ಹಂಪಿಯಲ್ಲಿ ಮೂಲಭೂತ ಸೌಕರ್ಯದ ಕೊರತೆ

0
199

ಬಳ್ಳಾರಿ/ ಹೊಸಪೇಟೆ: ಹಂಪಿಯಲ್ಲಿ ಮೂಲಭೂತ ಸೌಕರ್ಯ ಇಲ್ಲದೆ ಜನರಿಗೆ ತೊಂದರೆ ಸರಕಾರ ಗಮನಹರಿಸುತ್ತಿಲ್ಲ ಸ್ವಾಮೀಜಿಯವರು ಆರೋಪ

ತೆಲಂಗಾಣ ರಾಜ್ಯದ ಮುಕ್ತಲ್‌ನಲ್ಲಿ ಕಾಮಧೇನು ವಿವಿಯನ್ನು ಶ್ರೀಮಠದ ವತಿಯಿಂದ ಸ್ಥಾಪಿಸಲಾಗುತ್ತಿದೆ ಎಂದು ಹಂಪಿಯ ವಿದ್ಯಾರಣ್ಯ ಪೀಠಾಧೀಪತಿ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಹೇಳಿದರು.

ಹಿಂದೂ ಜಾಗರಣ ವೇದಿಕೆಯ ಉತ್ತರ ಕರ್ನಾಟಕ ಪ್ರಾಂತದ ವತಿಯಿಂದ ಹಂಪಿಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಗೋ ಸಂರಕ್ಷಣೆ ಹಾಗೂ ರೈತರ ಸಂರಕ್ಷಣೆಗಾಗಿ ಸರಕಾರದ ನೆರವಿಲ್ಲದೇ, ದಾನಿಗಳ ನೆರವಿನಿಂದ ಶ್ರೀಮಠದ 1700 ಎಕರೆ ಜಾಗದಲ್ಲಿ ತೆಲಂಗಾಣದ ಮುಕ್ತಲ್‌ನಲ್ಲಿ ಕಾಮಧೇನು ವಿವಿ ಸ್ಥಾಪಿಸಲಾಗುವುದು. ಜತೆಗೆ 200 ಎಕರೆ ಪ್ರದೇಶದಲ್ಲಿ ಸಂಸ್ಕೃತ ವಿವಿ ಸ್ಥಾಪಿಸಲಾಗುವುದು. ಹಿಂದೂ ಸಂಸ್ಕೃತಿಯ ಸಂರಕ್ಷಣೆಗಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಹಂಪಿಯನ್ನು ಹಾಳು ಹಂಪೆ ಎಂದು ಕರೆಯಬಾರದು. ಹಂಪಿಯನ್ನು ಸ್ವರ್ಣ ಹಂಪಿಯನ್ನಾಗಿ ಮರು ಸ್ಥಾಪಿಸಬೇಕು. ಹಂಪಿಯನ್ನು ವಾಸ್ತು, ವಿಜ್ಞಾನ, ಪೌರಾಣಿಕ, ಇತಿಹಾಸ, ಧಾರ್ಮಿಕ ದೃಷ್ಟಿಕೋನದೊಂದಿಗೆ ನೋಡಬೇಕು. ಹಂಪಿಯಲ್ಲಿ ವಿಜ್ಞಾನ ಅಡಗಿದೆ. ದೇಗುಲಗಳ ಸಂರಚನೆ, ನೀರಾವರಿ ವ್ಯವಸ್ಥೆಯನ್ನು ಅವಲೋಕಿಸಿದರೆ, ಆಗಿನ ತಂತ್ರಜ್ಞಾನ ತಿಳಿಯಲಿದೆ. ಈ ಬಗ್ಗೆ ಹೆಚ್ಚು ಬೆಳಕು ಚೆಲ್ಲಬೇಕು. ಹಂಪಿಯ ಭೂ ಪ್ರದೇಶ ಸಂಪೂರ್ಣ ವಾಸ್ತುವಿನಿಂದ ಕೂಡಿದೆ ಎಂಬುದನ್ನು ಅರಿಯಬೇಕು ಎಂದರು.

ಹಂಪಿಯ ಇತಿಹಾಸವನ್ನು ಬರೀ ಶ್ರೀಕೃಷ್ಣ ದೇವರಾಯರ ಸುವರ್ಣಯುಗದಿಂದ ಮಾತ್ರ ಅವಲೋಕಿಸಲಾಗುತ್ತಿದೆ. ಆದರೆ, ಮಲ್ಲಿಕಾಫರ್‌ನ ಒತ್ತಡದಿಂದ ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದಿದ್ದ ಹಕ್ಕ-ಬುಕ್ಕ ಸಹೋದರರನ್ನು ಮತ್ತೆ ಹಿಂದೂ ಧರ್ಮಕ್ಕೆ ಮತಾಂತರಗೊಳಿಸಿ, ಶ್ರೀ ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ್ದರು. ಈ ಬಗೆಗಿನ ಇತಿಹಾಸವನ್ನು ಎಲ್ಲರೂ ತಿಳಿಯಬೇಕು ಎಂದರು.

