ಶಿಕ್ಷಣ ದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ

0
266

ಬಳ್ಳಾರಿ /ಹೊಸಪೇಟೆ. ಸಮಾಜದ ಯಾವುದೇ ಕ್ಷೇತ್ರದಲ್ಲಿ ಬದಲಾವಣೆ ಆಗಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಕರ್ನಾಟಕ ರಾಜ್ಯ ಕುರಿ ಉತ್ಪನ್ನಗಳ ಸಂಸ್ಕರಣ ಹಾಗೂ ರಪ್ತು ನಿಗಮದ ಉಪಾಧ್ಯಕ್ಷ ಕೆ.ಎಂ.ಹಾಲಪ್ಪ ಹೇಳಿದರು.

ಸ್ಥಳೀಯ ಚಿತ್ತವಾಡ್ಗಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ವತಿಯಿಂದ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ-2017 ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರ ಕಾರ್ಖಾನೆಯಿದ್ದಂತೆ. ಈ ಕಾರ್ಖಾನೆ ಸಮಾಜದಲ್ಲಿನ ವೈದ್ಯರು, ಇಂಜಿನಿಯರ್ ಗಳು, ರಾಜಕಾರಣಿಗಳು, ವಿಜ್ಞಾನಿಗಳು, ಸಮಾಜ ಸೇವಕರು ಸೇರಿದಂತೆ ಎಲ್ಲಾ ಕ್ಷೇತ್ರಗಳ ಪ್ರತಿಭೆಗಳನ್ನು ತಯಾರು ಮಾಡುತ್ತದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಡಿ.ಜೋಶಿ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಹೊರ ಹಾಕಲು ಇಲಾಖೆ ರೂಪಿಸಿರುವ ಸೂಕ್ತ ವೇದಿಕೆಯೇ ಪ್ರತಿಭಾ ಕಾರಂಜಿ ಕಾರ್ಯಕ್ರಮವಾಗಿದೆ. ಕೇವಲ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದ್ದ ಪ್ರತಿಭಾ ಕಾರಂಜಿಯನ್ನು ಈ ವರ್ಷದಿಂದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಕಲೋತ್ಸವದ ಹೆಸರಲ್ಲಿ ವಿಸ್ತರಿಸಲಾಗಿದೆ. 3 ಹಂತಗಳಲ್ಲಿ ಈ ಸ್ಪರ್ಧೆ ನಡೆಯಲಿದೆ. ತಾಲೂಕಿನ ಒಟ್ಟು 19 ಕ್ಲಸ್ಟರ್ ಗಳ 2500 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. 1 ಮುಖ್ಯ ವೇದಿಕೆ, 2 ಉಪ ವೇದಿಕೆ ಸೇರಿದಂತೆ ಒಟ್ಟು 28 ಕೊಠಡಿಗಳಲ್ಲಿ ಕಂಠಪಾಠ, ಪ್ರಬಂಧ, ಚಿತ್ರಕಲೆ, ನಾಟಕ ಸ್ಪರ್ಧೆಗಳು ಸೇರಿದಂತೆ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳು ಜರುಗಲಿವೆ ಎಂದರು.

ತಾಲೂಕು ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಹೋಗುತ್ತಾರೆ. ಈ ಹಿನ್ನಲೆಯಲ್ಲಿ ತೀರ್ಪುಗಾರರು, ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಪ್ರತಿಭಾ ಸಂಪನ್ನ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಪಂಚಾಯಿತಿ ಅಧ್ಯಕ್ಷೆ ಜೋಗದ ನೀಲಮ್ಮ ವಹಿಸಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಜಿ.ಪಂ.ಸದಸ್ಯ ಶ್ರೀನಿವಾಸ ರಾವ್, ತಾ.ಪಂ.ಉಪಾಧ್ಯಕ್ಷ ಕೆ.ಗಾದಿಲಿಂಗಪ್ಪ, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ರಾಜಪ್ಪ, ಸದಸ್ಯರಾದ ಜಗನ್ನಾಥಗೌಡ, ಬಿ.ಎಸ್.ಶಿವಮೂರ್ತಿ, ಷಣ್ಮುಖಪ್ಪ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಟಿ.ವೆಂಕೋಬಪ್ಪ, ನಗರಸಭೆ ಅಧ್ಯಕ್ಷೆ ನಾಗಲಕ್ಷ್ಮಿ, ಪದ್ಮನಾಭ ಕರ್ಣಂ, ಎಂ.ಶಂಕ್ರಪ್ಪ, ಬಸವರಾಜ ಜತ್ತಿ, ಗುರುರಾಜ, ಸಣ್ಣ ವೀರಪ್ಪ, ಬಿ.ಚಂದ್ರಶೇಖರ್, ಗುರುಸ್ವಾಮಿ, ಧನರಾಜ್, ಎಸ್.ವಿ.ಚಿತ್ರಗಾರ, ಸೋಮಶೇಖರ್, ಶಾಸಕರ ಆಪ್ತ ಕಾರ್ಯದರ್ಶಿ ಗೋವಿಂದ ಕುಲಕರ್ಣಿ, ನೋಡಲ್ ಅಧಿಕಾರಿಗಳಾದ ಎಸ್.ಬಸವರಾಜ, ಪ್ರಭುರಾಜ್ ಪಾಟೀಲ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಲಕ್ಷ್ಮಿದೇವಿ ಪ್ರಾರ್ಥಿಸಿದರು. ಶಿಕ್ಷಣ ಸಂಯೋಜಕ ಸುಧಾಕರ ಸ್ವಾಗತಿಸಿದರು.

ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದ ಅಂಗವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸ್ಪರ್ಧೆಗಳು ಜರುಗಿದವು.

LEAVE A REPLY

Please enter your comment!
Please enter your name here