ಶ್ರೀಗಳ ಅಮೃತಶಿಲಾ ಮೂರ್ತಿ ಅನಾವರಣ..

0
339

ಬಳ್ಳಾರಿ /ಹೊಸಪೇಟೆ.ಸ್ಥಳೀಯ ಟಿ.ಎಂ.ಎ.ಇ.ಎಸ್. ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಭಾನುವಾರ ಜರುಗಿದ ಲಿಂ.ಶ್ರೀಚಂದ್ರಮೌಳೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿಗಳ 81ನೇ ಜಯಂತ್ಯೋತ್ಸವ ಸಮಾರಂಭದಲ್ಲಿ ಚಂದ್ರಮೌಳೇಶ್ವರ ಶ್ರೀಗಳ ಅಮೃತಶಿಲಾ ಮೂರ್ತಿಯ ಅನಾವರಣ ಮಾಡಲಾಯಿತು.

ಸಮಾರಂಭದ ಸಾನಿಧ್ಯವಹಿಸಿ, ಶ್ರೀಗಳವರ ಅಮೃತಶಿಲಾ ಮೂರ್ತಿ ಅನಾವರಣಗೊಳಿಸಿ, ಆಶೀರ್ವಚನ ನೀಡಿದ ಮಾನಿಹಳ್ಳಿ ಪುರವರ್ಗ ಮಠದ ಮಳೆಯೋಗೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಲಿಂ.ಚಂದ್ರಮೌಳೀಶ್ವರ ಶಿವಾಚಾರ್ಯ ಮಹಾಸ್ವಾಮೀಜಿಯವರ ಕನಸಿನಂತೆ ತೆಗ್ಗಿನಮಠ ಸಂಸ್ಥಾನವು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಾಧನೆ ಮಾಡಲಿ. ನಾಡಿನೆಲ್ಲೆಡೆ ಅನ್ನ, ಆಶ್ರಯ, ವಿದ್ಯೆ ಕಲ್ಪಿಸಿಕೊಡುವ ಮಠಮಾನ್ಯಗಳಲ್ಲಿ ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನಕ್ಕೆ ವಿಶೇಷ ಸ್ಥಾನವಿದೆ. ಲಿಂ.ಷ.ಬ್ರ. ಚಂದ್ರಮೌಳೀಶ್ವರ ಶಿವಾಚಾರ್ಯ ಮಹಾಸ್ವಾಮೀಜಿಯವರ ದೂರದೃಷ್ಠಿ, ಶೈಕ್ಷಣಿಕ ಕಾಳಜಿಯಿಂದಾಗಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು. ಅವರು ಹಾಕಿಕೊಟ್ಟ ಪರಂಪರೆಯನ್ನು ಈಗೀನ ಪೀಠಾಧ್ಯಕ್ಷರಾದ ವರಸದ್ಯೋಜಾತ ಶಿವಾಚಾರ್ಯರು ಮುಂದುವರೆಸಿಕೊಂಡು ಹೋಗುವ ಮೂಲಕ ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನ ಕೀರ್ತಿ ಪತಾಕೆಯನ್ನು ಇನ್ನು ಎತ್ತರಕ್ಕೆ ಹಾರಿಸಲಿ ಎಂದರು.
ಹಲಗೂರಿನ ಬೃಹನ್ಮಠದ ಶ್ರೀರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ತತ್ತ್ವಜ್ಞಾನ ವಿಷಯದಲ್ಲಿ ಅಪಾರ ಪಾಂಡಿತ್ಯ ಪಡೆದಿದ್ದ ಲಿಂ.ಚಂದ್ರಮೌಳೀಶ್ವರರು ದೊಡ್ಡ ಆಧ್ಯಾತ್ಮಿಕ ಶಕ್ತಿಯಾಗಿದ್ದರು. ಹಲವಾರು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದ ಕಾಮಧೇನು.
ಎಂದು ಬಣ್ಣಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ‘ಮಾನವ ಧರ್ಮಕ್ಕೆ ಜಯವಾಗಲಿ’ ಎಂಬ ತತ್ತ್ವವನ್ನು ಅರಿತು ಆಚರಿಸಿದ ಲಿಂ. ಶ್ರೀ ಚಂದ್ರಮೌಳೀಶ್ವರರು ಸಾಕ್ಷಾತ್ ಶಿವನರೂಪದಲ್ಲಿ ಸಮಾಜದ ಪ್ರತಿಯೊಬ್ಬರನ್ನೂ, ಸಂಸ್ಥೆಯ ಸರ್ವ ಸಿಬ್ಬಂದಿಯನ್ನೂ ತಾಯಿಯಂತೆ ಪೊರೆದು ಪೋಷಿಸುವ ಮೂಲಕ ನಿಜವಾದ ಅರ್ಥದಲ್ಲಿ ಚಂದ್ರಮೌಳಿಯೇ ಆಗಿ ಬಾಳಿ ಬದುಕಿದವರು. ತಮ್ಮ ಜೀವನವನ್ನು ಧರ್ಮ, ಸಮಾಜ, ಶಿಕ್ಷಣ ಸುಧಾರಣೆಗೆ ಸವೆಸಿ ಸಾರ್ಥಕ ಮಾಡಿಕೊಂಡರು ಎಂದರು.
