ಸಫಾಯಿ ಕರ್ಮಚಾರಿಗಳ ಕಲ್ಯಾಣ ಕಾರ್ಯ ಕ್ರಮಗಳಿಗೆ ನಿಗಮದಿಂದ ನೆರವು

0
117

ಶಿವಮೊಗ್ಗ: ಸಫಾಯಿ ಕರ್ಮಚಾರಿಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮ 85ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ರೂಪಿಸಿದೆ ಎಂದು ನಿಗಮದ ಅಧ್ಯಕ್ಷ ಎಸ್.ಮಾರೆಪ್ಪ ಅವರು ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದರು.

ಗುರುತಿಸಲು ಸೂಚನೆ: ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಮಾತ್ರ ಸಫಾಯಿ ಕರ್ಮಚಾರಿಗಳಲ್ಲ. ಸರ್ಕಾರಿ ಕಚೇರಿಗಳಲ್ಲಿ, ಖಾಸಗಿ ಸಂಸ್ಥೆ, ಶಾಲೆಗಳ ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿರುವವರು ಸಹ ಸಫಾಯಿ ಕರ್ಮಚಾರಿಗಳು. ಈ ಹಿನ್ನೆಲೆಯಲ್ಲಿ ನಿಗಮದ ಸೌಲಭ್ಯಗಳು ಎಲ್ಲಾ ಅರ್ಹರಿಗೆ ದೊರಕು ವಂತಾಗಲು ಸಫಾಯಿ ಕರ್ಮಚಾರಿಗಳನ್ನು ಗುರುತಿಸಿ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಸ್ಥಳೀಯ ಸಂಸ್ಥೆಗಳು ನೈರ್ಮಲ್ಯ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಕುರಿತು ಪರಿಶೀಲನೆ ನಡೆಸಿ ಅವರಿಗೆ ಗುರುತಿನ ಚೀಟಿಯನ್ನು ಒದಗಿಸಬೇಕು ಎಂದು ಅವರು ಹೇಳಿದರು.

ರಾಜ್ಯದಲ್ಲಿ 1.45ಲಕ್ಷ ಸಫಾಯಿ ಕರ್ಮ ಚಾರಿಗಳನ್ನು ಗುರುತಿಸಲಾಗಿದ್ದು, ಇವರ ಸಂಖ್ಯೆ ಸುಮಾರು 2.5ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ನಿಗಮದ ವತಿಯಿಂದ ಸಫಾಯಿ ಕರ್ಮಚಾರಿಗಳು ವಾಸಿಸುವ ಪ್ರದೇಶ ದಲ್ಲಿ ಒಳಚರಂಡಿ, ರಸ್ತೆ ನಿರ್ಮಾಣ, ವಸತಿ ಇತ್ಯಾದಿ ಮೂಲಸೌಕರ್ಯಗಳಿಗಾಗಿ 20ಕೋಟಿ ರೂ. ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದರು.

ಸಫಾಯಿ ಕರ್ಮಚಾರಿಗಳು ಇಂದಿಗೂ ಅನೈರ್ಮಲ್ಯ ಪರಿಸರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶೌಚಾಲಯದ ಗುಂಡಿಗಳಿಗೆ ಅವರನ್ನು ಇಳಿಸಿ ಸ್ವಚ್ಛಗೊಳಿಸಲಾಗುತ್ತಿದೆ. ಆದರೆ ಅಧಿಕಾರಿಗಳು ಸತ್ಯವನ್ನು ಮರೆಮಾಚುತ್ತಿದ್ದು, ಯಂತ್ರಗಳ ಮೂಲಕ ಶೌಚಾಲಯ ಗುಂಡಿಗಳನ್ನು ಸ್ಬಚ್ಛಗೊಳಿಸಲಾಗುತ್ತಿದೆ ಎಂದು ವರದಿ ನೀಡುತ್ತಿದ್ದಾರೆ. ಇದರಿಂದಾಗಿ ಅಂತಹ ಸಫಾಯಿ ಕರ್ಮಚಾರಿಗಳನ್ನು ಗುರುತಿಸಿ ಸರ್ಕಾರದಿಂದ ಸೌಲಭ್ಯ ಒದಗಿಸುವುದು ಕಷ್ಟವಾಗುತ್ತಿದೆ. ಶಿವಮೊಗ್ಗದಂತಹ ಮಹಾನಗರದಲ್ಲಿ ಎಷ್ಟು ಸಕ್ಕಿಂಗ್ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರೆ ಸತ್ಯಾಂಶ ಹೊರಬರುತ್ತದೆ. ಖಾಸಗಿಯವರ ಬಳಿ ಸಕ್ಕಿಂಗ್ ಯಂತ್ರಗಳೇ ಲಭ್ಯವಿರುವುದಿಲ್ಲ ಎಂದು ಅವರು ಹೇಳಿದರು.

