ಹಂದಿಗೋಡು ಸಂತ್ರಸ್ತರಿಗೆ ಸಮರ್ಪಕ ಸೌಲಭ್ಯ ಖಾತ್ರಿ.

0
130

ಶಿವಮೊಗ್ಗ/ಸಾಗರ: ಹಂದಿಗೋಡು ಕಾಯಿಲೆ ಸಂತ್ರಸ್ತರಿಗೆ ಸಮರ್ಪಕ ಆರೋಗ್ಯ ಸೇವೆ ಸೇರಿದಂತೆ ಸರ್ಕಾರದ ಎಲ್ಲಾ ಸೌಲಭ್ಯಗಳು ಸಮರ್ಪಕವಾಗಿ ದೊರೆಯುವುದನ್ನು ಖಾತ್ರಿಪಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾಗರ ತಾಲೂಕಿನ ಹಂದಿಗೋಡು ಗ್ರಾಮದಲ್ಲಿ ಮೆಟ್ರಿಕ್ ಪೂರ್ವ ಬಾಲಕ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಹಂದಿಗೋಡು ಸಂತ್ರಸ್ತರ ವಿಶೇಷ ಸಮಾಲೋಚನಾ ಸಭೆ ನಡೆಸಿದರು.

ಸಂತ್ರಸ್ತರಿಗೆ ಸರ್ಕಾರದಿಂದ ಸಾಮಾಜಿಕ ಭದ್ರತಾ ಯೋಜನೆಯಡಿ ದೊರಕುತ್ತಿರುವ ಪಿಂಚಣಿ ಬಗ್ಗೆ, ಆಹಾರ ಪಡಿತರ ವಿತರಣೆ ಬಗ್ಗೆ, ಸಂಚಾರಿ ಆರೋಗ್ಯ ಘಟಕದಿಂದ ದೊರೆಯುತ್ತಿರುವ ಸೌಲಭ್ಯಗಳ ಬಗ್ಗೆ ಜಿಲ್ಲಾಧಿಕಾರಿ ಅವರು ಮಾಹಿತಿ ಪಡೆದರು. ಹಂದಿಗೋಡು ಕಾಯಿಲೆ ನಿರ್ಮೂಲನೆಗಾಗಿ ಕಾರ್ಯನಿರ್ವಹಿಸುತ್ತಿರುವ ಗ್ರಾಮದ ಚಂದ್ರಶೇಖರ್ ಅವರು ವಾಸ್ತವ ಪರಿಸ್ಥಿತಿ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಹಂದಿಗೋಡು ಕಾಯಿಲೆಯ 211ಸಂತ್ರಸ್ತರಿದ್ದು, ಇವರ ಪೈಕಿ ಸಾಗರ ತಾಲೂಕಿನಲ್ಲಿ 163, ಸೊರಬ ತಾಲೂಕಿನಲ್ಲಿ 8, ಹೊಸನಗರ ತಾಲೂಕಿನಲ್ಲಿ 13 ಮತ್ತು ತೀರ್ಥಹಳ್ಳಿ ತಾಲೂಕಿನಲ್ಲಿ 20ಮಂದಿ ಇದ್ದಾರೆ. ಹಂದಿಗೋಡು ಗ್ರಾಮದಲ್ಲಿ ಒಟ್ಟು 16 ಮಂದಿ ಈ ಖಾಯಿಲೆ ಪೀಡಿತರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ತಿಳಿಸಿದರು.

ಕಳೆದ 10ವರ್ಷಗಳಲ್ಲಿ ಈ ಕಾಯಿಲೆ ಮರುಕಳಿಸದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಂಚಾರಿ ಆರೋಗ್ಯ ಘಟಕಗಳ ಸೇವೆ, ಪ್ರತಿ ತಿಂಗಳು ಆರೋಗ್ಯ ತಪಾಸಣಾ ಶಿಬಿರ, ಸಮರ್ಪಕ ಔಷಧಿಗಳ ಸರಬರಾಜು ಮಾಡುತ್ತಿದ್ದು, ಇದರಿಂದಾಗಿ ಈ ಕಾಯಿಲೆ ಮತ್ತೆ ಕಾಣಿಸಿಕೊಳ್ಳದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಅವರು ತಿಳಿಸಿದರು.

ಸರ್ಕಾರದಿಂದ ದೊರೆಯುತ್ತಿರುವ ಮಾಸಿಕ ಪಿಂಚಣಿ ಕುಟುಂಬ ನಿರ್ವಹಣೆಗೆ ಸಾಲುತ್ತಿಲ್ಲ ಎಂದು ಸಂತ್ರಸ್ತರು ಮಾಡಿದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಅವರು, ಈ ಕುರಿತು ಸಂತ್ರಸ್ತ ಕುಟುಂಬಗಳ ಕುರಿತು ಸಮಗ್ರ ವರದಿಯನ್ನು ತಯಾರಿಸಿ ವಿಶೇಷ ಯೋಜನೆಯಡಿ ಸೌಲಭ್ಯ ಕಲ್ಪಿಸಲು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಪಡಿತರ ವಿತರಣೆ ಕೇಂದ್ರ ದೂರವಿದ್ದು, ಮಂಡಿ ನೋವು, ಕೀಲು ನೋವು ಕಾರಣ ಅಲ್ಲಿಯವರೆಗೆ ನಡೆದುಕೊಂಡು ಹೋಗಿ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಕೆಲವು ಸಂತ್ರಸ್ತರು ಅಹವಾಲು ಸಲ್ಲಿಸಿದರು. ಅಂತಹ ಕುಟುಂಬಗಳಿಗೆ ನೇರವಾಗಿ ಅವರ ಮನೆಗಳಿಗೆ ಪಡಿತರ ತಲುಪಿಸಲು ವ್ಯವಸ್ಥೆ ಮಾಡುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.

ಹಂದಿಗೋಡು ಸಂತ್ರಸ್ತರ ಆರ್ಥಿಕ ಸ್ವಾವಲಂಬನೆ ಸಾಧ್ಯವಾಗುವಂತೆ ಯಾವುದಾದರೂ ಗುಡಿ ಕೈಗಾರಿಕೆಗಳನ್ನು ಆರಂಭಿಸುವ ಕುರಿತು ಎಲ್ಲಾ ಕುಟುಂಬಗಳನ್ನು ಭೇಟಿ ಮಾಡಿ ವರದಿಯನ್ನು ಸಲ್ಲಿಸುವಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಸೂಚನೆ ನೀಡಿದರು.

ಆಸ್ಪತ್ರೆಗೆ ಭೇಟಿ: ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅವರು ಸಾಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಸೌಲಭ್ಯಗಳ ಪರಿಶೀಲನೆ ನಡೆಸಿದರು.

ಔಷಧಿ ವಿತರಣಾ ಕೊಠಡಿಯು ಚಿಕ್ಕದಾಗಿದ್ದು, ಹೆಲ್ಪ್ ಡೆಸ್ಕ್‍ಗಾಗಿ ಮೀಸಲಾಗಿಟ್ಟಿರುವ ಖಾಲಿ ಜಾಗವನ್ನು ಇದಕ್ಕಾಗಿ ಬಳಸಿಕೊಳ್ಳಬಹುದು. ಹೆರಿಗೆ ಕೊಠಡಿಯ ಹೊರ ಭಾಗದಲ್ಲಿ ರೋಗಿಯ ಕಡೆಯವರು ಕುಳಿತುಕೊಳ್ಳಲು ಸಾಧ್ಯವಾಗುವಂತೆ ಆಸನದ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು.

LEAVE A REPLY

Please enter your comment!
Please enter your name here