೀಡರ್ ಸೆಪರೇಶನ್ ಕಾಮಗಾರಿಗಳಿಗೆ 181 ಕೋಟಿ ರೂ, ಆದರ್ಶ ಗ್ರಾಮ ಯೋಜನೆಗೆ 38ಲಕ್ಷ ರೂ, ಬಿ.ಪಿ.ಎಲ್ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಗ್ರಾಮೀಣ ವಿದ್ಯುತೀಕರಣಕ್ಕೆ 15.54 ಕೋಟಿ ರೂ ಹಾಗೂ ಮೀಟರ್ ಬದಲಾವಣೆ ಕಾರ್ಯಕ್ಕಾಗಿ 22.53ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕಾಮಗಾರಿಗಳ ಅನುಷ್ಟಾನ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಆದಷ್ಟು ಬೇಗನೆ ಕಾಮಗಾರಿಗಳನ್ನು ಆರಂಭಿಸುವಂತೆ ಅವರು ತಿಳಿಸಿದರು.

ಫೀಡರ್ ಸೆಪರೇಶನ್ ಕಾಮಗಾರಿ ಅಡಿಯಲ್ಲಿ ಗೃಹೋಪಯೋಗಕ್ಕಾಗಿ ಹಾಗೂ ಕೃಷಿ ಚಟುವಟಿಕೆಗಳಿಗೆ ಪ್ರತ್ಯೇಕ ಫೀಡರ್ ಒದಗಿಸಲಾಗುತ್ತಿದೆ. ಇದರಂತೆ ಶಿವಮೊಗ್ಗ 18, ಭದ್ರಾವತಿ 16, ಸೊರಬ 15 ಹಾಗೂ ಶಿಕಾರಿಪುರದಲ್ಲಿ 68 ಸೇರಿದಂತೆ ಒಟ್ಟು 68 ಹೊಸ ಫೀಡರ್‍ಗಳ ನಿರ್ಮಾಣಕ್ಕಾಗಿ ಟೆಂಡರ್ ಕರೆಯಲಾಗಿದೆ. ಜಿಲ್ಲೆಯ 7 ತಾಲೂಕುಗಳಲ್ಲಿ ಬಿ.ಪಿ.ಎಲ್ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಗ್ರಾಮೀಣ ವಿದ್ಯುತೀಕರಣ ಯೋಜನೆಯಡಿ 16540 ಫಲಾನುಭವಿಗಳನ್ನು ಗುರುತಿಸಲಾಗಿದೆ. ಗ್ರಾಮೀಣ ವಿದ್ಯುತೀಕರಣ ಮತ್ತು ಫೀಡರ್ ಸೆಪರೇಶನ್ ಕಾಮಗಾರಿಯಡಿ ಇದುವರೆಗೆ ಯಾವುದೇ ಅನುದಾನ ಬಳಕೆಯಾಗಿಲ್ಲ. ಕಾಮಗಾರಿ ಅನುಷ್ಟಾನ ತ್ವರಿತಗೊಳಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಗ್ರಾಮೀಣ ಪ್ರದೇಶದಲ್ಲಿ ಮನೆಗಳಿಗೆ ವೈಯಕ್ತಿಕ ಡಿಜಿಟಲ್ ಮೀಟರ್ ಅಳವಡಿಸುವ ಕಾಮಗಾರಿಯನ್ನು ಆರಂಭಿಸಲು ತಕ್ಷಣ ಟೆಂಡರ್ ಕರೆಯಬೇಕು. ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆಯಾಗಿರುವ ತಮ್ಮಡಿಹಳ್ಳಿ ಗ್ರಾಮದಲ್ಲಿ ಗುರುತಿಸಲಾಗಿರುವ 74ಬಿಪಿಎಲ್ ಫಲಾನುಭವಿಗಳ ಮನೆಗಳಿಗೆ ವಯರಿಂಗ್ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವ ಹಾಗೂ ಇನ್ನಿತರ ಮೂಲಸೌಲಭ್ಯ ಕಲ್ಪಿಸುವ ಕಾರ್ಯವನ್ನು ಒಂದು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಹೇಳಿದರು.

