ಹಂಪಿಗೆ ಪ್ರವಾಸಿಗರನ್ನು ಸೆಳೆಯುತ್ತಿರುವ ಗುಲ್ ಮೊಹರ್ ಸುಂದರಿಯರು

0
373

ಬಳ್ಳಾರಿ /ಹೊಸಪೇಟೆ: ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ…. ಕಾಣಿಸದೇ ಕಲ್ಲು ಕಲ್ಲಿನಲಿ ಹಂಪೆಯ ಗುಡಿ….!! ದಕ್ಷಿಣ ಭಾರತದ ಪ್ರಖ್ಯಾತ ಗಾಯಕಿ ಕೆ.ಎಸ್. ಚಿತ್ರಾ ಹಾಡಿದ ಜಗತ್ರೀದ್ಧವಾದ ಹಾಡನ್ನ ಸಾಮಾನ್ಯವಾಗಿ ಎಲ್ಲರೂ ಆಲಿಸಿರುತ್ತೀರಿ. ಅಂದಹಾಗೆ, ಹಂಪಿಯಲ್ಲಿ ಕೇವಲ ಕಲ್ಲುಬಂಡೆಗಳಲ್ಲಿ ಅರಳಿದ ಗುಡಿ ಗುಂಡಾರಗಳಿಲ್ಲ. ಅಲ್ಲಿ ನಿಸರ್ಗ ರಮಣೀಯವಾದ ಗಿಡಮರಗಳೂ ಇವೆ. ಎಂತಹ ಬಿರು ಬಿಸಿಲಿನಲ್ಲೂ ಹಂಪಿ ತನ್ನ ಸೌಂದರ್ಯವನ್ನು, ಸೋಜಿಗವನ್ನು ಕಾಪಾಡಿಕೊಂಡೇ ಬರುತ್ತಿದೆ. ಇಲ್ಲಿ ಹರಿವ ತೊರೆ, ತೊನೆವ ಬಾಳೆ, ಕಬ್ಬುಗಳ ಜೊತೆ ಗುಲ್ ಮೊಹರ್ ನಂತಹ ನಾಚಿ ನೀರಾಗುವ, ತರುಣಿಯರಂತೆ ಕಂಗೊಳಿಸುವ ಗಿಡ ಮರಗಳೂ ಇವೆ.

ನೀವು ಹಂಪಿಗೆ ಬರೋದಾದ್ರೆ ಕೇವಲ ಮಂದಿರಗಳನ್ನಷ್ಟೇ ನೋಡಲು ಬರಬೇಡಿ. ಇಲ್ಲಿ ಆಧ್ಯಾತ್ಮದ ಔನ್ನತ್ಯ ಸಾರುವ ಸ್ಮಾರಕಗಳು, ಜ್ಞಾನದ ಹಸಿವು ನೀಗುವ ಐತಿಹ್ಯಗಳು, ಕಣ್ಣು ಕೋರೈಸುವ ಪ್ರಕೃತಿ ಸೌಂದರ್ಯ ಸೂಸುವ ಗಿಡ-ಮರಗಳನ್ನೂ ನೋಡಿ ಆಸ್ವಾದಿಸಲು ಬನ್ನಿ.

ಹೊಸಪೇಟೆ, ಕಂಪ್ಲಿ ಮಾರ್ಗವಾಗಿ ಬರುವ ಪ್ರವಾಸಿಗರಿಗೆ ಮೊದಲು ಇಲ್ಲಿ ಸೂಜಿಗಲ್ಲಿನಂತೆ ಆಕರ್ಷಿಸುವುದೇ ಈ ಕೆಂಪನೆಯ ಕೋಮಲೆಯರಾದ ಗುಲ್ ಮೊಹರ್ ಸುಂದರಾಂಗಿಯರು. ನೀವು ನಿಸರ್ಗವನ್ನು ಆಸ್ವಾದಿಸುವವರಾಗಿದ್ದರೆ ಇಷ್ಟು ಸಾಕು ನೀವು ಹಂಪಿಯ ಸೋಜಿಗದ ಸೌಂದರ್ಯ ಸವಿಯಲು.

