ಸರ್ಕಾರಿ ಯೋಜನೆಗಳಿಂದ ವಂಚಿತರು.

0
134

ಹಕ್ಕಿಪಿಕ್ಕಿ ಜನಾಂದವರಿಗೆ ಮನೆ, ಸ್ವಚ್ಛತಾ, ಅನಾರೋಗ್ಯ ಭಾಗ್ಯ, ಅಧಿಕಾರಿಗಳು ಸ್ಪಂದಿಸುವರೇ..?

ಚಿಕ್ಕಬಳ್ಳಾಪುರ/ಬಾಗೇಪಲ್ಲಿ : ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದಿದೆ. ದೇಶಾದ್ಯಾಂತ ಸ್ವಾತಂತ್ರ್ಯ ಸಂಭ್ರಮ ಆಚರಿಸಿ “ಮೇರಾ ಭಾರತ್ ಮಹಾನ್” ಎಂದು ಗರ್ವಿಸುತ್ತೇವೆ. ಆದರೆ ಸರ್ಕಾರದ ಯೋಜನೆಗಳು ಜನಸಾಮ್ಯಾನರನ್ನು ಮುಟ್ಟುತ್ತಿಲ್ಲ ಎಂಬುದಕ್ಕೆ ತಾಜಾ ಉದಾಹರಣೆ ಇಲ್ಲಿದೆ.
ಆಳುವ ಪ್ರಭುಗಳು ಹಾಗೂ ಸರ್ಕಾರಗಳು ಬದಲಾಗುತ್ತಿದೆಯೇ ಹೊರತು, ಜನಸಾಮಾನ್ಯರ ಬದುಕುಗಳು ಮಾತ್ರ ಹೀನಾಯವಾಗುತ್ತಿದೆ. “ಯಾರಿಗೆ ಬಂತು, ಎಲ್ಲಿಗೆ ಬಂತು, 47ರ ಸ್ವಾತಂತ್ರ್ಯ” ಎಂಬಂತೆ ಆಗಿದೆ.
ತಾಲ್ಲೂಕಿನ ಪರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕಾಶಾಪುರ ಗ್ರಾಮದ ಸ್ವಲ್ಪ ದೂರದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. ಶಾಲೆಗೆ ಸಂಚರಿಸುವ ಮಾರ್ಗದ ಹೊಲಗಳಲ್ಲಿ ಮುರುಕಲು ಮನೆಯಲ್ಲಿ ವಾಸವಾಗಿರುವ ಈ ಹಕ್ಕಿಪಿಕ್ಕಿ ಜನಾಂಗದವರು ಸುಮಾರು 30 ವರ್ಷಗಳಿಂದ ವಾಸಿಸುತ್ತಿದ್ದಾರೆ.
ವಾಸಿಸಲು ಸ್ವಂತ ಮನೆಯಿಲ್ಲ, ಕುಡಿಯಲು ನೀರಿಲ್ಲ, ದೀಪದ ವ್ಯವಸ್ಥೆಯಿಲ್ಲ. ಚರಂಡಿ ವ್ಯವಸ್ಥೆ ಇಲ್ಲ. ಈ ಹಕ್ಕಿಪಿಕ್ಕಿ ಜನಾಂಗದವರು ಬಳೆ, ಹೇರ್‍ಪಿನ್, ಜಡೆಕುಚ್ಚುಗಳು ಸೇರಿದಂತೆ ಮಹಿಳೆಯರು ಉಪಯೋಗಿಸುವ ಪರಿಕರಗಳನ್ನು ಮಾರಿ ಬಂದ ಕಡಿಮೆ ಆದಾಯದಲ್ಲಿ ಬದುಕು ಸಾಗಿಸುತ್ತಿದ್ದಾರೆ.
ಈ ಹಕ್ಕಿಪಿಕ್ಕಿಯ 8 ಗುಡಿಸಲು ಮನೆಗಳು ಇದೆ. ಗುಡಿಸಲು ಮನೆಗೆ ಸೀರೆ, ಟಾರುಪಾಲುಗಳಿಂದ ಹೊದಿಸಿದ್ದಾರೆ. ಗುಡಿಸಲು ಮನೆಯಲ್ಲಿ ಕಡಿಮೆ ಪಾತ್ರೆಗಳು, ಬಟ್ಟೆಯ ಮೂಟೆಗಳು ಸೇರಿದಂತೆ ಇರಿಸಿದ್ದಾರೆ. ಇಬ್ಬರು.. ಹಾಗೂ ಮಕ್ಕಳು ಮಲಗುವಷ್ಟು ಮಾತ್ರ ಗುಡಿಸಲು ನಿರ್ಮಿಸಿ ಕೊಂಡಿದ್ದಾರೆ. ಮನೆ ಮುಂದೆ ಸೌದೆ ಬಳಿಸಿ ಕೊಂಡು, ಮುದ್ದೆ, ಅನ್ನ, ಸಾರು ಮಾಡಿಕೊಳ್ಳುವ ಓಲೆ ನಿರ್ಮಿಸಿದ್ದಾರೆ.
ಇದೇ ಗುಡಿಸಲು ಮನೆಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿ ವಾಸವಾಗಿದ್ದಾರೆ. ಚುನಾವಣಾ ಪಟ್ಟಿಯಲ್ಲಿ ಇವರ ಹೆಸರುಗಳಿವೆ. ಆದರೂ ಸಹ ಇವರು ಅಲೆಮಾರಿಗಳ ರೀತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಈ ಕುಟುಂಬಗಳ ಗಂಡಸರು ಬಳೆ, ಕರಿಮಣಿ, ಪ್ಲಾಸ್ಟಿಕ್ ಚಿಕ್ಕ ಚಿಕ್ಕ ವಸ್ತುಗಳು, ಕಾಡಿಗೆ, ಸ್ಟಿಕರ್‍ಗಳು ತಮ್ಮ ದ್ವಿಚಕ್ರ ವಾಹನದ ಮೇಲೆ ತೆಗೆದುಕೊಂಡು ಊರು ಊರೂ ಅಲೆದು ವ್ಯಾಪಾರ ಮಾಡಬೇಕಾಗಿದೆ. ಅಂದು ವ್ಯಾಪಾರವಾಗಿ ಉಳಿದಿದ್ದÀ 50-100 ರೂ. ಹಣದಲ್ಲಿ ಅಕ್ಕಿ, ನುಚ್ಚು ರಾಗಿಹಿಟ್ಟು ಇತ್ಯಾದಿಗಳನ್ನು ತೆಗೆದುಕೊಂಡು ಮನೆಗೆ ಬಂದರೆ ಆಗ ಅಡಿಗೆ ಮಾಡುತ್ತಾರೆ. ವ್ಯಾಪಾರವಿಲ್ಲದಿದ್ದರೆ ಅಂದು ಉಪವಾಸವೇ ಗತಿಯಾಗಿದೆ. ಒಟ್ಟಿನಲ್ಲಿ ಇದು ಒಂದು ದಿನದ ಚಿತ್ರಣವಾಗಿದೆ. ಒಂದು ಹೊತ್ತಿನ ಊಟಕ್ಕೂ ಪ್ರತಿ ದಿನ ಹೋರಾಟ ಮಾಡುವ ಅನಿವಾರ್ಯತೆ ಇದೆ.
ಇವರು ಇರುವ ಸ್ಥಳದಲ್ಲಿ ಅನೇಕ ಹಾವು, ಸೊಳ್ಳೆಗಳು ಇದೆ. ರಾತ್ರಿ ಸಮಯದಲ್ಲಿ ಬಾಗಿಲುಗಳೇ ಇಲ್ಲದ ಬಿಡಾರಗಳಿಗೆ ಸೊಳ್ಳೆಗಳು ಕಡಿದು ಇಲ್ಲಿನ ಪ್ರತಿಯೊಬ್ಬರು ಪ್ರತಿನಿತ್ಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ತಿಕ್(8) ವರ್ಷದ ಬಾಲಕನಿಗೆ ಇದೀಗ ಡೆಂಗೆ ಜ್ವರ ಆವರಿಸಿ, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಬಾಲಕನ ಸಂಬಂಧಿಕರು ಮಾಧ್ಯಮದವರಿಗೆ ತಿಳಿಸಿದ್ದಾರೆ. ಕೆಲವರಿಗೆ ಗಂಟಲು, ಮೈ-ಕೈ ನೋವುಗಳು, ಜ್ವರ, ತಲೆ ನೋವು ಸೇರಿದಂತೆ ವಿವಿಧ ರೋಗಗಳಿಂದ ಬಳಲುತ್ತಿದ್ದಾರೆ.
ಹಕ್ಕಿಪಿಕ್ಕಿ ಸಮುದಾಯಗಳನ್ನು ಅಭಿವೃದ್ಧಿಗಾಗಿ ಸರ್ಕಾರಗಳು ಯೋಜನೆಗಳು ಜಾರಿಗೊಳಿಸಿದೆ. ಆದರೆ ಗ್ರಾಮಾಂತರ ಪ್ರದೇಶಗಳಲ್ಲಿನ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಾತ್ರ ಗ್ರಾಮಗಳಿಗೆ ಭೇಟಿ ನೀಡದೆ, ಹಕ್ಕಿಪಿಕ್ಕಿ ಜನಾಂಗದವರಿಗೆ ಕನಿಷ್ಠ ಮನೆ,ನಿವೇಶನ, ಸ್ವಚ್ಛತೆ, ಆರೋಗ್ಯದ ಬಗ್ಗೆ ಕನಿಷ್ಠ ಸೌಲಭ್ಯಗಳು ಕಲ್ಪಿಸದೇ ಇರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಸರ್ಕಾರದ ಯೋಜನೆಗಳು ಗುಡಾರಗಳನ್ನು ಮುಟ್ಟಿಲ್ಲ. ವಿದ್ಯಾಬ್ಯಾಸವಂತೂ ದೂರದ ಮಾತಾಗಿದೆ. ಮಕ್ಕಳಿಗೆ ಶಿಕ್ಷಣ, ಉಚಿತ ಮನೆ ಯೋಜನೆ, ವಿದ್ಯುತ್ ಯೋಜನೆ, 1 ರೂ. ಅಕ್ಕಿ ಯೋಜನೆ ಇಂತಹ ಕಡು ಬಡ ಕುಟುಂಬಗಳಿಗೆ ಸಿಗದಿರುವುದು ದೌರ್ಭಾಗ್ಯವಾಗಿದೆ.
ಕೂಡಲೇ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಕಾಶಾಪುರದ ಬಳಿ ಇರುವ ಹಕ್ಕಿಪಿಕ್ಕಿ ಜನಾಂಗದವರಿಗೆ ಮೂಲಭೂತ ಸೌಲಭ್ಯಗಳಾದ ಮನೆಗಳು ನಿರ್ಮಿಸಿಕೊಡುವರೇ.. ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ಕೊಡಿಸುವರೇ… ಕನಿಷ್ಠ ಮೂಲಭೂತ ಸೌಲಭ್ಯಗಳು ಕಲ್ಪಿಸುವರೇ ಕಾದುನೋಡಬೇಕಾಗಿದೆ.

LEAVE A REPLY

Please enter your comment!
Please enter your name here