ವೀರ ಮದಕರಿನಾಯಕ ವಂಶಸ್ಥರಿಗೆ ಅಳಿಲು ಸೇವೆ ಸಲ್ಲಿಸಿದ ಮಾಜಿ ಸಚಿವ

0
372

ಚಿತ್ರದುರ್ಗ:ಈ ಕನ್ನಡ ಮಣ್ಣಿನ ಹೆಮ್ಮೆಯ ಮಗ, ಚಿತ್ರದುರ್ಗದ ವೀರ ಮದಕರಿ ನಾಯಕನ ವಂಶಸ್ಥ ವೀರಭದ್ರ ನಾಯಕರು ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಬಿಜೆಪಿ ಎಸ್‍ಟಿ ಮೋರ್ಚ ರಾಜ್ಯಾಧ್ಯಕ್ಷ, ಮಾಜಿ ಸಚಿವ ನರಸಿಂಹ (ರಾಜೂಗೌಡ) ನಾಯಕರು ರೂ.1 ಲಕ್ಷ ಅಳಿಲು ಸೇವೆ ನೀಡಿ ಆರೋಗ್ಯ ವಿಚಾರಿಸಿದರು.
ಚಿತ್ರದುರ್ಗದ ಶ್ರೀ ಬಸವೇಶ್ವರ ಆಸ್ಪತ್ರೆಯಲ್ಲಿ ವೀರಭದ್ರ ನಾಯಕ ಚಿಕಿತ್ಸೆ ಪಡೆಯುತ್ತಿರುವುದನ್ನು ಮಾಧ್ಯಮಗಳು ಬಿತ್ತರಿಸಿದ್ದವು.  ವಿಷಯ ತಿಳಿದ ರಾಜೂಗೌಡ ಅವರು ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದರು. ಬಳಿಕ ವೀರಭದ್ರ ನಾಯಕ ಅವರ ಪುತ್ರರಿಗೆ ಹಣಕಾಸಿನ ನೆರವು ನೀಡಿ ಚಿಕಿತ್ಸೆಗೆ ತಗಲುವ ವೆಚ್ಚದ ಬಗ್ಗೆ ಚಿಂತಿಸದಿರುವಂತೆ ನೈತಿಕ ಸ್ಥೈರ್ಯ ತುಂಬಿದರು. ಈವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗದ ಮುರುಘರಾಜೇಂದ್ರ ಮಠಾಧೀಶರು ಕೂಡ ನಾಯಕರ ಆರೋಗ್ಯ ಚೇತರಿಕೆಗೆ ದೇವರಲ್ಲಿ ಪ್ರಾರ್ಥಿಸಿದ್ದಾರೆ. ಅಗತ್ಯ ನೆರವು ಕೂಡ ನೀಡುವುದಾಗಿ ಭರವಸೆ ನೀಡಿದ್ದಾರೆ. ಬ್ರಿಟೀಷರ ವಿರುದ್ಧ ಹೋರಾಡಿದ ಕನ್ನಡಾಂಬೆಯ ಪ್ರೇಮದ ಕುಡಿ ವೀರ ಮದಕರಿ ನಾಯಕರು. ಅವರ ವಂಶವನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ನಾಡಿನ ಉಳುವಿಕೆಗೆ ದುರ್ಜನರೊಂದಿಗೆ ಹೋರಾಡಿದ ಮದಕರಿ ವಂಶದ ಕುಡಿ ನಮ್ಮೊಂದಿಗೆ ಇರೋದೆ ಹೆಮ್ಮೆಯ ಸಂಕೇತ. ನಾಡಿಗಾಗಿ, ನಾಡಿನ ಹೆಣ್ಣುಮಕ್ಕಳ ಮಾನಕ್ಕಾಗಿ, ನೆಲ, ಜಲಕ್ಕಾಗಿ ಹೋರಾಡಿದ ಹುತಾತ್ಮರು ಮದಕರಿ ನಾಯಕರು. ಅಂತಹ ಕುಟುಂಬ ಇಡೀ ನಾಡಿಗೇ ಸ್ಫೂರ್ತಿದಾಯಕ. ಯುವಕರಿಗೆ ಚೈತನ್ಯ ಬಿಂಬಿಸುವ ಮದಕರಿ ಕುಟುಂಬದವರನ್ನು ಆರೈಕೆ ಮಾಡುವುದು ನಾಡಿನ ಜನರ ಕರ್ತವ್ಯವೆಂದು ಅಭಿಮಾನದಿಂದ ನುಡಿದರು.
ಬಳ್ಳಾರಿ ಜಿಲ್ಲಾ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಜಂಬಯ್ಯ ನಾಯಕ, ಹೊಸಪೇಟೆ ತಾಲೂಕು ಅಖಿಲ ಕರ್ನಾಟಕ ನಾಯಕ ಮಹಾಸಭಾದ ಕಾರ್ಯದರ್ಶಿ ಪೂಜಾರ ವೆಂಕೋಬ ನಾಯಕ, ಮುಖಂಡರಾದ ಶ್ರೀಕಂಠ, ವಿಜಯಕುಮಾರ್, ಕಟಗಿ ಜಂಬಯ್ಯ, ಜಿ.ಬಾಲಾಜಿ ಸೇರಿದಂತೆ ಅನೇಕರು ಇದ್ದರು.

LEAVE A REPLY

Please enter your comment!
Please enter your name here