ಇಷ್ಟಕ್ಕೂ ಹಂಪಿ ಪರಿಸರದುದ್ದಕ್ಕೂ ಇಲ್ಲಿ ಕಲೆಯನ್ನು ಹೊರ ಸೂಸುವ ಕಲ್ಲು ಬಂಡೆಗಳಿರುವಂತೆಯೇ ಕಮಲಾಪುರ, ಕಡ್ಡಿರಾಂಪುರ ಮತ್ತು ಸುತ್ತಲಿನ ಗ್ರಾಮಗಳಿಂದ ಬರುವಾಗ ಸೀಮಂತಿನಿಯಂತೆ ಕಂಗೊಳಿಸುವ ಇಲ್ಲಿನ ಪ್ರಕೃತಿ ಕೂಡ ಮನಸ್ಸಿಗೆ ಮುದ ನೀಡುತ್ತದೆ. ಇದನ್ನು ಆಸ್ವಾದಿಸುವ ಮನಸ್ಸು ಮತ್ತು ಭಾವನೆಗಳು ನಿಮ್ಮದಾಗಿರಬೇಕಷ್ಟೇ.

ಇಲ್ಲಿ ವಿಜಯ ನಗರ ಆಳರಸರು ಬೆಳೆಸಿದ ಅಪರೂಪದ ಗಿಡಮರಗಳೂ ಸೇರಿದಂತೆ ಮಾವು, ಬೇವು, ತೆಂಗು, ಸುಬಾಹುಲು, ಬಸಿರೆ ಸೇರಿದಂತೆ ವಿವಿಧ ಜಾತಿಯ, ವೈವಿಧ್ಯಮಯ ಗಿಡಮರಗಳಿವೆ.

ಅಂದಹಾಗೆ, ಈ ಬಿರು ಬಿಸಿಲಲ್ಲೂ ಈ ಗಿಡಮರಗಳು ಪ್ರವಾಸಿಗರಿಗೆ ತಂಪಾದ ಗಾಳಿ ಬೀಸುವ, ಸೊಂಪಾದ ನೆರಳು ನೀಡುವ ಮೂಲಕ ಆಹ್ಲಾದತೆಯನ್ನು ನೀಡುತ್ತಿವೆ. ನೀವೂ…. ಒಂದ್ಸಾರಿ ಹಂಪಿಗೆ ಬಂದು ನೋಡಿ. ಬಿಸಿಲಲ್ಲೂ ಇಲ್ಲಿನ ಗಿಡ-ಮರಗಳು ಹೇಗೆ ನಿಮ್ಮನ್ನು ಮುದಗೊಳಿಸುತ್ತವೆ ಅಂತಾ.

ಅಂದಹಾಗೆ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಯುನೆಸ್ಕೋ ವಿಶ್ವ ಪರಂಪರಾ ಪಟ್ಟಿಗೆ ಸೇರಿದ್ದ ಈ ಹಂಪಿಯನ್ನು ಇನ್ನಷ್ಟು ಸುಂದರೀಕರಣಗೊಳಿಸಲು ಅಪರೂಪದ ಸಸ್ಯ ಜನ್ಯ ಗಳ ಪರಿಚಯ ಮಾಡಿಕೊಡಬೇಕಿದೆ.

ಇಡೀ ಜಗತ್ತಿನಾದ್ಯಂತ ಭಾರತಕ್ಕೆ ಮತ್ತು ಭಾರತದ ಘನತೆಗೆ ಶತಮಾನಗಳಿಂದಲೂ ಕಿರೀಟಪ್ರಾಯವಾದ ಹಂಪಿ ಪರಿಸರದಲ್ಲಿ ಇನ್ನಷ್ಟು ಗಿಡ-ಮರಗಳನ್ನು ನೆಡಬೇಕಿದೆ. ಈ ದಿಸೆಯಲ್ಲಿ ಪುರಾತನ ಪ್ರಾಚ್ಯವಸ್ತು ಇಲಾಖೆ, ಪ್ರವಾಸೋದ್ಯಮ ಇಲಾಖೆಗಳು ಯೋಜನೆ ರೂಪಿಸಿ ಹಂಪಿಯ ಪ್ರಕೃತಿ ಪರಿಸರವನ್ನು ಉಳಿಸಬೇಕಿದೆ ಎಂದು  ಸ್ಥಳೀಯ ನಿವಾಸಿ ಗುರುನಾಥ ಮಾತನಾಡಿದ್ದಾರೆ.

LEAVE A REPLY

Please enter your comment!
Please enter your name here