ವಿಜಯನಗರ ಸಾಮ್ರಾಜ್ಯ ದಕ್ಷಿಣ ಭಾರತದ ಕರ್ನಾಟಕ ಸೇರಿದಂತೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಉತ್ತರದ ಮಹಾರಾಷ್ಟ್ರ, ಗೋವಾ, ಪಾಂಡಿಚೇರಿಯವರೆಗೆ ವ್ಯಾಪಿಸಿತ್ತು. ಹೀಗಾಗಿ ಈ ರಾಜ್ಯಗಳ ಮೂಲ ನೆಲೆಯಾಗಿ ಹಾಗೂ ರಾಜಧಾನಿಯಾಗಿ ಕಂಗೊಳಿಸಿರುವ ಹಂಪಿಯ ಚರಿತ್ರೆಯನ್ನು ಮರೆಯುತ್ತಿದೆ. ಹೀಗಾಗಿ ಈ ರಾಜ್ಯಗಳನ್ನು ಒಗ್ಗೂಡಿಸಿ; ಸಂಸ್ಥಾಪನಾ ದಿನಾಚರಣೆ ಆಚರಿಸಬೇಕು ಎಂದರು.

ಶ್ರೀಕೃಷ್ಣದೇವರಾಯನ ಪೂರ್ವದಲ್ಲೆ ಶ್ರೀ ವಿದ್ಯಾರಣ್ಯರ ಕಾಲದಲ್ಲೆ ಶ್ರೀ ವಿರೂಪಾಕ್ಷೇಶ್ವರ ದೇಗುಲದ ಮುಖ್ಯಗೋಪುರ ನಿರ್ಮಿಸಲಾಗಿತ್ತು. ಹಂಪಿಗೆ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನಲೆಯಿದೆ. ಹೀಗಾಗಿ ಹಂಪಿಯನ್ನು ಸ್ವರ್ಣ ಹಂಪಿಯನ್ನಾಗಿ ಮರು ರೂಪಿಸಬೇಕಿದೆ ಎಂದರು. ಹಂಪಿಯಲ್ಲಿ ಒಂದು ಶೌಚಾಲಯ ನಿರ್ಮಾಣ ಮಾಡಲೂ ಅಧಿಕಾರಿಗಳು ಅಡ್ಡಗಾಲು ಹಾಕುತ್ತಾರೆ. ಯುನೆಸ್ಕೊ ನಮ್ಮ ಪಾಲಿಗೆ ಅಲ್‌ಖೈದಾ ಇದ್ದಂತೆ. ಮುಜರಾಯಿ ಇಲಾಖೆ ಲಷ್ಕರೆ ತೊಯಿಬಾ ಇದ್ದಂತೆ ಆಗಿದೆ. ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಪುರಾತತ್ವ ಇಲಾಖೆಗಳು ಕೂಡ ಅಡ್ಡಗಾಲಾಗಿವೆ ಎಂದರು.

ಭಾರತೀಯ ಇತಿಹಾಸ ಸಂಕಲನ ಸಮಿತಿಯ ಕೇಂದ್ರ ಮಾರ್ಗದರ್ಶಕ ಹರಿಭಾವು ವಝೆ ಮಾತನಾಡಿ, ಮಹಾರಾಷ್ಟ್ರದ ರಾಯಪುರ ವಿವಿಯ ಮರು ನಿರ್ಮಾಣಕ್ಕೆ ಅಲ್ಲಿನ ಸಿಎಂ ದೇವೇಂದ್ರ ಫಡ್ನವಿಸ್ 600 ಕೋಟಿ ರೂ. ಬಿಡುಗಡೆಗೊಳಿಸಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ್‌ರಿಗೆ ಪ್ರೇರಣೆಯಾಗಿರುವ ಹಂಪಿಯ ಮರು ನಿರ್ಮಾಣಕ್ಕೆ ರಾಜ್ಯ ಸರಕಾರ 11 ಸಾವಿರ ಕೋಟಿ ರೂ. ಬಿಡುಗಡೆಗೊಳಿಸಬೇಕು. ಈ ಮೂಲಕ ಹಂಪಿಯ ಸ್ಮಾರಕಗಳನ್ನು ಜಿರ್ಣೋದ್ಧಾರಗೊಳಿಸಬೇಕು ಎಂದರು.

ಆನೆಗೊಂದಿಯ ರಾಜವಂಶಸ್ಥ ರಾಜಾ ಶ್ರೀಕೃಷ್ಣದೇವರಾಯ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ಉಪಾಧ್ಯಕ್ಷೆ ರಾಜಮಾತಾ ಚಂದ್ರಕಾಂತಾದೇವಿ, ಹಿಂದೂ ಜಾಗರಣ ವೇದಿಕೆಯ ಉತ್ತರ ಕರ್ನಾಟಕ ಪ್ರಾಂತದ ಅಧ್ಯಕ್ಷ ರಾಮಚಂದ್ರ ಜಿ. ಮಟ್ಟಿ ಇದ್ದರು. ಹೂವಿನಹಡಗಲಿಯ ನಿವೃತ್ತ ಪ್ರಾಚಾರ್ಯ ಟಿ. ಪರಮೇಶ್ವರಪ್ಪ, ತುಮಕೂರು ವಿವಿಯ ಪ್ರಾಧ್ಯಾಪಕ ಡಾ. ಎಂ. ಕೊಟ್ರೇಶ್ ಗೋಷ್ಠಿಗಳಲ್ಲಿ ವಿಷಯಮಂಡಿಸಿದರು. ಹಿಂದೂ ಜಾಗರಣ ವೇದಿಕೆಯ ಬಡಿಗೇರ್ ಮಂಜುನಾಥ್, ಮೌನೇಶ್ ನಿರ್ವಹಿಸಿದರು. ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ, ಶ್ರೀ ಪಂಪಾದೇವಿ, ಶ್ರೀ ಭುವನೇಶ್ವರಿದೇವಿ ಹಾಗೂ ಶ್ರೀ ವಿದ್ಯಾರಣ್ಯ ಸ್ವಾಮೀಜಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಶೋಭಾಯಾತ್ರೆ ನಡೆಸಲಾಯಿತು.

LEAVE A REPLY

Please enter your comment!
Please enter your name here