ಬೃಹತ್ ಉದ್ಯೋಗ ಮೇಳಕ್ಕೆ ಸಿದ್ಧತೆ

0
139

ಶಿವಮೊಗ್ಗ:ಬೃಹತ್ ಉದ್ಯೋಗ ಮೇಳ ಆಯೋಜಿಸಲು ಸಿದ್ಧತೆಗಳನ್ನು ಪ್ರಾರಂಭಿಸಲಾಗಿದೆ.

ಉದ್ಯೋಗ ಮೇಳ ಆಯೋಜಿಸಲು ಉದ್ದೇಶಿಸಲಾಗಿರುವ ಕುವೆಂಪು ರಂಗಮಂದಿರದ ಹೊರಾಂಗಣ ಹಾಗೂ ಸಮೀಪದ ಆಚಾರ್ಯ ತುಳಸಿ ರಾಷ್ಟ್ರೀಯ ಕಾಲೇಜಿಗೆ ಗುರುವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ನೇತೃತ್ವದ ಅಧಿಕಾರಿಗಳ ತಂಡ ಉದ್ಯೊಗ ಮೇಳ ಆಯೋಜನೆ ಕುರಿತಾಗಿ ಪೂರ್ವಭಾವಿ ಸಭೆ ನಡೆಸಿತು.
ಜಿಲ್ಲೆಯ ನಿರುದ್ಯೋಗಿ ಯುವಕ ಯುವತಿಯರಿಗೆ ಮಾತ್ರವಲ್ಲದೆ ಉದ್ಯೋಗ ಮಾರುಕಟ್ಟೆಯಲ್ಲಿ ಉತ್ತಮ ಅವಕಾಶಗಳನ್ನು ಎದುರು ನೋಡುತ್ತಿರುವವರಿಗೆ ಅವಕಾಶಗಳನ್ನು ಕಲ್ಪಿಸಲು ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ. ಕನಿಷ್ಟ ವಿದ್ಯಾರ್ಹತೆ ಮಾತ್ರವಲ್ಲದೆ ಗರಿಷ್ಟ ಶೈಕ್ಷಣಿಕ ಹಿನ್ನೆಲೆ ಹೊಂದಿರುವವರಿಗೂ ಸೂಕ್ತವಾದ ಉದ್ಯೋಗವಕಾಶಗಳನ್ನು ಕಲ್ಪಿಸುವುದು, ಅವಕಾಶಗಳ ಬಗ್ಗೆ ಮಾಹಿತಿ ನೀಡಲು ಉದ್ಯೋಗ ಮೇಳ ವೇದಿಕೆಯಾಗಲಿದೆ. ಉದ್ಯೋಗಾಕಾಂಕ್ಷಿಗಳು ಹಾಗೂ ಉದ್ಯೋಗದಾತರನ್ನು ಒಂದೆಡೆ ಸೇರಿಸುವ ಕಾರ್ಯವನ್ನು ಉದ್ಯೋಗ ಮೇಳದ ಮೂಲಕ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಉದ್ಯೋಗ ಮೇಳದಲ್ಲಿ ಸುಮಾರು 125ರಿಂದ 150ಕಂಪೆನಿಗಳು ಭಾಗವಹಿಸುವ ಗುರಿ ಹೊಂದಲಾಗಿದ್ದು, ಜಿಲ್ಲೆಯಿಂದ ಸುಮಾರು 10ಸಾವಿರ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಒದಗಿಸಬಹುದಾದ ಕಂಪೆನಿಗಳನ್ನು ಮೇಳಕ್ಕೆ ಆಹ್ವಾನಿಸಲಾಗುವುದು. ಬೆಂಗಳೂರಿನಿಂದ ಗರಿಷ್ಟ ಕಂಪೆನಿಗಳು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದ್ದು, ಕಂಪೆನಿಗಳ ಪ್ರತಿನಿಧಿಗಳನ್ನು ಕರೆ ತರಲು ಬಸ್ ವ್ಯವಸ್ಥೆ, ಸ್ಥಳೀಯವಾಗಿ ವಾಸ್ತವ್ಯಕ್ಕೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಸ್ಥಳೀಯ ಹಾಗೂ ಇತರ ಜಿಲ್ಲೆಗಳ ಕಂಪೆನಿಗಳಿಗೂ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು.
ವೆಬ್‍ಸೈಟ್: ಉದ್ಯೋಗಾಕಾಂಕ್ಷಿಗಳು ಹಾಗೂ ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲು ಆನ್‍ಲೈನ್ ನೋಂದಣಿಗಾಗಿ ವೆಬ್‍ಸೈಟ್ ಆರಂಭಿಸಲಾಗುವುದು. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಕಂಪೆನಿಗಳ ವಿವರ, ನೋಂದಣಿ ಮಾಹಿತಿ, ಅಭ್ಯರ್ಥಿಗಳಿಗೆ ಸೂಚನೆಗಳು ಇತ್ಯಾದಿ ಅಗತ್ಯ ಮಾಹಿತಿಗಳನ್ನು ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಭಾಗವಹಿಸಲು ಅನುಕೂಲವಾಗುವಂತೆ ತಾಲೂಕು ಮಟ್ಟದಲ್ಲಿ ಸಹ ಮಾಹಿತಿ ಕೇಂದ್ರಗಳನ್ನು ತೆರೆಯಲಾಗುವುದು. ಅಭ್ಯರ್ಥಿಗಳು ಸಮರ್ಪಕವಾಗಿ ಬಯೋಡಾಟಾ ಸಿದ್ಧಪಡಿಸಲು ಹಾಗೂ ಸಂದರ್ಶನವನ್ನು ಎದುರಿಸಲು ಅವರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುವುದು. ಕಾರ್ಯಾಗಾರಕ್ಕಾಗಿ ಸಂಪನ್ಮೂಲ ವ್ಯಕ್ತಿಗಳ ಆಯ್ಕೆ, ಉದ್ಯೋಗ ಮೇಳದ ವಿವಿಧ ಕಾರ್ಯ ಚಟುವಟಿಕೆಗಳ ಅನುಷ್ಟಾನಕ್ಕಾಗಿ ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ತಮಗೆ ನೀಡಲಾಗಿರುವ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.
ಎರಡು ದಿನಗಳ ಕಾಲ ಉದ್ಯೋಗ ಮೇಳ ನಡೆಯಲಿದ್ದು, ಪ್ರಥಮ ದಿನ ನೋಂದಣಿ ಮಾಡಿದ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು. ಸ್ಥಳದಲ್ಲೇ ನೋಂದಣಿ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಎರಡನೇ ದಿನ ಸಂದರ್ಶನಕ್ಕೆ ಅವಕಾಶ ನೀಡಲಾಗುವುದು. ಮೇಳದಲ್ಲಿ ಭಾಗವಹಿಸಲು ಆಗಮಿಸುವ ಅಭ್ಯರ್ಥಿಗಳಿಗೆ ಸೂಕ್ತ ಮಾಹಿತಿ ಒದಗಿಸಲು ಕೌಂಟರ್‍ಗಳು, ಅವರಿಗೆ ಉಪಾಹಾರ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here