ಸರ್ಕಾರಿ ಶಾಲೆಗಳಿಗೂ ಬರುತ್ತೆ ಸ್ಮಾರ್ಟ್ ಕ್ಲಾಸ್..

0
169

ಬಳ್ಳಾರಿ,/ಬಳ್ಳಾರಿ-ಕರ್ನಾಟಕಾಂಧ್ರದ ಗಡಿ ಜಿಲ್ಲೆಯಾದ ಬಳ್ಳಾರಿಯ ಸರ್ಕಾರಿ ಪ್ರೌಢಶಾಲೆಗಳಿಗೂ ಇನ್ನು ಮುಂದೆ ಸ್ಮಾರ್ಟ್ ಕ್ಲಾಸ್ ಗಳು ಆರಂಭವಾಗಲಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಮಿತಿ ಸದಸ್ಯ ಮಹಾಂತೇಶ್ ಹಟ್ಟಿ ತಿಳಿಸಿದ್ದಾರೆ.

ಬಳ್ಳಾರಿಯಲ್ಲಿ ಸುದ್ದಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಡಿಭಾಗದ ಶಾಲೆಗಳಿಗೆ ಪೀಠೋಪಕರಣ, ಪಾಠೋಪಕರಣದ ಜೊತೆ ಸ್ಮಾರ್ಟ್ ಕ್ಲಾಸ್ ನಡೆಸಲು 25 ಶಾಲೆಗಳನ್ನು ಗುರುತಿಸಲಾಗುತ್ತದೆ. ಶಾಸಕರು ಮತ್ತು ಜಿಲ್ಲಾ ಪಂಚಾಯತ್ ಸದಸ್ಯರು ಅಂತಹ ಶಾಲೆಗಳನ್ನು ಗುರುತಿಸಿ ಡಿಸೆಂಬರ್ ಅಂತ್ಯದ ಒಳಗೆ ವರದಿ ನೀಡಲಿದ್ದಾರೆ.

ತಲಾ ಒಂದು ಶಾಲೆಗೆ ಒಂದು ಲಕ್ಷ ರೂಪಾಯಿಯಂತೆ ರೂ.25 ಲಕ್ಷ ಹಣವನ್ನು ಸರ್ಕಾರ ಪ್ರಾಧಿಕಾರದ ಮೂಲಕ ನೀಡಲಿದೆ. ಈ ಹಣ ನೇರವಾಗಿ ಜಿಲ್ಲಾ ಪಂಚಾಯತಿಗೆ ಜಮೆ ಆಗುತ್ತದೆ.
8, 9 ಮತ್ತು 10 ನೇ ತರಗತಿಯ ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿಗಳು ಹೊಂದಿರುವ ಆಯಾ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರ ಸಮ್ನುಖದಲ್ಲಿ ಸ್ಮಾರ್ಟ್ ಕ್ಲಾಸ್ ಗಾಗಿ ಲ್ಯಾಪ್ ಟಾಪ್, ಸ್ಕ್ರೀನ್ ಸೇರಿದಂತೆ ಅದಕ್ಕೆ ಬೇಕಾದ ಪರಿಕರಗಳನ್ನು ಒದಗಿಸಲಾಗುತ್ತದೆ. ಖಾಸಗಿ ಏಜೆನ್ಸಿಯವರು ಇದನ್ನು ನಿರ್ವಹಣೆ ಮಾಡಲಿದ್ದಾರೆ ಎಂದರು.

ಮೊಬೈಲ್ ಆ್ಯಪ್ ಮೂಲಕ ಆಧುನಿಕ ತಂತ್ರಾಂಶ ಆಧಾರದ ಅಡಿ ಮಕ್ಕಳಿಗೆ ಪ್ರಶ್ನೋತ್ತರ ಕಲಿಕೆ ಸುಲಭವಾಗಿ ಅರಿಯಲು ಈ ಯೋಜನೆ ಸಹಕಾರಿಯಾಗಲಿದೆ. ಕನ್ನಡದಲ್ಲಿ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಿದ್ದು ಗಡಿಭಾಗದ ವಿದ್ಯಾರ್ಥಿಗಳಿಗೆ ಅನುಕೂಲ‌ ಮಾಡಿಕೊಡುವುದಾಗಿ ಹೇಳಿದರು.

ಆಡಳಿತದಲ್ಲಿ ಅನ್ಯ ಭಾಷೆ ಬಳಸಿದರೆ ಕ್ರಮ.

ಗಡಿನಾಡಿನ ಜಿಲ್ಲೆಗಳಲ್ಲಿ ಸರ್ಕಾರಿ ಇಲಾಖೆಗಳ ಕಡತಗಳು ಕನ್ನಡದಲ್ಲಿಯೇ ಇರಬೇಕು. ಒಂದುವೇಳೆ ಕನ್ನಡ ಭಾಷೆ ಹೊರತುಪಡಿಸಿ ಅನ್ಯ ಭಾಷೆ ಬಳಕೆ ಮಾಡಿದರೆ ಅಂತಹ ಸರ್ಕಾರಿ ನೌಕರರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಕಲಬುರಗಿಯಲ್ಲಿ ಅನ್ಯ ಭಾಷೆ ಬಳಕೆ ಮಾಡಿದ್ದ ಅಧಿಕಾರಿಯೊಬ್ಬರ ಮೇಲೆ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಐಟಿ, ಬಿಟಿ ಯಂತಹ ಕ್ಷೇತ್ರಗಳಲ್ಲಿ ಮತ್ತು ಪ್ರವಾಸೋದ್ಯಮ ಇಲಾಖೆಯಲ್ಲಿ ಕನ್ನಡ ಶೇ 40 ರಷ್ಟು ಇದ್ದು, ಕನ್ನಡ ಕಡ್ಡಾಯ ಅನುಷ್ಠಾನಕ್ಕೆ ಸೂಚಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿದ್ಧರಾಮ‌ ಕಲ್ಮಠ, ಮುಖಂಡರಾದ ಬಿ.ಎಂ.ಪಾಟೀಲ್ ಮತ್ತು ಬಸವರಾಜ್ ಇದ್ದರು.

LEAVE A REPLY

Please enter your comment!
Please enter your name here