ಸರಕಾರಿ ಶಾಲೆಗಳ ಬಲವರ್ಧನ ಕಾರ್ಯಕ್ರಮ…

0
190

ಬಳ್ಳಾರಿ:ಸರಕಾರಿ ಶಾಲೆಗಳಿಗೆ ಹೆಚ್ಚಿನ ಮಕ್ಕಳು ದಾಖಲಾಗುತ್ತಿದ್ದಾರೆ.‌ ಅಂತಹ ಶಾಲೆಗಳಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕು. ಆ ಮೂಲಕ ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣ ಬೆಳೆಸುವುದರೊಂದಿಗೆ ಅವುಗಳನ್ನು ಬಲಪಡಿಸುವುದಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಒತ್ತು ನೀಡಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ಡಾ.ಕೃಪಾ ಅಮರ್ ಆಳ್ವಾ ಹೇಳಿದ್ದಾರೆ.

ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸರಕಾರಿ ಶಾಲೆಗಳ ಬಲವರ್ಧನೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿಯೊಂದು ಮಗು ಕೂಡ ಶಿಕ್ಷಣ ಪಡೆಯಬೇಕು; ಯಾವುದೇ ಮಗು ಕೂಡ ಶಾಲೆಯಿಂದ ಹೊರಗುಳಿಯಬಾರದು; ಮಕ್ಕಳು ಶಾಲೆಯಿಂದ ಹೊರಗುಳಿದರೇ ಅವರು ಬಾಲಕಾರ್ಮಿಕತೆ, ಬಾಲ್ಯವಿವಾಹ,ಭೀಕ್ಷಾಟನೆ ಸೇರಿದಂತೆ ನಾನಾ ಸಮಸ್ಯೆಗಳಿಗೆ ಸಿಲುಕಲು ಸಾಧ್ಯ. ಆದ್ದರಿಂದ ಅವರನ್ನು ಶಾಲೆಗೆ ಸೇರಿಸಿ ಸಮಸ್ಯೆಗಳಿಗೆ ಸಿಲುಕದಂತೆ ನೋಡಿಕೊಳ್ಳಿ ಎಂದರು.
ಕಳೆದ ಒಂದೂವರೆ ತಿಂಗಳಲ್ಲಿ ರಾಜ್ಯದ 28 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಸರಕಾರಿ ಶಾಲೆಗಳ ಬಲವರ್ಧನೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನೆ ನಡೆಸಿದ್ದೇನೆ ಎಂದು ಹೇಳಿದ ಕೃಪಾ ಅಳ್ವಾ, ಶೀಘ್ರ ಎಲ್ಲ ಜಿಲ್ಲೆಗಳಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಮತ್ತೊಂದು ಬಾರಿ ಕೂಲಂಕೂಷವಾಗಿ ಪರಿಶೀಲಿಸಿ ಆದ ಪ್ರಗತಿಯನ್ನು ಪರಿಶೀಲಿಸಲಾಗುವುದು ಎಂದರು.

ಎಲ್ಲ ಶಾಲೆಗಳಿಗೆ ಕಡ್ಡಾಯವಾಗಿ ಕಂಪೌಂಡ್‍ಗಳನ್ನು ನಿರ್ಮಿಸಬೇಕು ಎಂದು ಹೇಳಿದ ಅವರು, ಎಲ್ಲ ಮಕ್ಕಳಿಗೆ ಎಷ್ಟು ನೋಟ್‍ಬುಕ್ ಮತ್ತು ಬ್ಯಾಗ್ ಬೇಕು ಎಂಬುದರ ಮಾಹಿತಿ ಒದಗಿಸಿ, ತಮ್ಮ ವ್ಯಾಪ್ತಿಯ ಎಲ್ಲ ಶಾಲೆಗಳಲ್ಲಿನ ಬ್ಲಾಕ್‍ಬೋರ್ಡ್‍ಗೆ ಬಣ್ಣ ಬಳಿಸಬೇಕು ಎಂದರು.

ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಸುಧೀರ್ಘವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ, ಆಯೋಗದ ಸದಸ್ಯರಾದ ಅಪರ್ಣಾ ಕೊಳ್ಳಾ, ಡಾ.ವನೀತಾ ಕೊರವಿ, ಅಪರ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಇನ್ನಿತರೆ ಅಧಿಕಾರಿಗಳು ಇದ್ರು.

LEAVE A REPLY

Please enter your comment!
Please enter your name here