ಅಧಿಕಾರಿಗಳಿಗೆ ಸೂಚನೆ: ನಗರದ ಮಾರ್ನಬೈಲ್ ಪ್ರದೇಶದಲ್ಲಿರುವ ಸಫಾಯಿ ಕರ್ಮಚಾರಿಗಳ ಕಾಲೊನಿಗೆ ಭೇಟಿ ನೀಡಿದ್ದು, ಅಲ್ಲಿನ ನಿವಾಸಿಗಳು ನಿಕೃಷ್ಟ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಅಲ್ಲಿ ಒಳಚರಂಡಿ ಸಮಸ್ಯೆಯಿಂದಾಗಿ ಶೌಚಾಲಯದ ನೀರು ಮತ್ತೆ ಮನೆಯೊಳಗೆ ನುಗ್ಗಿ ಬರುತ್ತಿದೆ. ಇದನ್ನು ತಕ್ಷಣ ಸರಿಪಡಿಸಬೇಕು. ಒಳಚರಂಡಿ ಸಮಸ್ಯೆ ನಿವಾರಣೆಗೆ ನಿಗಮದಿಂದ ಸಹ ನೆರವು ಒದಗಿಸಲಾಗುವುದು. ಇಲ್ಲಿರುವ ಶಾಲೆಯ ಬಳಿಯ ಚರಂಡಿಗೆ ರಸ್ತೆ ಸಾರಿಗೆ ಸಂಸ್ಥೆಯವರು ಕೊಳಚೆ ನೀರನ್ನು ಬಿಡುತ್ತಿರುವ ಕಾರಣ, ಮಕ್ಕಳು ಅನಾರೋಗ್ಯಕರ ಪರಿಸ್ಥಿತಿಯಲ್ಲಿ ಕಲಿಯುವಂತಾಗಿದೆ. ಎರಡು ತಿಂಗಳ ಒಳಗಾಗಿ ಇದನ್ನು ಸರಿಪಡಿಸಿ ಒಳಚರಂಡಿಗೆ ನೇರವಾಗಿ ಕೊಳಚೆ ನೀರು ಹರಿದು ಹೋಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕ್ರಿಮಿನಲ್ ಮೊಕದ್ದಮೆ ಎಚ್ಚರಿಕೆ: ಮಾರ್ನಬೈಲ್‍ನಲ್ಲಿರುವ ಶಾಲೆಯ ಸಮೀಪ ನೂರು ಮೀಟರ್ ಒಳಗಡೆ ಬಾರ್‍ಗೆ ಅನುಮತಿ ನೀಡಲಾಗಿದೆ. ಇದನ್ನು ತಕ್ಷಣ ಸ್ಥಳಾಂತರಿಸದಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಸೂಚಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ನಗರದ ಹೊಸಮನೆ ಬಡಾವಣೆಯಲ್ಲಿ ನಿರ್ಮಿಸಲಾಗಿರುವ ಸುಮಾರು 250ಪೌರಕಾರ್ಮಿಕರ ಮನೆಗಳಿಗೆ ಇನ್ನು ಮನೆ ಸಂಖ್ಯೆ ನೀಡಲಾಗಿಲ್ಲ. ಇದರಿಂದ ಅವರು ಸೌಲಭ್ಯಗಳಿಂದ ವಂಚಿತರಾಗಿದ್ದು, ಮನೆ ಸಂಖ್ಯೆ ನೀಡಲು ತಕ್ಷಣ ಕ್ರಮ ಕೈಗೊಳ್ಳಬೇಕು. ಇದೇ ರೀತಿ ಬ್ಯಾಂಕುಗಳು ಸಫಾಯಿ ಕರ್ಮಚಾರಿಗಳಿಗೆ ಸಾಲಸೌಲಭ್ಯ ನೀಡಲು ಹಿಂದೇಟು ಹಾಕುತ್ತಿದ್ದು, ಅಂತಹ ಪ್ರಕರಣಗಳಲ್ಲಿ ಲೀಡ್ ಬ್ಯಾಂಕ್ ಅಧಿಕಾರಿಯನ್ನು ಜವಾಬ್ದಾರ ಮಾಡಲಾಗುವುದು ಎಂದು ಅವರು ಹೇಳಿದರು.

ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ವಿವಿಧ ಇಲಾಖಾ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here