ಸರ್ಕಾರಿ ಕಟ್ಟಡಗಳಿಗೆ ಸೋಲಾರ್ ಪ್ಯಾನೆಲ್ ಅಳವಡಿಕೆ: ಇಂಟಿಗ್ರೇಟೆಡ್ ಪವರ್ ಡೆವಲಪ್‍ಮೆಂಟ್ ಯೋಜನೆಯಡಿ ಸರ್ಕಾರಿ ಕಟ್ಟಡಗಳಿಗೆ ಸೋಲಾರ್ ಪ್ಯಾನೆಲ್‍ಗಳ ಅಳವಡಿಕೆಗೆ 2.46ಕೋಟಿ ರೂ, ಮೂಲಸೌಲಭ್ಯ ಅಭಿವೃದ್ಧಿಪಡಿಸಲು 39.92ಕೋಟಿ ರೂ., ಹಾಗೂ ಡಿಜಿಟಲ್ ಮೀಟರ್‍ಗಳ ಅಳವಡಿಕೆಗಾಗಿ 4.16ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಆರಂಭಿಕ ಹಂತದಲ್ಲಿ ಶಿವಮೊಗ್ಗ ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ, ಮೆಗ್ಗಾನ್ ಆಸ್ಪತ್ರೆ, ಕೋರ್ಟ್ ಕಾಂಪ್ಲೆಕ್ಸ್, ಜಿಲ್ಲಾ ಪಂಚಾಯತ್ ಕಚೇರಿ, ತೀರ್ಥಹಳ್ಳಿ ತಾಲೂಕಿನಲ್ಲಿ ಸಾಮಥ್ರ್ಯ ಸೌಧ, ಸರ್ಕಾರಿ ಆಸ್ಪತ್ರೆ ಹಾಗೂ ನ್ಯಾಯಾಲಯ ಕಟ್ಟಡ, ಹೊಸನಗರ ಸರ್ಕಾರಿ ಆಸ್ಪತ್ರೆ, ಸೊರಬದಲ್ಲಿ ಸರ್ಕಾರಿ ಆಸ್ಪತ್ರೆ, ತಹಶೀಲ್ದಾರ್ ಕಚೇರಿ ಮತ್ತು ಪೊಲೀಸ್ ಸ್ಟೇಷನ್, ಸಾಗರ ಸರ್ಕಾರಿ ಆಸ್ಪತ್ರೆ, ಶಿಕಾರಿಪುರದಲ್ಲಿ ಟೌನ್ ಪೊಲೀಸ್ ಸ್ಟೇಷನ್, ತಹಶೀಲ್ದಾರ್ ಕಚೇರಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಶಿರಾಳಕೊಪ್ಪದಲ್ಲಿ ಉಪವಿಭಾಗಾಧಿಕಾರಿ ಕಚೇರಿಯನ್ನು ಸೋಲಾರ್ ಮೇಲ್ಘಾವಣಿ ಕಾಮಗಾರಿಗೆ ಆಯ್ಕೆ ಮಾಡಲಾಗಿದ್ದು, ಟೆಂಡರ್ ಅಂತಿಮಗೊಳಿಸಲಾಗಿದೆ. ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ನಿವೇಶನ ಒದಗಿಸಲು ಕ್ರಮ: ಅನುಮೋದನೆ ದೊರಕಿರುವ ಹೊಸ ವಿದ್ಯುತ್ ಉಪಕೇಂದ್ರಗಳು ಹಾಗೂ ವಿದ್ಯುತ್ ಮಾರ್ಗದ ಕಾಮಗಾರಿಗಳಿಗೆ ಅಗತ್ಯ ನಿವೇಶನಗಳನ್ನು ಒದಗಿಸಲಾಗುವುದು. ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿ ಮತ್ತು ಶಿವಮೊಗ್ಗ ಗ್ರಾಮಾಂತರದ ಕೊಮ್ಮನಾಳುವಿನಲ್ಲಿ ನಿವೇಶನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಮೆಸ್ಕಾಂ ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here