ಸಮಾರಂಭದಲ್ಲಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ನ ವ್ಯವಸ್ಥಾಪಕ ನಿರ್ದೇಶಕ ಆರ್.ವಿ.ಗುಮಾಸ್ತೆ, ಡಿವೈಎಸ್ಪಿ ಕೆ,ಶಿವಾರೆಡ್ಡಿ, ಸತ್ಪ್ರೇರಣೆ, ಸಂಸ್ಥೆಯ ಕಾರ್ಯದರ್ಶಿ ಟಿ.ಎಂ.ಚಂದ್ರಶೇಖರಯ್ಯ, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಟಿ.ಎಂ.ವಿಜಯಕುಮಾರ್,  ಟಿಎಂಇಎ ಸಂಸ್ಥೆಯ ನಿರ್ದೇಶಕ ಟಿ.ಎಂ. ಶಿವದೇವಯ್ಯ, ಸಂಸ್ಥೆಯ ಟಿ.ಎಂ.ಚನ್ನವೀರಯ್ಯಸ್ವಾಮಿ, ಟಿ.ಎಂ. ಆನಂದಯ್ಯ, ಸಂಸ್ಥೆಯ ಆಡಳಿತಾಧಿಕಾರಿ ಎಂ.ಕೆ.ರವೀಂದ್ರ, ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಜಿ. ಚಂದ್ರಶೇಖರ ಸೇರಿದಂತೆ ಟಿಎಂಎಇ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯಟಿ.ಎಂ ವಿಜಯಕುಮಾರ್, ಉಪಪ್ರಾಚಾರ್ಯ ವೈ.ಎಂ.ಉಮಾಶಂಕರ್, ಇತ್ತೀಚಿಗೆ ವರ್ಗಾವಣೆಗೊಂಡ ಡಿಎವಿ ಪ್ರಾಂಶುಪಾಲ ಜಿ.ವಿಜಯಕುಮಾರ್ ಸೇರಿದಂತೆ ದಾನಿಗಳನ್ನು, ಸಂಸ್ಥೆಯ ನಿವೃತ್ತ ನೌಕರರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಆಯ್ಕೆಶ್ರೇಣಿ ಉಪನ್ಯಾಸಕ ಹೆಚ್.ಕೆ. ಶಂಕರಾನಂದ ನುಡಿನಮನ ಸಲ್ಲಿಸಿದರು.  ಮೋಹನ್ ಪಾಟೀಲ್ ಭಕ್ತಿಗೀತೆ ಹಾಡಿದರು. ಕು.ಸುಧಾ, ಅರ್ಚನಾ ಪ್ರಾರ್ಥಿಸಿದರು. ಎಂ.ಈಶ್ವರಪ್ಪ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ.ನಟರಾಜ್ ಸ್ವಾಗತಿಸಿದರು. ಎಸ್.ಎಂ.ವಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಟಿ.ಎಂ. ರೇಣುಕಾಪ್ರಸಾದ್ ವಂದಿಸಿದರು. ಡಾ.ಕೇದಾರೇಶ್ವರ, ಎಂ.ದಂಡಿನ್, ವಿನಯ್ ಎಚ್.ವಿ ನಿರ್ವಹಿಸಿದರು.

ರಕ್ತದಾನ
ಲಿಂ.ಷ.ಬ್ರ.ಶ್ರೀ ಚಂದ್ರಮೌಳೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳ 81 ನೇ ಜಯಂತ್ಯುತ್ಸವ ಹಾಗೂ ಶ್ರೀಗಳ ಅಮೃತಶಿಲಾ ಮೂರ್ತಿ ಅನಾವರಣ ಕಾರ್ಯಕ್ರಮದ ಅಂಗವಾಗಿ ಜರುಗಿದ ಸ್ವಯಂ ರಕ್ತದಾನ ಶಿಬಿರದಲ್ಲಿ ಕಾಲೇಜಿನ ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಸಿಬ್ಬಂದಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದರು. ಶಿಬಿರದಲ್ಲಿ ಒಟ್ಟು 62 ಯೂನಿಟ್ ರಕ್ತ ಸಂಗ್ರಹ ಮಾಡಲಾಯಿತು.

LEAVE A REPLY

Please enter your comment!
Please enter your name here